Advertisement

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

10:37 PM Nov 17, 2024 | Team Udayavani |

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಮತ್ತದರ ಸಂಯೋಜಿತ ಕಾಲೇಜುಗಳಲ್ಲಿ ಎಂಜಿನಿಯರಿಂಗ್‌ ಮತ್ತು ಬಿಟೆಕ್‌ ಓದುತ್ತಿರುವ “ಅಸಾಮಾನ್ಯ’ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗಿಂತ ಒಂದು ಸೆಮಿಸ್ಟರ್‌ ಮೊದಲೇ ಎಂಜಿನಿಯರಿಂಗ್‌ ಪದವಿ ಪೂರೈಸುವ ಅವಕಾಶ ಲಭಿಸಲಿದೆ.

Advertisement

2022ರಲ್ಲಿ ಎಂಜಿನಿಯರಿಂಗ್‌ ಪ್ರವೇಶ ಪಡೆದ ಬ್ಯಾಚ್‌ನಿಂದ ಈ ಯೋಜನೆ ಜಾರಿಯಾಗಲಿದ್ದು, ಮುಂದಿನ ಜುಲೈಯಲ್ಲಿ ಈ ವಿದ್ಯಾರ್ಥಿಗಳು 7ನೇ ಸೆಮಿಸ್ಟರ್‌ ಪ್ರವೇಶ ಪಡೆಯಲಿದ್ದಾರೆ. ಆಗ ವಿದ್ಯಾರ್ಥಿಗಳು ತಮ್ಮ 8ನೇ ಸೆಮಿಸ್ಟರ್‌ ಅನ್ನು ಸಹ 7ನೇ ಸೆಮಿಸ್ಟರ್‌ನೊಂದಿಗೆ ಫಾಸ್ಟ್‌ ಟ್ರ್ಯಾಕ್‌ ಆಗಿ ಪೂರೈಸಿಕೊಳ್ಳಬಹುದು.

ಯಾರು ಈ ‘ಅಸಾಮಾನ್ಯ ವಿದ್ಯಾರ್ಥಿ’?
2 ಮತ್ತು 3ನೇ ಸೆಮಿಸ್ಟರ್‌ನಲ್ಲಿ 9 ಮತ್ತದಕ್ಕಿಂತ ಹೆಚ್ಚು ಸಿಜಿಪಿಎ ಹೊಂದಿರುವ, ಯಾವುದೇ ಸೆಮಿಸ್ಟರ್‌ನಲ್ಲಿ ಯಾವುದೇ ವಿಷಯವನ್ನು ಬಾಕಿ ಉಳಿಸಿಕೊಳ್ಳದ ವಿದ್ಯಾರ್ಥಿಯನ್ನು “ಅಸಾಮಾನ್ಯ ವಿದ್ಯಾರ್ಥಿ’ ಎಂದು ಪರಿಗಣಿಸಲಾಗುತ್ತದೆ.

ವಿದ್ಯಾರ್ಥಿಯು 4ನೇ ಸೆಮಿಸ್ಟರ್‌ನಲ್ಲಿ ನಿಗದಿತ ಶುಲ್ಕ ಪಾವತಿಸಿ ತಮ್ಮ ಪ್ರಾಂಶುಪಾಲರ ಮೂಲಕ ವಿವಿಯಲ್ಲಿ ಫಾಸ್ಟ್‌ ಟ್ರ್ಯಾಕ್‌ ಡಿಗ್ರಿಗೆ ನೋಂದಾಯಿಸಿಕೊಳ್ಳಬೇಕು. ಹಾಗೆಯೇ 5ನೇ ಸೆಮಿಸ್ಟರ್‌ನಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಹೆಚ್ಚು ಕ್ರೆಡಿಟ್‌ಗೆ ನೋಂದಾಯಿಸಿಕೊಳ್ಳಬೇಕು ಎಂದು ಈ ಮೊದಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಈ ಬಗೆಗಿನ ಪರಿಷ್ಕೃತ ಮಾರ್ಗಸೂಚಿಯಲ್ಲಿ 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಹೆಚ್ಚುವರಿಯಾಗಿ 12 ಕ್ರೆಡಿಟ್‌ ಪಡೆದುಕೊಳ್ಳಬೇಕು. ಒಟ್ಟಾರೆ 5ನೇ ಸೆಮಿಸ್ಟರ್‌ನಲ್ಲಿ 22 ಕ್ರೆಡಿಟ್‌ ಮತ್ತು 7ನೇ ಸೆಮಿಸ್ಟರ್‌ನಲ್ಲಿ 12 ಕ್ರೆಡಿಟ್‌ ಪಡೆದುಕೊಳ್ಳಬೇಕು. ಇನ್ನು 6ನೇ ಸೆಮಿಸ್ಟರ್‌ನಲ್ಲಿ ಸೆಮಿಸ್ಟರ್‌ನ 18 ಕ್ರೆಡಿಟ್‌ ಜೊತೆಗೆ ಹೆಚ್ಚುವರಿಯಾಗಿ 12 ಕ್ರೆಡಿಟ್‌ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.

ಇನ್ನು ವಿದ್ಯಾರ್ಥಿ 7ನೇ ಸೆಮಿಸ್ಟರ್‌ನಲ್ಲಿಯೇ ತನ್ನ ಇಂಟರ್ನ್ಶಿಪ್‌, ತಾಂತ್ರಿಕ ಸೆಮಿನಾರ್‌ ಮತ್ತು ತಮ್ಮ ಕೋರ್ಸ್‌ ವರ್ಕ್‌ ಅನ್ನು ಪೂರ್ಣಗೊಳಿಸಬೇಕು. ಹಾಗೂ 7ನೇ ಸೆಮಿಸ್ಟರ್‌ ಪೂರ್ಣ ಗೊಳ್ಳುವ ಮುಂಚಿತವಾಗಿ ಎಂಜಿನಿಯರಿಂಗ್‌ನ ಒಟ್ಟು 160 ಕ್ರೆಡಿಟ್‌ ಪೂರ್ಣಗೊಳಿಸಿರಬೇಕು ಎಂಬ ಷರತ್ತು ಹಾಕಲಾಗಿದೆ.

Advertisement

ಅಮೆರಿಕದಲ್ಲಿ ಶಾಲಾ ಹಂತದಲ್ಲಿಯೇ ಫಾಸ್ಟ್‌ ಟ್ರ್ಯಾಕ್‌ ವ್ಯವಸ್ಥೆಯಿದೆ. ನಾವೀಗ ಅದನ್ನು ಎಂಜಿನಿಯರಿಂಗ್‌ ಮತ್ತು ಬಿಟೆಕ್‌ ಕೋರ್ಸ್‌ನಲ್ಲಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಯ ಶಿಕ್ಷಣ 6 ತಿಂಗಳು ಮುಂಚಿತವಾಗಿ ಪೂರ್ಣಗೊಳ್ಳುವುದರಿಂದ ಬೇಗನೆ ಉದ್ಯೋಗಕ್ಕೆ ಸೇರಲು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ನೆರವಾಗುತ್ತದೆ.
– ಡಾ| ಎಸ್‌. ವಿದ್ಯಾಶಂಕರ್‌, ಕುಲಪತಿ, ವಿಟಿಯು

Advertisement

Udayavani is now on Telegram. Click here to join our channel and stay updated with the latest news.

Next