ದಾವಣಗೆರೆ: ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಮೋಡ ಮುಸುಕಿದ ವಾತಾವರಣದಿಂದ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಅಕ್ಷರಶಃ ಮಲೆನಾಡಿನಂತಾಗಿದೆ.
ಸೋಮವಾರದಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಕೃತಿಕಾ ಮಳೆಯ ಆರ್ಭಟದಿಂದ ಜಾನುವಾರುಗಳು ಸಾವನ್ನಪ್ಪಿವೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಅಡಕೆ, ಬಾಳೆ ಹಾಳಾಗಿದೆ. ಅನೇಕ ಮನೆಗಳು ಹಾನಿಗೊಳಗಾಗಿವೆ. ತಗ್ಗು ಪ್ರದೇಶದ ಜನರು ರೋಸಿ ಹೋಗಿದ್ದಾರೆ.
ಬುಧವಾರವಿಡೀ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಮೋಡ ಮುಸುಕಿದ ವಾತಾವರಣ ಇತ್ತು. ಸೂರ್ಯನ ದರ್ಶನ ಆಗಲೇ ಇಲ್ಲ. ಬೆಳಗ್ಗೆಯಿಂದ ಮಳೆ ಹನಿಗಳು ಜಿನುಗುತ್ತಲೇ ಇದ್ದವು. ಮಧ್ಯಾಹ್ನ ಸ್ವಲ್ಪ ಸಮಯ ಮಳೆಯೂ ಬಂದಿತು. ಸಂಜೆ ಮಳೆಗೆ ನಿಂತಿತ್ತಾದರೂ ಮೋಡ ಮುಸುಕಿದ ವಾತಾವರಣ ಮುಂದುವರೆಯಿತು.
Related Articles
ಮಳೆಯ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳು, ಕೆಲಸ-ಕಾರ್ಯಗಳಿಗೆ ತೆರಳುವವರು, ಮದುವೆ ಸಂಭ್ರದಮದಲ್ಲಿದ್ದವರು ಬೇಸತ್ತು ಹೋದರು. ಶಾಲೆಗಳು ಪ್ರಾರಂಭವಾದ ಎರಡೇ ದಿನಗಳಲ್ಲಿ ಮಳೆ ಆಗುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಿ, ಬರಲು ಪರದಾಡುವಂತಾಯಿತು. ಮಳೆ ಬರುತ್ತಿದ್ದುದರಿಂದ ಸಾಕಷ್ಟು ಜನರು ಮನೆಯಿಂದ ಹೊರ ಬರದೆ ವ್ಯಾಪಾರ-ವಹಿವಾಟು ಕುಂಟಿತಗೊಂಡವು. ಆಟೋರಿಕ್ಷಾ, ನಗರ ಸಾರಿಗೆ ಬಸ್‌ಗಳಲ್ಲೂ ಜನರು ವಿರಳವಾಗಿದ್ದರು.
42.33 ಲಕ್ಷ ರೂ. ಮಳೆ ಹಾನಿ
ಜಿಲ್ಲೆಯಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ 42.33 ಲಕ್ಷ ರೂಪಾಯಿಯಷ್ಟು ಆಸ್ತಿ, ಬೆಳೆ ಹಾನಿಯಾಗಿದೆ. ದಾವಣಗೆರೆ ತಾಲೂಕಿನ ವ್ಯಾಪ್ತಿಯಲ್ಲಿ 0.30 ಗುಂಟೆ ಅಡಕೆ ಬೆಳೆ, 10 ಗುಂಟೆ ತೆಂಗು ಬೆಳೆ ಹಾನಿಯಿಂದಾಗಿ 70 ಸಾವಿರ ರೂ. ನಷ್ಟವಾಗಿದೆ.
ಹರಿಹರ ತಾಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು 1.50 ಲಕ್ಷ ರೂ., 1 ಕಚ್ಚಾ ಮನೆ ಭಾಗಶಃ ಹಾನಿಗೀಡಾಗಿ 30 ಸಾವಿರ, 16 ವಾಸದ ಮನೆಗಳ ಮನೆಯ ಮೇಲ್ಛಾವಣಿ ಸಿಮೆಂಟ್ ಶೀಟ್, ಹಂಚು ಹಾನಿಯಾಗಿದ್ದರಿಂದ 4.80 ಲಕ್ಷ ಮತ್ತು 329ಎಕರೆ ಭತ್ತದ ಬೆಳೆ, 5 ಎಕರೆ ಬಾಳೆ ಬೆಳೆ, 8ಎಕರೆ ಅಡಕೆ ಮತ್ತು ತೆಂಗು ಬೆಳೆ ಹಾನಿಯಾಗಿದ್ದು, 26.13 ಲಕ್ಷ ಸೇರಿದಂತೆ ಒಟ್ಟು 32.73 ಲಕ್ಷ ರೂ. ಅಂದಾಜು ನಷ್ಟವಾಗಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, 50 ಸಾವಿರ, 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು 1 ಲಕ್ಷ ಮತ್ತು 3ಎಕರೆ ಬಾಳೆ ಬೆಳೆ ಹಾನಿಯಾಗಿದ್ದು 30 ಸಾವಿರ ಒಳಗೊಂಡಂತೆ ಒಟ್ಟು 1.80 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ನ್ಯಾಮತಿ ತಾಲೂಕಿನ ವ್ಯಾಪ್ತಿಯಲ್ಲಿ 4 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, 2 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, 50 ಸಾವಿರ, 1 ಕಚ್ಚಾ ಮನೆ ಭಾಗಶ: ಹಾನಿಯಿಂದ 50 ಸಾವಿರ, ದನದ ಕೊಟ್ಟಿಗೆ ಹಾನಿಯಾಗಿದ್ದರಿಂದ 10ಸಾವಿರ, 20ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, 4 ಲಕ್ಷ ಸೇರಿ ಒಟ್ಟು 5.10 ಲಕ್ಷ ಅಂದಾಜು ನಷ್ಟವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 42.33 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.