ವಿಜಯಪುರ : ನೇತ್ರ ಶಸ್ತ್ರಚಿಕಿತ್ಸೆಯ ಸಾಧನೆಗಾಗಿ ಈಚೆಗಷ್ಟೇ ಸ್ವಾತಂತ್ರ್ಯ ಸುವರ್ಣ ಪ್ರಶಸ್ತಿ ಸ್ವೀಕರಿಸಿರುವ ನೇತ್ರ ತಜ್ಞವೈದ್ಯ ಡಾ.ಪ್ರಭುಗೌಡ ಅವರ ಶತಾಯುಷಿ ಅಜ್ಜಿ ನಿಧನರಾಗಿದ್ದು, ಮೊಮ್ಮಗನ ಆಸ್ಪತ್ರೆಗೆ ನೇತ್ರದಾನ ಮಾಡಿದ್ದಾರೆ.
ಜಿಲ್ಲೆಯ ತಾಳಿಕೊಟಿ ತಾಲೂಕಿನ ಚಾಬನೂರು ಗ್ರಾಮದ ಸಿದ್ದಮ್ಮ ಗೌಡತಿ ಪಾಟೀಲ ಬುಧವಾರ ಬೆಳಿಗ್ಗೆ ಸ್ವಗ್ರಾಮದಲ್ಲಿ ವಯೋಸಹಜ ಕಾಯಿಲೆಯಿಂದ ನಿಧಾನರಾದರು.
ಮೂರು ಜನ ಗಂಡು, ಮೂರು ಜನ ಹೆಣ್ಣು ಮಕ್ಕಳು, ಮೊಮ್ಮಕಳನ್ನು ಹೊಂದಿರುವ ಶಾತಾಯುಷಿ ಸಿದ್ದಮ್ಮ ಅವರು ತಮ್ಮ ಇಚ್ಛೆಯಂತೆ ಮರಣಾನಂತರ ತಮ್ಮ ಕಣ್ಣುಗಳನ್ನು ತಮ್ಮ ಮೊಮ್ಮಗ ನೇತ್ರತಜ್ಞ ಡಾ.ಪ್ರಭುಗೌಡ ಅವರ ಅನುಗ್ರಹ ನೇತ್ರ ಭಂಡಾರಕ್ಕೆ ದಾನಮಾಡಿದ್ದರು.
ಹೀಗಾಗಿ ಅಜ್ಜಿಯ ಇಚ್ಛೆಯಂತೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈಧ್ಯ ದಂಪತಿ ಡಾ.ಪ್ರಭುಗೌಡ ಹಾಗೂ ಡಾ.ಮಾಲಿನಿ ಅವರು ಅಜ್ಜಿಯ ಸಾವಿನ ಸುದ್ದಿ ತಿಳಿಯುತ್ತಲೇ ಚಬನೂರು ಗ್ರಾಮಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮೂಲಕ ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು.
ಶತಾಯುಷಿ ಸಿದ್ದಮ್ಮ ಅವರ ಎರಡು ಕಣ್ಣುಗಳನ್ನು ವಿಜಯಪುರ ಅನುಗ್ರಹ ನೇತ್ರ ಭಂಡಾರದಲ್ಲಿ ಶೇಖರಿಸಿ ಇಡಲಾಗಿದೆ.
ಮುಂದಿನ ಒಂದೆರಡು ದಿನಗಳಲ್ಲಿ ಕಣ್ಣು ಕಸಿಗೆ ಕಾಯುತ್ತಿರುವ ಇಬ್ಬರು ಅರ್ಹರಿಗೆ ತಮ್ಮದೇ ಕಣ್ಣಿನ ಆಸ್ಪತ್ರೆಯಲ್ಲಿ ಅಜ್ಜಿಯ ನೇತ್ರ ಅಳವಡಿಸುವುದಾಗಿ ಡಾ.ಪ್ರಭುಗೌಡ ಪಾಟೀಲ ಉದಯವಾಣಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.