ಚಿಕ್ಕಬಳ್ಳಾಪುರ: ಕೋವಿಡ್ 19 ಸಂಕಷ್ಟದಲ್ಲಿ ಸಿಲುಕಿ ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಬಡವರಿಗೆ, ನಿರ್ಗತಿಕರಿಗೆ ಸಾಕಷ್ಟು ಮಂದಿ ದಾನಿಗಳು ಮುಂದೆ ಬಂದು ಉದಾರತೆ ಯಿಂದ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಒಂದೆಡೆ, ಮತ್ತೂಂದೆಡೆ ಕೋವಿಡ್ 19 ಲಾಕ್‌ಡೌನ್ ಬಂಡವಾಳ ಮಾಡಿಕೊಂಡು ಕೆಲವರು ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಶೇ.20ರಿಂದ 30 ರಷ್ಟು ಹೆಚ್ಚಳ: ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ತಿಂಗಳಿಂದ ಮನೆಯಲ್ಲಿ ಲಾಕ್ ಡೌನ್ ಆಗಿರುವ ನಾಗರಿಕರು ತಮಗೆ ಅವಶ್ಯಕ ವಾದ ದಿನಸಿ ಪದಾರ್ಥಗಳ ಖರೀದಿಗೆ ಬಂದಾಗ ಬೆಲೆ ಏರಿಕೆ ಕೈ ಕಚ್ಚುತ್ತಿದೆ. ಅವಶ್ಯಕವಾದ ಅಕ್ಕಿ, ಸಕ್ಕರೆ, ಟೀ., ಗೋಧಿ, ಕಾಫಿ ಪುಡಿ, ಮೊಟ್ಟೆ, ಉಪ್ಪು, ಬೇಳೆಕಾಳುಗಳು ಮತ್ತಿತರ ವಸ್ತುಗಳು ನಿಗದಿತ ಬೆಲೆಗಿಂತ ಶೇ.20 ರಿಂದ 30 ರಷ್ಟು ಬೆಲೆ ಹೆಚ್ಚಿಸಿ ಮಾರಾಟ ಮಾಡುತ್ತಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅನಿವಾರ್ಯವಾಗಿ ಕೇಳಿದ ಬೆಲೆಗೆ ಖರೀದಿ ಮಾಡುವಂತಾಗಿದೆ.
ವಿಶೇಷವಾಗಿ ಮಾರುಕಟ್ಟೆಯಲ್ಲಿ ಅಕ್ಕಿ,ಸಕ್ಕರೆ, ನುಚ್ಚು ಮತ್ತಿತರ ಅವಶ್ಯಕ ಬೆಲೆಗಳ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆದರೂ ಪ್ರಯೋಜನವಿಲ್ಲ ಎಂಬ ಆರೋಪ ಜನರದ್ದಾಗಿದೆ. ಇನ್ನೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಬೇಡಿಕೆಯಂತೆ ಸರಬರಾಜು ಆಗುತ್ತಿಲ್ಲ.ಸಗಟು ಮಳಿಗೆಗಳಲ್ಲಿ ನಮಗೆ ಬೆಲೆ ಜಾಸ್ತಿಯಾಗಿದೆ. 5 ಸಾವಿರ ರೂ.ಗೆ ಖರೀದಿ ಮಾಡಿಕೊಂಡು ಬರುತ್ತಿದ್ದ ವಸ್ತುಗಳು ಈಗ ಏಳು, ಎಂಟು ಸಾವಿರ ಕೊಡಬೇಕೆಂದು ನಗರದ ಎಪಿಎಂಸಿ ಬಳಿ ದಿನಸಿ ಅಂಗಡಿ ನಡೆಸುತ್ತಿರುವ ಹೆಸರು ಹೇಳಲು ಇಚ್ಛಿಸದ ಮಾಲೀಕ ಉದಯವಾಣಿಗೆ ತಿಳಿಸಿದರು.
ಹಳ್ಳಿ ಜನರ ಪಾಡು ಕೇಳ್ಳೋರಿಲ್ಲ: ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳಿಗೆ ಲಾಕ್ ಡೌನ್ ಅನುಷ್ಠಾನದ ವಿಚಾರದಲ್ಲಿ ದಿನ ಬೆಳಗಾ ದರೆ ನಗರದ ಜನತೆಯನ್ನು ನಿಯಂತ್ರಿಸುವುದರ ಜೊತೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸುಧಾರಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಜನರ ಪರಿಸ್ಥಿತಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟದಲ್ಲಿದ್ದರೂ ಯಾರು ಗಮನ ಕೊಡುವವರಿಲ್ಲ. ನಗರಕ್ಕಿಂತ ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿ ಅಗತ ವಸ್ತುಗಳ ಬೆಲೆ ದುಪ್ಪಟ್ಟುಗೊಂಡಿವೆ.
ಜಿಲ್ಲೆಯಲ್ಲಿ ಗೌರಿಬಿದನೂರು, ಚಿಂತಾಮಣಿ ನಗರಗಳಲ್ಲಿ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕರಿಂದ ಇಲಾಖೆಗೆ ಬಂದಿದೆ. ಈ ಬಗ್ಗೆ ನಾವು ಕೂಡ ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದೇವೆ. ಯಾರೇ ಅಂಗಡಿ ಮಾಲೀಕರು ಜನರ ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದರೆ ಸೂಕ್ತ ಕ್ರಮ ವಹಿಸುತ್ತೇವೆ.
– ಸೋಮಶೇಖರಪ್ಪ, ಉಪ ನಿರ್ದೇಶಕರು, ಆಹಾರ ಇಲಾಖೆ
-ಕಾಗತಿ ನಾಗರಾಜಪ್ಪ