Advertisement

ಪ್ರಜ್ಞಾಗೆ ಮಾಜಿ ಅಧಿಕಾರಿಗಳ ಬಹಿರಂಗ ಪತ್ರ

05:17 AM Apr 26, 2019 | mahesh |

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್‌ ಕರ್ಕರೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಠಾಕೂರ್‌, ತಮ್ಮೀ ಬಾಲಿಶ ನಡೆಯ ನೈತಿಕ ಜವಾಬ್ದಾರಿ ಹೊತ್ತು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಬೇಕೆಂದು ನಾನಾ ರಾಜ್ಯಗಳ ಸುಮಾರು 70ಕ್ಕೂ ಹೆಚ್ಚು ನಿವೃತ್ತ ಸರಕಾರ ನೌಕರರು ಬಹಿರಂಗ ಪತ್ರದ ಮೂಲಕ ಆಗ್ರಹಿಸಿದ್ದಾರೆ. ತಮ್ಮ ಶಾಪದಿಂದಲೇ ಕರ್ಕರೆ, ಮುಂಬಯಿ ದಾಳಿಯ ವೇಳೆ ಅಸುನೀಗಿದ್ದರು ಎಂದು ಪ್ರಜ್ಞಾ ಇತ್ತೀಚೆಗೆ ಹೇಳಿದ್ದರು. ಈ ನಡುವೆ, ಪ್ರಜ್ಞಾ ಹೇಳಿಕೆಯಿಂದ ನೊಂದಿರುವ ಕರ್ಕರೆ ಅವರ ಮಾಜಿ ಸಹೋದ್ಯೋಗಿ ರಿಯಾಜುದ್ದೀನ್‌ ಘಯಾಸುದ್ದೀನ್‌ ದೇಶ್‌ಮುಖ್‌ (60) ಎಂಬುವರು ಪ್ರಜ್ಞಾ ವಿರುದ್ಧ ಭೋಪಾಲ್ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಚುನಾವಣ ವೆಚ್ಚದಲ್ಲೇ ಜಾಹೀರಾತು
ತಮ್ಮ ಕ್ರಿಮಿನಲ್ ಹಿನ್ನೆಲೆಯನ್ನು ಟಿವಿ ಹಾಗೂ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಬಹಿರಂಗಪಡಿಸುವ ಅಭ್ಯರ್ಥಿಗಳು ಜಾಹೀರಾತು ವೆಚ್ಚವನ್ನು ಚುನಾವಣ ವೆಚ್ಚದಿಂದಲೇ ಭರಿಸಬೇಕು ಎಂದು ಚುನಾವಣ ಆಯೋಗ ಹೇಳಿದೆ. ಎಲ್ಲ ಅಭ್ಯರ್ಥಿಗಳೂ ಕಡ್ಡಾಯವಾಗಿ ಕನಿಷ್ಠ 3 ಬಾರಿ ಜಾಹೀರಾತು ನೀಡುವ ಮೂಲಕ ತಮ್ಮ ಕ್ರಿಮಿನಲ್ ಹಿನ್ನೆಲೆಯಲ್ಲಿ ಜನತೆಗೆ ತಿಳಿಸಬೇಕು ಎಂದು ಈಗಾಗಲೇ ಆಯೋಗ ನಿರ್ದೇಶಿಸಿದೆ. ಈ ಜಾಹೀರಾತು ‘ಚುನಾವಣ ವೆಚ್ಚ’ದ ವಿಭಾಗದಲ್ಲೇ ಬರುವ ಕಾರಣ, ಅದರ ವೆಚ್ಚವನ್ನೂ ಇದರಲ್ಲೇ ಭರಿಸಬೇಕು ಎಂದು ಈಗ ಆಯೋಗ ಸ್ಪಷ್ಟಪಡಿಸಿದೆ.

ಕಣ್ಮರೆಯಾಗಿದ್ದ ಅಧಿಕಾರಿ ಪತ್ತೆ
ಪಶ್ಚಿಮ ಬಂಗಾಳದಲ್ಲಿ ವಾರದ ಹಿಂದೆ ಕಣ್ಮರೆಯಾಗಿದ್ದ ಚುನಾವಣ ಆಯೋಗದ ನೋಡಲ್ ಅಧಿಕಾರಿ ಅರ್ನಾಬ್‌ ರಾಯ್‌ ಅವರು ಗುರುವಾರ ಪತ್ತೆಯಾಗಿದ್ದಾರೆ.ಮೊಬೈಲ್ ಫೋನ್‌ ಲೊಕೇಶನ್‌ ಮೂಲಕ ಅವರನ್ನು ಪತ್ತೆಹಚ್ಚಲಾಗಿದ್ದು ಹೌರಾದ ಮನೆಯೊಂದರಲ್ಲಿದ್ದರು. ಬಹಳ ದಣಿದಂತೆ ಕಂಡುಬರುತ್ತಿದ್ದರು. ಅವರನ್ನು ಯಾರಾದರೂ ಅಪಹರಿಸಿದ್ದರೋ ಅಥವಾ ತಾವಾಗಿಯೇ ಅಲ್ಲಿ ಅಡಗಿದ್ದರೋ ಎಂಬುದು ತನಿಖೆ ಅನಂತರವಷ್ಟೇ ತಿಳಿಯಲಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.


ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ವಿಖೆ ಪಾಟೀಲ್ ರಾಜೀನಾಮೆ
ಮಹಾರಾಷ್ಟ್ರ ಕಾಂಗ್ರೆಸ್‌ನ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಕೊನೆಗೂ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರ ಪುತ್ರ ಸುಜಯ್‌ ವಿಖೆ ಪಾಟೀಲ್ ಅವರು ಬಿಜೆಪಿಗೆ ಸೇರಿದ್ದರು. ಅವರಿಗೆ ಅಹಮದ್‌ನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನೂ ನೀಡಲಾಗಿತ್ತು. ರಾಧಾಕೃಷ್ಣ ಅವರು ಕಾಂಗ್ರೆಸ್‌ನಲ್ಲಿದ್ದರೂ ತಮ್ಮ ಪುತ್ರನ ಪರ ಪ್ರಚಾರಕ್ಕೆ ಹೋಗುವ ಮೂಲಕ ಪಕ್ಷ ತ್ಯಜಿಸುವ ಸುಳಿವು ನೀಡಿದ್ದರು. ಗುರುವಾರ ಅವರು ರಾಜೀನಾಮೆ ಸಲ್ಲಿಸಿದ್ದು, ಅದನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ಗಾಂಧಿ ಸ್ವೀಕರಿಸಿದ್ದಾರೆ.

ಚುನಾವಣ ನೀತಿ ಸಂಹಿತೆ ಉಲ್ಲಂ ಸಿದ ಹಲವಾರು ಗಂಭೀರ ಅರೋಪಗಳನ್ನು ಎದುರಿಸುತ್ತಿರುವ ಹೊರತಾಗಿಯೂ ಪ್ರಧಾನಿ ಮೋದಿ ಎಗ್ಗಿಲ್ಲದೇ ನೀತಿ ಸಂಹಿತೆ ಉಲ್ಲಂ ಸುತ್ತಿದ್ದಾರೆ. ಮೋದಿ ಏನು ಪ್ರಶ್ನಾತೀತರೇ?
ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥ

ಚುನಾವಣೆ ವೇಳೆ ರಾಜಕಾರಣಿಗಳು ಏನು ಮಾತನಾಡುತ್ತಾರೆ ಎಂಬುದನ್ನು ಮತ್ತೂಬ್ಬರು ನಿರ್ಧರಿಸುವುದು ಅಥವಾ ಅವರ ಮೇಲೆ ನಿಷೇಧ ಹೇರುವುದನ್ನು ಯಾರೂ ಮಾಡಬಾರದು. ಸರಿ ತಪ್ಪುಗಳನ್ನು ಮತದಾರರು ನಿರ್ಧರಿಸುತ್ತಾರೆ.
ಹಿಮಾಂತ ಬಿಸ್ವಾ ಶರ್ಮ, ಅಸ್ಸಾಂ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next