Advertisement

ಅತಿವೃಷ್ಟಿ-ಅನಾವೃಷ್ಟಿಯಲ್ಲಿ ಕೈಹಿಡಿದ ರೇಷ್ಮೆ ಬೆಳೆ

10:16 AM Dec 04, 2021 | Team Udayavani |

ಆಳಂದ: ಪ್ರಸಕ್ತ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬಾಧಿಸಿದ ಅತಿವೃಷ್ಟಿ-ಅನಾವೃಷ್ಟಿಗೆ ಬಹುತೇಕ ವಾಣಿಜ್ಯ ಬೆಳೆಗಳ ಉತ್ಪಾದನೆಯಲ್ಲಿ ನಷ್ಟ ಅನುಭವಿಸಿದ ರೈತರ ನಡುವೆ ರೇಷ್ಮೆ ಬೆಳೆಗಾರರು ಈ ಬಾರಿ ಉತ್ತಮ ಫಸಲು ಪಡೆದು, ಆರ್ಥಿಕ ನಷ್ಟದಿಂದ ಪಾರಾಗಿದ್ದಾರೆ.

Advertisement

ತಾಲೂಕಿನಲ್ಲಿ 419 ಮಂದಿ ರೇಷ್ಮೆ ಬೆಳೆ ಗಾರರು ಒಂದು ವರ್ಷದಿಂದ ಅಂದಾಜಿ ನಂತೆ 53574 ಕೆ.ಜಿ ರೇಷ್ಮೆ ಗೂಡು ಉತ್ಪಾದನೆ ಕೈಗೊಂಡು ಸುಮಾರು 2 ಕೋಟಿ ರೂ.ಗೂ ಅಧಿಕ ಆದಾಯ ಪಡೆಯುತ್ತಿದ್ದಾರೆ ಎಂದು ರೇಷ್ಮೆ ಇಲಾಖೆ ಅಂದಾಜಿಸಿದೆ. ತಾಲೂಕಿನ ಹಳ್ಳಿಸಲಗರ, ಚಲಗೇರಾ, ನಿಂದಳ್ಳಿ, ದರ್ಗಾಶಿರೂರ, ನಿಂಬರಗಾ, ಮಾಡಿಯಾಳ, ಕುಣಿ ಸಂಗಾವಿ ದೇಗಾಂವ ಗ್ರಾಮ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುಮಾರು 35 ವರ್ಷಗಳಿಂದಲೂ ಇಲಾಖೆಯ ಸೌಲಭ್ಯಗಳೊಂದಿಗೆ ರೇಷ್ಮೆ ಕೃಷಿಯಲ್ಲಿ ಆಯ್ದ ರೈತರು ಮುಂದುವರಿದಿದ್ದು, ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆಯುತ್ತಿದ್ದಾರೆ.

ಕೋವಿಡ್‌-19 ಆವರಿಸಿ ಲಾಕ್‌ಡೌನ್‌ ವೇಳೆ ನೂಲು ಬಿಚ್ಚಾಣಿಕೆದಾರರು ಘಟಕ ಗಳನ್ನು ಸ್ಥಗಿತಗೊಳಿಸಿದ್ದರಿಂದ ರೇಷ್ಮೆ ಬೆಳೆ ಗಾರರು ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿ ದಿನದೊಡುವಂತೆ ಆಗಿತ್ತು. ಆನಂತರ ರೈತರು ತಮಗೆ ಬೇಕಾದ ಮಾರುಕಟ್ಟೆಗೆ ತೆರಳಿ ರೇಷ್ಮೆ ಗೂಡು ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಬೆಂಗಳೂರಿನ ರಾಮನಗರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 702ರೂ. ವರೆಗೂ ಬೆಲೆ ದೊರಕಿದೆ. ಹೀಗೆ ಪ್ರಸಕ್ತ ವರ್ಷದಲ್ಲಿ ಬೆಳೆಗಾರರಿಗೆ ಸರಾಸರಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದ ನಡುವೆಯೂ ಉತ್ತಮ ಬೆಲೆ ಕೈಸೇರಿ ಆರ್ಥಿಕವಾಗಿ ರೇಷ್ಮೆ ಬೆಳೆ ತೃಪ್ತಿ ನೀಡಿದೆ.

ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಶುಕ್ರವಾರ ನಿಂಗದಳ್ಳಿಯ ಮಲ್ಲಿಕಾರ್ಜುನ ಗುರುಶಾಂತಪ್ಪ ಸುಗಮಳೆ ಅವರ ರೇಷ್ಮೆ ಗೂಡು ಕೆ.ಜಿ.ಗೆ 658ರೂ.ಗಳಂತೆ ಮಾರಾಟವಾಗಿದೆ. ಇನ್ನೊಬ್ಬ ರೈತ ಬಿ.ಜಿ. ಪಾಟೀಲ ಅವರ ನೂರು ಕೆ.ಜಿಗೆ, ತಲಾ ಕೆ.ಜಿಗೆ 702ರೂ. ಬೆಲೆ, ಶಿವರಾಜ ಬಿ. ಸುಗಳಮಳೆ ಅವರ ರೇಷ್ಮೆ ಗೂಡು 156 ಕೆ.ಜಿ ತಲಾ 682ರೂ.ದಂತೆ ಮಾರಾಟವಾಗುತ್ತಿದೆ. ನಿಂಗದಳ್ಳಿ ರೈತ ಮಲ್ಲಿಕಾರ್ಜುನ ಗುರು ಶಾಂತಪ್ಪ ಸುಗಮಳೆ ಅವರು ತಮ್ಮ ಒಂದು ಹೆಕ್ಟೇರ್‌ ರೇಷ್ಮೆ ಬೆಳೆ ಬೆಳೆದ 400 ಮೊಟ್ಟೆಗೆ 280ಕೆ.ಜಿ ರೇಷ್ಮೆಗೂಡು ಬೆಳೆದು 658 ರೂಪಾಯಿ ಪ್ರತಿ ಕೆಜಿಯಂತೆ 1.75 ಲಕ್ಷ ರೂಪಾಯಿ ಲಾಭಗಳಿಕೆ ಯಾಗಿದ್ದು, ಇದಕ್ಕೆ ಆರ್ಥಿಕವಾಗಿ ಕೂಲಿಯ ವೆಚ್ಚ 20 ಸಾವಿರ ರೂ., ಚಾಕಿ ಹೂಳು ಖರೀದಿಗೆ 12 ಸಾವಿರ ರೂ., ಗೂಡು ಮಾರಾಟಕ್ಕೆ 8 ಸಾವಿರ ರೂ. ಸೇರಿ ಒಟ್ಟು 38 ಸಾವಿರ ರೂ. ಖರ್ಚು ತೆಗೆದರೆ 1ಲಕ್ಷ 37 ಸಾವಿರ ರೂ. ಲಾಭ ದೊರೆತಿದೆ.

ಇದನ್ನೂ ಓದಿ:ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

Advertisement

ಹೀಗೆ ಎಲ್ಲ ರೈತರು ಪ್ರತಿ ಎರಡು ತಿಂಗಳಿಗೊಮ್ಮೆ ವರ್ಷಕ್ಕೆ ಆರು ಬೆಳೆ ಬೆಳೆಯುತ್ತಿದ್ದಾರೆ. ರೇಷ್ಮೆ ಉತ್ಪಾದನೆಯಲ್ಲಿ ತಾಲೂಕಿನ ಆಳಂದ ಹಾಗೂ ಮಾದನಹಿಪ್ಪರಗಾ ವಲಯ ದಲ್ಲಿ ಎರಡು ತಾಂತ್ರಿಕ ಸೇವಾ ಕೇಂದ್ರಗಳ ಕಾರ್ಯನಿರ್ವಹಿಸುತ್ತಿವೆ. ಇವುಗಳ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದ ನವೆಂಬರ್‌ ಅಂತ್ಯದ ವರೆಗೆ ಸಿಎಸ್‌ಆರ್‌ ಬಿ. ತಳಿ, ರೇಷ್ಮೆ ಮೊಟ್ಟೆ ತಾಲೂಕಿನಲ್ಲಿ ಚಾಕಿಯಾದ ಒಟ್ಟು 79.650 ಮೊಟ್ಟೆಗಳಲ್ಲಿ 53574 ಕೆ.ಜಿ. ರೇಷ್ಮೆ ಗೂಡು ಉತ್ಪಾದನೆಯಾಗಿ ಮಾರಾಟವಾಗಿದೆ.

ಹಿಪ್ಪೆ ನೆರಳೆ ಕ್ಷೇತ್ರ ಒಟ್ಟು 233.86 ಹೆಕ್ಟೇರ್‌ ಪೈಕಿ 419 ರೇಷ್ಮೆ ಬೆಳೆಗಾರರಿದ್ದು, 41 ಮಂದಿ ಪರಿಶಿಷ್ಟ ಜಾತಿ ಜನರು ಸೇರಿ ಕೃಷಿ ಮಾಡಿದ್ದು, ಸುಮಾರು 2 ಕೋಟಿ ರೂ.ಗೂ ಅಧಿಕವಾಗಿ ತಾಲೂಕಿನ ರೈತರಿಗೆ ಆದಾಯ ಕೈಸೇರಿದೆ. ನವೆಂಬರ್‌ ಅಂತ್ಯಕ್ಕೆ 29.59 ಹೆಕ್ಟೇರ್‌ ಹೊಸ ನಾಟಿಯಾಗಿ ಒಟ್ಟು ಶೇ. 60ರಷ್ಟು ಸಾಧನೆಯಾಗಿದೆ. ಇದಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಸ ತಾಂತ್ರಿಕ ಮಾಹಿತಿಗಳನ್ನು ಬೆಳೆಗಾರರಿಗೆ ಸಕಾಲಕ್ಕೆ ನೀಡಿ ಅಧಿಕ ಇಳುವರಿಗೆ ಒತ್ತು ನೀಡಿದ್ದು. ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ.

ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಹೊಸ ತಾಂತ್ರಿಕತೆಯೊಂದಿಗೆ ರೇಷ್ಮೆ ಬೆಳೆಯಲು ಮುಂದಾದರೆ ಇಲಾಖೆ ಸೌಲಭ್ಯ ಒದಗಿಸುತ್ತಿದೆ. ಹಿಂದೆ ಶೇ. 100ರಷ್ಟು ಸೌಲಭ್ಯ ವಿತರಣೆ ಆಗಿದೆ. ಮುಂದಿನ ದಿನಗಳಲ್ಲಿ ಹೊಸ ನಾಟಿಗೂ ಪೂರ್ಣವಾಗಿ ಇಲಾಖೆಯ ಸೌಲಭ್ಯಗಳನ್ನು ವಿತರಣೆ ಮಾಡಲಾಗುವುದು. ಡಿ.ಬಿ.ಪಾಟೀಲ, ರೇಷ್ಮೆ ವಿಸ್ತರಣಾಧಿಕಾರಿ

ರೇಷ್ಮೆ ಬೆಳೆ 42 ವರ್ಷಗಳಿಂದಲೂ ಮಾಡುತ್ತಿದ್ದೇನೆ. ಈ ಬೆಳೆ ಕೃಷಿಗೆ ಉಪ ಕಸುಬು. ಬಾಗಿದೆ. ನಮ್ಮ ದೊಡ್ಡ ಕುಟುಂಬದ ಪೂರ್ಣ ಆರ್ಥಿಕ ನಿರ್ವಹಣೆ ರೇಷ್ಮೆ ಬೆಳೆಯಿಂದಲೇ ನಡೆಯುತ್ತದೆ. ವರ್ಷಕ್ಕೆ 18ರಿಂದ 20 ಕ್ವಿಂಟಲ್‌ ಉತ್ಪಾದನೆ 6ರಿಂದ 8ಲಕ್ಷ ರೂ. ವರೆಗೆ ಆದಾಯ ಬರುತ್ತದೆ. ಖರ್ಚು ಕಳೆದು ಎಕರೆಗೆ ಒಂದು ಲಕ್ಷ ರೂ. ಕನಿಷ್ಟ ಉಳಿತಾಯ ಆಗುತ್ತದೆ. ನಾಲ್ಕು ಎಕರೆ ರೇಷ್ಮೆ ಕೃಷಿ ಇದೆ. ಬೆಲೆ ಏರಿಳತದಿಂದ ಹಾಗೂ ರೋಗದಿಂದ ತತ್ತರಿಸಿ ಕೆಲವೊಮ್ಮೆ ಹಾನಿಯಾಗುತ್ತದೆ. ಸಣ್ಣ ಪ್ರಮಾಣದ ರೈತರು ಈ ಬೆಳೆ ಬೆಳೆಯಲು ಮುಂದೆ ಬರುತ್ತಿಲ್ಲ. ಮಲ್ಲಿಕಾರ್ಜುನ ಗುರುಶಾಂತಪ್ಪ ಸುಗಮಳೆ, ರೇಷ್ಮೆ ಬೆಳೆಗಾರ, ನಿಂಗದಳ್ಳಿ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next