ಬೆಂಗಳೂರು: ಅನೈತಿಕ ಸಂಬಂಧಕ್ಕೆ ಮಹಿಳೆ ಮತ್ತು ಆಕೆಯ ಪುತ್ರನನ್ನು ಕೊಲೆಗೈದಿರುವ ಘಟನೆ ಬಾಗಲಗುಂಟೆಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ನವನೀತಾ (35) ಮತ್ತು ಪುತ್ರ ಸಾಯಿ ಸೃಜನ್ (8) ಕೊಲೆಯಾದವರು.
ನವನೀತಾ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೇ ಕೊಲೆಗೈದಿರುವ ಸಾಧ್ಯತೆಯಿದ್ದು, ಆರೋಪಿಯನ್ನು ಸದ್ಯದಲ್ಲೇ ಬಂಧಿಸಲಾಗುತ್ತದೆ. ಮತ್ತೂಂದೆಡೆ ಆಕೆಯ ಪತಿ ಚಂದ್ರೂವನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಆಂಧ್ರದ ಅನಂತಪುರ ಮೂಲದ ಚಂದ್ರು ಮತ್ತು ನವನೀತಾ 10 ವರ್ಷಗಳ ಹಿಂದೆ ವಿವಾಹವಾಗಿ 8 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ದಂಪತಿಗೆ ಸಾಯಿ ಸೃಜನ್ ಎಂಬ ಮಗ ಇದ್ದ. ಬಾಗಲಗುಂಟೆಯ ರವೀಂದ್ರನಾಥ ಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿದ್ದು, ಆರಂಭದಲ್ಲಿ ದಂಪತಿ ಪೇಟಿಂಗ್ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ದಂಪತಿ ದೂರವಾಗಿದ್ದು, ಪತಿ ಚಂದ್ರು, ಮತ್ತೂಂದು ಬಾಡಿಗೆ ಮನೆ ಮಾಡಿಕೊಂಡಿದ್ದ. ಆದರೂ ಪತಿ ಚಂದ್ರು ಆಗಾಗ್ಗೆ ಪತ್ನಿ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಸ್ ಸೋರಿಕೆಯಿಂದ ಬೆಳಕಿಗೆ: ಈ ಮಧ್ಯೆ ಸೋಮವಾರ ಮಧ್ಯಾಹ್ನ ನವನೀತಾ ಮನೆ ಬಳಿ ಅಡುಗೆ ಅನಿಲ ಸೋರಿಕೆಯಾಗಿದ್ದು, ವಾಸನೆ ಬಂದಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಎಲ್ಲೆಡೆ ಶೋಧಿಸಿದ್ದಾರೆ. ಆಗ ನವನೀತಾ ಮನೆ ಬಳಿ ವಾಸನೆ ಬರುತ್ತಿರುವುದನ್ನು ಗಮನಿಸಿ ಬಾಗಿಲು ಬಡಿದ್ದಾರೆ. ಯಾರು ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಕಿಟಕಿ ಗಾಜು ಒಡೆದು ನೋಡಿದಾಗ ಹಾಸಿಗೆ ಮೇಲೆ ತಾಯಿ, ಮಗನ ಮೃತದೇಹ ಪತ್ತೆಯಾಗಿದೆ. ನಂತರ ಪೊಲೀಸರಿಗೆ ತಿಳಿಸಿದ್ದು, ಇದೇ ವೇಳೆ ನವನೀತಾ ತಾಯಿ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಒಡೆದು ಒಳ ಹೋದಾಗ, ಮಲಗುವ ಕೋಣೆಯಲ್ಲಿ ತಾಯಿ, ಮಗನ ಶವ ಪತ್ತೆಯಾಗಿದೆ. ನವನೀತಾಳ ಕತ್ತು ಕೊಯ್ದಿದ್ದು, ಸಾಯಿ ಸೃಜನ್ ನನ್ನು ಉಸಿರುಗಟ್ಟಿಸಿ ಹತ್ಯೆಗೈಯಲಾಗಿದೆ. ಇದೇ ವೇಳೆ ನವನೀತಾ ತಾಯಿ, ಅಳಿಯ ಚಂದ್ರು ಗಲಾಟೆ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆ ನಡೆಸಲಾಗಿದೆ. ಸದ್ಯ ಕೃತ್ಯದಲ್ಲಿ ಆತನ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲವೆಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಉತ್ತರವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್, ಪೀಣ್ಯ ಉಪವಿಭಾಗದ ಎಸಿಪಿ ಸದಾನಂದ ಎ.ತಿಪ್ಪಣ್ಣನವರ್ ಮತ್ತು ಬಾಗಲಗುಂಟೆ ಠಾಣಾಧಿಕಾರಿ ಹನುಮಂತರಾಜು ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಅನೈತಿಕ ಸಂಬಂಧಕ್ಕೆ ಕೊಲೆ: ಪತಿಯಿಂದ ದೂರವಾಗಿ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ನವನೀತಾ, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮತ್ತು ಫೇಸ್ ಬುಕ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಈ ವೇಳೆ ಕೆಲ ವ್ಯಕ್ತಿಗಳು ಪರಿಚಯವಾಗಿದ್ದು, ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಗೊತ್ತಾಗಿದೆ. ಮತ್ತೂಂದೆಡೆ ತಾಂತ್ರಿಕ ತನಿಖೆ ನಡೆಸಿದಾಗ ಇನ್‌ಸ್ಟಾಗ್ರಾಂನಲ್ಲಿ ನವನೀತಾ ಜತೆ ಹೆಚ್ಚು ಆತ್ಮೀಯವಾಗಿದ್ದ ವ್ಯಕ್ತಿಯೇ ಕೊಲೆಗೈದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಗ್ಯಾಸ್ ಸೋರಿಕೆ: ಮತ್ತೂಂದೆಡೆ ಕೃತ್ಯ ಎಸಗಿದ ಆರೋಪಿ ತಾಯಿ, ಮಗನನ್ನು ಕೊಂದು, ಅಡುಗೆ ಅನಿಲದ ವಾಸನೆ ಸೇವಿಸಿ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಅಡುಗೆ ಕೋಣೆಯಲ್ಲಿ ಗ್ಯಾಸ್ ಸೋರಿಕೆ ಮಾಡಿ ಪರಾರಿಯಾಗಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.