ಮನುಷ್ಯ ಅತ್ಯಂತ ಬುದ್ಧಿವಂತ ಜೀವಿ. ಮನುಷ್ಯನ ವಾಸಕ್ಕೆ ಯೋಗ್ಯವಾದ ಈ ಭೂಮಿಯನ್ನು ನಾವು ಪರಿಸರವೆಂದು ಹೇಳುತ್ತೇವೆ. ಇಲ್ಲಿ ಬಹು ವಿಧದ ಜೀವ ವೈವಿಧ್ಯತೆ ಕಾಣಬಹುದಾಗಿದೆ. ಇಲ್ಲಿ ಗಾಳಿ, ನೀರು, ಸದಾ ಹಸುರು ಇದು ಉಸಿರಾಗಿದೆ. ಇದನ್ನು ಕಲುಷಿತಗೊಳಿಸಿದರೆ ಮನುಷ್ಯ ತನ್ನ ಶವದ ಪೆಟ್ಟಿಗೆಗೆ ತಾನೇ ಮೊಳೆ ಹೊಡೆ ದು ಕೊಂಡಂತೆ.
ಪರಿಸರ ಸಂರಕ್ಷಣೆಗೆ ಪರಿಸರದ ದಿನದ ಆವಶ್ಯಕತೆ ಇಲ್ಲ. ದಿನದ 24 ಗಂಟೆಯೂ ಮತ್ತು ಮನುಷ್ಯ ಜೀವಿತದ ಎಲ್ಲ ಕ್ಷಣಗಳು ಪರಿಸರ ರಕ್ಷಣೆಗೆ ಮೀಸಲಾಗಿರಬೇಕು. ವಿಪರೀತ ಪ್ಲಾಸ್ಟಿಕ್ ಬಳಕೆ, ಕಾರ್ಖಾನೆಯಿಂದ ಹೊರ ಬರುವ ಹೊಗೆ, ತ್ಯಾಜ್ಯ ಇತ್ಯಾದಿ ಎಲ್ಲವನ್ನೂ ನಾವು ನಿಯಂತ್ರಣದಲ್ಲಿಡಬೇಕಿದೆ. ಇದನ್ನು ವಿಲೇ ಮಾಡಿ ಸಮರ್ಪಕವಾಗಿ ಮಣ್ಣಿಗೆ ಸೇರಿಸುವುದು ಉತ್ತಮ ಕ್ರಮ. ಇದು ಪರಿಸರ ಸಂರಕ್ಷಣೆಗೆ ಸಹಕಾರಿ.
ಪರಿಸರದಲ್ಲಿ ಹೆಚ್ಚು ಮಣ್ಣಿನ ವಾಸನೆ ಹರಡುತ್ತಿದೆ. ಮೊದಲಾದರೆ ಕಾರ್ಬನ್ ಡೈ ಆಕ್ಸೈಡ್,ಫ್ಯಾಕ್ಟರಿಗಳ ಹೊಗೆ, ಪ್ಲ್ರಾಸ್ಟಿಕ್ ಸುಟ್ಟ ವಾಸನೆ, ವಾಹನಗಳ ಹೊಗೆ ಇತ್ಯಾದಿ ಕಲ್ಮಶಗಳು ಗಾಳಿಯಲ್ಲಿ ತೇಲಿ ಬರುತ್ತಿತ್ತು. ಇಂದು ಗಾಳಿ ಬೀಸಿದರೂ ಕೂಡ ಅದು ತಂಗಾಳಿ ಪರಿಮಳವನ್ನೇ ತಂದು ನೀಡುತ್ತಿದೆ.
ಪರಿಸರ ಸಂರಕ್ಷಣೆಗೆ ಮೊದಲು ಮರಗಳನ್ನು ಬೆಳಸಬೇಕು. ಒಂದು ಮರ ಕಡಿದರೆ ಅದಕ್ಕೆ ಸಮನಾಗಿ ನಾವು ಸಾವಿರ ಮರಗಳನ್ನು ನಡೆಸ ಬೇಕು ಎಂಬ ಕಾನೂನು ಬಂದಾಗ ಪರಿಸರ ಜಾಗೃತಿ ಆಗಲು ಸಾಧ್ಯ. ಪರಿಸರ ಉಳಿದರೇ ಮಾತ್ರ ಮಾನವ ಸಂಸ್ಕೃತಿ ಉಳಿಯುತ್ತದೆ ಎಂಬುದು ನಮಗೆ ಅರಿವಿರಬೇಕು.
ಮನುಷ್ಯ ತನ್ನ ವಿಕೃತಿಯಿಂದ ಕಾಡನ್ನು ಕಡಿಯುವ ಮೂಲಕ ಉರುವಲು ಕಟ್ಟಿಗೆಗಳನ್ನು ಬಳಸುವುದು ಕೂಡ ಸದ್ಯದ ಮಟ್ಟಿಗೆ ಕಡಿಮೆಯಾಗುತ್ತಿದೆ. ಇನ್ನೂ ನಾವು ಪರಿಸರ ಸಂರಕ್ಷಣೆ ಮಾಡಬೇಕಾದರೆ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ಮತ್ತು ಪೆಟ್ರೋಲ್ ಡಿಸೇಲ್ ಬಳಕೆಯನ್ನು ನಿಲ್ಲಿಸಿ ಸೋಲಾರ್ ವಿದ್ಯುತ್ ಮೂಲಕ ಹೆಚ್ಚಾಗಿ ಬಳಸಿದರೆ, ಪರಿಸರ ಸಮತೋಲನದಲ್ಲಿರುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಸಮೃದ್ಧಿ ಉಜ್ವಲ ಭವಿಷ್ಯದಲ್ಲಿರುತ್ತದೆ ಎಂದರೆ ತಪ್ಪಿಲ್ಲ. ಆದಷ್ಟು ಈಗಲಾದರೂ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯೇ ಇರುವಷ್ಟು ಜಾಗದಲ್ಲಿ ಪುಟ್ಟ ಪುಟ್ಟ ಸಸಿಗಳನ್ನು ನೆಟ್ಟು ಪ್ರಕೃತಿಗೆ ಸಹಾಯವನ್ನು ಮಾಡುವ ಕೆಲಸ ಆಗಬೇಕು ಅದು ನಮ್ಮ ಹೊಣೆಯೂ ಕೂಡ.
ಯಶಸ್ವಿ ದೇವಾಡಿಗ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ