ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಕುರಿತು ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ವಿಚಾರಣೆ ನಡೆಸಲಾಯಿತು.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ರುವ ಆರೋಪಿಗಳಾದ ಇಮ್ಮಡಿ ಮಹ ದೇವಸ್ವಾಮಿ, ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ. ಬಸವರಾಜ ಅವರ ಎದುರು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಫೆ. 12ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದರು.
ಬೆಳಗ್ಗೆ 11.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾ ಧೀಶರು ನಾಲ್ವರು ಆರೋಪಿಗಳೂ ಹಾಜರಿದ್ದೀರಾ ಎಂದು ಪ್ರಶ್ನಿಸಿದರು. ಹಾಜರಿರುವುದಾಗಿ ಆರೋಪಿಗಳು ತಿಳಿಸಿದರು. ನಿಮ್ಮ ಪರ ವಕಾಲತ್ತು ವಹಿಸಲು ವಕೀಲರು ಬಂದಿದ್ದಾರೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಒಂದನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ತಮ್ಮ ಪರ ವಕೀಲ ಕೆ.ಜಿ. ಅಪ್ಪಣ್ಣ ವಕಾಲತ್ತು ವಹಿಸಿದ್ದಾರೆ ಎಂದರು. ವಕೀಲರನ್ನು ಕೂಗಿಸಿದಾಗ ಅವರು ಹಾಜರಿರಲಿಲ್ಲ.
ಇಮ್ಮಡಿ ಮಹದೇವಸ್ವಾಮಿ ಪರ ವಕೀಲರು ವಕಾಲತ್ತು ಹಾಕಿದ್ದಾರೆ. ಇನ್ನುಳಿದ ಆರೋಪಿಗಳಿಗೆ ವಕಾಲತ್ತು ಹಾಕಿಲ್ಲ. ಆದ್ದರಿಂದ ಉಳಿದ ಆರೋಪಿ ಗಳು ವಕೀಲರನ್ನು ನೇಮಿಸಿಕೊಳ್ಳಿ ಎಂದು ಸೂಚಿಸಿದರು. ತಮ್ಮ ವಕೀಲರು ಸಹಿ ಪಡೆದುಹೋಗಿದ್ದಾರೆಂದು ಆರೋಪಿ ಮಾದೇಶ ತಿಳಿಸಿದ.
ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕಿ ಲೋಲಾಕ್ಷಿ ಕಾಲಾವಕಾಶ ಕೋರಿದರು. ಫೆ. 5ರವರೆಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಧೀಶರು ಕಾಲಾವಕಾಶ ನೀಡಿದರು. ಆರೋಪಿಗಳನ್ನು ಫೆ. 12ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸು ವಂತೆ ಆದೇಶಿಸಿದರು.
ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂದು ಚಾಮರಾಜನಗರ ಮತ್ತು ಮೈಸೂರು ವಕೀಲರ ಸಂಘ ನಿರ್ಣಯ ತೆಗೆದುಕೊಂಡಿದೆ. ಹೀಗಾಗಿ ಎರಡು ಜಿಲ್ಲೆಯ ವಕೀಲರು ಆರೋಪಿಗಳ ಪರ ವಕಾಲತ್ತು ವಹಿಸಿಲ್ಲ. ಹಾಗಾಗಿ ಕೊಡಗು ಮೂಲದ ವಕೀಲ ಕೆ.ಜಿ. ಅಪ್ಪಣ್ಣ ಒಂದನೇ ಆರೋಪಿ ಪರ ವಕಾಲತ್ತು ವಹಿಸಿದ್ದಾರೆ. ಇನ್ನುಳಿದ ಆರೋಪಿಗಳ ಪರ ಸುದೇಶ್ ಮತ್ತು ಲೋಹಿತ್ ಎಂಬ ವಕೀಲರು ವಕಾಲತ್ತು ವಹಿಸಲಿದ್ದಾರೆ.