ಶ್ರೀನಗರ: ಅಮರನಾಥ ಯಾತ್ರಿಗಳ ಮೇಲೆ ಉಗ್ರರ ಕೆಂಗಣ್ಣು ಬಿದ್ದ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಅಪಾರ ಸಂಖ್ಯೆಯಲ್ಲಿ ಕಣಿವೆ ರಾಜ್ಯಕ್ಕೆ ತೆರಳಿರುವ ಯಾತ್ರಾರ್ಥಿಗಳು ತುರ್ತಾಗಿ ಹಿಂದಿರುಗಲು ಅನುಕೂಲವಾಗುವಂತೆ ಹೆಚ್ಚುವರಿ ವಿಮಾನ ಸೌಲಭ್ಯ ಮಾಡಲಾಗಿದೆ.
ಅಮರನಾಥ ಯಾತ್ರೆಯ ಮಾರ್ಗದಲ್ಲಿ ಪಾಕಿಸ್ಥಾನ ನಿರ್ಮಿತ ಬಾಂಬ್ ಗಳು, ಸ್ನೈಪರ್ ರೈಫಲ್ ಹಾಗೂ ಇನ್ನಿತರ ಸ್ಪೋಟಕಗಳು ಪತ್ತೆಯಾಗಿದ್ದವು. ಭದ್ರತೆಯ ದೃಷ್ಠಿಯಿಂದ ಯಾತ್ರಿಕರು ಮತ್ತು ಪ್ರವಾಸಿಗರನ್ನು ರಾಜ್ಯದಿಂದ ಹೊರಹೋಗುವಂತೆ ತಿಳಿಸಲಾಗಿದೆ.
ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳು ಅಮರನಾಥ ಯಾತ್ರಿಗಳನ್ನು ಅಲ್ಲಿಂದ ಕರೆತರಲು ಶ್ರೀನಗರಕ್ಕೆ ಹೆಚ್ಚುವರಿ ವಿಮಾನಗಳನ್ನು ಹಾರಿಸಲು ಸಿದ್ದವಿರಬೇಕು ಎಂದು ಡಿಜಿಸಿಎ ಆದೇಶ ಹೊರಡಿಸಿದ್ದಾರೆ.
ಭಾರತೀಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಗೋ ಏರ್ ಈ ಬೆಳವಣಿಗೆಗೆ ಸ್ಪಂದಿಸಿದ್ದು,ಕ್ರಮವಾಗಿ ಆಗಸ್ಟ್ 15 ಮತ್ತು ಆಗಸ್ಟ್ 9ರವರೆಗೆ ಕಾಶ್ಮೀರಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಯಾತ್ರಿಗಳ ಟಿಕೆಟ್ ನ ಬದಲಿ ಮತ್ತು ರದ್ದತಿಗೆ ಶುಲ್ಕ ಮನ್ನಾ ಮಾಡಲು ನಿರ್ಧರಿಸಿದೆ.
ಇಂಡಿಗೂ ಮತ್ತು ವಿಸ್ತಾರ ಸಂಸ್ಥೆಗಳು ಕೂಡ ಟಿಕೆಟ್ ರದ್ದತಿ ಮತ್ತು ಬದಲಿಸಲು ಶುಲ್ಕ ಮನ್ನಾ ಮಾಡಲು ನಿರ್ಧರಿಸಿದ್ದು, ಆಗಸ್ಟ್ 9ರವರೆಗೆ ಶುಲ್ಕ ವಿಧಿಸದೇ ಇರಲು ನಿರ್ಧರಿಸಿದೆ.