ಬೆಂಗಳೂರು: ಮೊಬೈಲ್ ಘಟಕಗಳ ಮೂಲಕ ಅರ್ಹರಿಗೆ ಲಸಿಕೆ ಹಾಕಿಸುವುದು. ಸ್ಥಳೀಯವಾಗಿ ವೈದ್ಯರ ತಂಡ ರಚಿಸಿ ಅರ್ಹರಿಗೆ ಸಚಿವರ ಕಚೇರಿಯಿಂದ ಔಷಧ ವಿತರಿಸಬಹುದು. ಕಾಲ್ ಸೆಂಟರ್ ಆರಂಭಿಸಬಹುದು. ಕೋವಿಡ್ ಸೋಂಕಿನ ಯಾವುದೇ ರೀತಿಯ ಲಕ್ಷಣ ಕಂಡುಬಂದರೂ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವಂತೆ ವ್ಯಾಪಕ ಜಾಗೃತಿ ಮೂಡಿಸಬಹುದು. ಕೋವಿಡ್ ನಿಯಂತ್ರಣ, ಸಮಪರ್ಕ ನಿರ್ವಹಣೆಗಾಗಿ ಮಣಿಪಾಲ್ ಆಸ್ಪತ್ರೆಯ ಶಾಸ್ವಕೋಶ ತಜ್ಞ ಡಾ.ಸತ್ಯನಾರಾಯಣ ಮೈಸೂರು ಅವರು ನೀಡಿರುವ ಪ್ರಮುಖ ಸಲಹೆಗಳಿವು.
ಸಚಿವ ಕೆ.ಗೋಪಾಲಯ್ಯ ಅವರು ಕೋವಿಡ್ ಹಾಗೂ ನಿಯಂತ್ರಣ ಕುರಿತಂತೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜನರಿಗಾಗಿ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ತಜ್ಞ ವೈದ್ಯರು ಸಲಹೆ, ಮಾರ್ಗದರ್ಶನ ನೀಡುವ ಜತೆಗೆ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು.
ಡಾ.ಸತ್ಯನಾರಾಯಣ ಮೈಸೂರು ಮಾತನಾಡಿ, ಮುಖ್ಯವಾಗಿ ಅಪಾರ್ಟ್‌ಮೆಂಟ್ ಸೇರಿದಂತೆ ಜನವಸತಿ ಹೆಚ್ಚಾಗಿರುವ ಕಡೆ ಮೊಬೈಲ್ ಘಟಕಗಳ ಮೂಲಕ ಅರ್ಹರಿಗೆ ಲಸಿಕೆ ಹಾಕಿಸಲು ಒತ್ತು ನೀಡಬೇಕು. ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆ, ನರ್ಸಿಂಗ್ ಹೋಂ, ಕೋವಿಡ್ ಕೇರ್ ಸೆಂಟರ್‌ಗಳನ್ನು ಒಟ್ಟುಗೂಡಿಸಿ ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸಲು ಕಾಲ್ ಸೆಂಟರ್ ಆರಂಭಿಸ ಬಹುದು. ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದಾ ದರೆ ಸಂಬಂಧಪಟ್ಟ ಆಸ್ಪತ್ರೆಗೆ ಮೊದಲೇ ಮಾಹಿತಿ ನೀಡಿ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ವ್ಯವಸ್ಥೆ ರೂಪಿಸಬಹುದು.
ಜ್ವರ ಕಾಣಿಸಿಕೊಂಡ ಆರಂಭದಲ್ಲಿ ನಿರ್ಲಕ್ಷಿಸಿ ಏಳು ದಿನಗಳ ಬಳಿಕ ಉಲ್ಬಣಿಸಿದ್ದರೆ ಚಿಕಿತ್ಸೆ ಕ್ಲಿಷ್ಟಕರವಾಗಲಿದೆ. ಅಗತ್ಯವಿದ್ದವರಿಗೆ ವೆಂಟಿಲೇಟರ್‌ಸಹಿತ ಹಾಸಿಗೆ ಸಿಗುವಂತೆ ಮೇಲ್ವಿಚಾರಣೆ ನಡೆಸ ಬೇಕು. ಹೋಂ ಕ್ವಾರಂಟೈಟನ್‌ನಲ್ಲಿ ಇರುವವರಿಗೆ ಇಸ್ಕಾನ್‌ನಿಂದ ಕೆಲ ದಿನದ ಮಟ್ಟಿಗೆ ಊಟ ಪೂರೈಸುವಂತಾದರೆ ಉತ್ತಮ ಎಂದರು.
ಜೂಮ್ ಆ್ಯಪ್‌ನಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕ್ ಚಂದ್ರ, ಬೆಂಗಳೂರಿನಲ್ಲಿ ನಿತ್ಯ 10,000 ಹೊಸ ಪ್ರಕರಣ ವರದಿಯಾಗುತ್ತಿದ್ದು, ಇಲಾಖೆ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಎಲ್ಲರೂ ಕೈಜೋಡಿಸಿದರಷ್ಟೇ ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಸಾಧ್ಯ ಎಂದರು.
ತಜ್ಞರಾದ ಡಾ. ಮಹೇಂದ್ರ, ಬಿಬಿಎಂಪಿ ಆರೋಗ್ಯ ವಿಭಾಗದ ಶಿವಸ್ವಾಮಿ, ಮಂಜುಳಾ ಪಾಲ್ಗೊಂಡಿದ್ದರು. ಸಂವಾದದಲ್ಲಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಮಾಜಿ ಉಪಮೇಯರ್ ಎಸ್. ಹರೀಶ್ ಇತರರಿದ್ದರು.