Advertisement

ಅನುದಾನಿತ, ಖಾಸಗಿ ಕಾಲೇಜುಗಳಿಗೂ ಡಿಜಿಟಲೀಕರಣ ವಿಸ್ತರಣೆ: ಅಶ್ವತ್ಥನಾರಾಯಣ

05:14 PM Oct 15, 2022 | Team Udayavani |

ಬೆಂಗಳೂರು: ಯೂನಿಫೈಡ್‌ ಡೇಟಾ ಮತ್ತು ಡಿಜಿಟಲೀಕರಣಗಳೇ ಇಡೀ ಜಗತ್ತಿನ ಶಿಕ್ಷಣ ಕ್ಷೇತ್ರದಲ್ಲಿ ನಿರ್ಣಾಯಕ ಶಕ್ತಿಗಳಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯದಲ್ಲೂ ಸರಕಾರಿ ಶಿಕ್ಷಣ ಸಂಸ್ಥೆಗಳ ಡಿಜಿಟಲೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಅನುದಾನಿತ ಮತ್ತು ಖಾಸಗಿ ಕಾಲೇಜುಗಳಿಗೂ ಕಡ್ಡಾಯಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಅಂತರರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ‘ಸೀಮಾತೀತ ಶಿಕ್ಷಣ ಕ್ಷೇತ್ರದಲ್ಲಿ ನಾವೀನ್ಯತೆಯ ಭವಿಷ್ಯ’ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ವಿಕೇಂದ್ರೀಕರಣಕ್ಕೆ ಚಾಲನೆ ಕೊಡಲಾಗಿದೆ. ಶಿಕ್ಷಣ ಕ್ಷೇತ್ರದ ಮೇಲೆ ಸರಕಾರದ ನಿಯಂತ್ರಣ ಇರಬಾರದೆನ್ನುವುದೇ ನಮ್ಮ ಆಶಯವಾಗಿದೆ. ಹೀಗಾಗಿ ಸಂಶೋಧನೆ ಮತ್ತು ಸಹಭಾಗಿತ್ವಗಳಿಗೆ ಹಾಗೂ ಟ್ವಿನ್ನಿಂಗ್ ಪದವಿ ಕೋರ್ಸುಗಳಿಗೆ ಮುಕ್ತ ಅವಕಾಶ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮರ್ಥ ಕಾಯ್ದೆಯನ್ನೂ ಜಾರಿಗೆ ತರಲಾಗುವುದು ಎಂದು ಅವರು ವಿವರಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿ ಜಾಗತಿಕ ಮಟ್ಟದ ಸೌಲಭ್ಯಗಳಿದ್ದರೂ ಅದರ ಸಮರ್ಪಕ ಉಪಯೋಗವಾಗುತ್ತಿಲ್ಲ. ನಮ್ಮಲ್ಲಿ 20 ಸಾವಿರ ನವೋದ್ಯಮಗಳಿದ್ದು, ಇವು ಶಿಕ್ಷಣದ ಗುಣಮಟ್ಟ ವರ್ಧನೆಗೆ ಕೈಜೋಡಿಸಬೇಕು. ಉದ್ಯಮ ವಲಯವು ಶಿಕ್ಷಣ ಕ್ಷೇತ್ರದ ಜತೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನೆಗಳು ತ್ವರಿತ ಗತಿಯಲ್ಲಿ ಸಂಭವಿಸುತ್ತಿವೆ. ಗುಣಮಟ್ಟದ ಶಿಕ್ಷಣ ಮಾತ್ರ 21ನೇ ಶತಮಾನದ ಜ್ಞಾನಾಧಾರಿತ ವ್ಯವಸ್ಥೆಗೆ ಆಧಾರವಾಗಿದೆ. ಇದು ಜ್ಞಾನಾಧಾರಿತ ಆರ್ಥಿಕತೆಯ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತಿದೆ. ಹೀಗಾಗಿ ಗುಣಮಟ್ಟ ಮತ್ತು ಉತ್ಕೃಷ್ಟತೆಯೊಂದಿಗೆ ರಾಜಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

Advertisement

ಎನ್‌ಇಪಿ ಜಾರಿಯಲ್ಲಿ ರಾಜ್ಯವು ದೇಶಕ್ಕೇ ಪ್ರಥಮ ಸ್ಥಾನದಲ್ಲಿದ್ದೇವೆ. ಹೀಗಾಗಿ ಜಾಗತಿಕ ರಂಗದಲ್ಲಿ ಕರ್ನಾಟಕವು ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದೆ. ಎನ್‌ಇಪಿ ನೀತಿಯು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ಕೊಟ್ಟಿದ್ದು, ಇತ್ತೀಚೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಾರಿಗೆ ತಂದಿರುವ ನಿಯಮಗಳೂ ಇದಕ್ಕೆ ಪುಷ್ಟಿ ನೀಡುವಂತಿವೆ ಎಂದರು.

ಕರ್ನಾಟಕವು ಮೊದಲಿನಿಂದಲೂ ಶಿಕ್ಷಣದಲ್ಲಿ ಹೊಸತನಕ್ಕೆ ಗಮನ ನೀಡುತ್ತ ಬಂದಿದೆ. ಈಗ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಶಿಕ್ಷಣದ ಸುಧಾರಣೆಗಾಗಿ ಅಳವಡಿಸಿಕೊಂಡು, ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಯನ್ನು ಸಾಧಿಸಲು ತಕ್ಕ ವೇದಿಕೆಯನ್ನು ನಿರ್ಮಿಸುವ ಅಗತ್ಯವಿದೆ. ರಾಜ್ಯವು ಎಂದಿನಂತೆ ಇಡೀ ಜಗತ್ತಿನ ಪ್ರತಿಭೆಗಳನ್ನು ತನ್ನತ್ತ ಸೆಳೆಯುತ್ತಿದೆ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಐಎಸ್‌ಡಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ಟಾಮ್‌ ಜೋಸೆಫ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ ತಿಮ್ಮೇಗೌಡ, ಐಎಸ್‌ಡಿಸಿಯ ಕಲಿಕಾ ವಿಭಾಗದ ನಿರ್ದೇಶಕಿ ತೆರೇಸಾ ಜೇಕಬ್ಸ್ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next