Advertisement

ಮತ್ತೆ ಬಂತು ಕೋಳಿ ಮಾಂಸಕ್ಕೆ ಬೆಲೆ

11:47 AM May 16, 2020 | Suhan S |

ಧಾರವಾಡ: ಕೋವಿಡ್ ಲಾಕ್‌ಡೌನ್‌ ಪರಿಣಾಮ ಜಿಲ್ಲೆಯ ಬಹುತೇಕ ಕೋಳಿ ಫಾರಂಗಳು ಖಾಲಿ-ಖಾಲಿ ಆಗಿದ್ದು, ರೈತರು ಬೆಳೆದ ಫಸಲು, ಕೃಷಿ ಚಟುವಟಿಕೆ ಸಾಮಗ್ರಿ ಇಡುವ ಗೋದಾಮುಗಳಾಗಿ ಮಾರ್ಪಟ್ಟಿವೆ.

Advertisement

ಜಿಲ್ಲೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಕೋಳಿ ಫಾರಂಗಳಿವೆ. ಈ ಪೈಕಿ ಪಶು ಸಂಗೋಪನಾ ಇಲಾಖೆಯಿಂದ ಅನುಮತಿ ಪಡೆದ 162 ಕೋಳಿ ಫಾರಂಗಳಿವೆ. ಇವುಗಳಲ್ಲಿ ಶೇ. 60ರಿಂದ ಶೇ.70ರಷ್ಟು ಕೋಳಿ ಫಾರಂಗಳು ಬಂದ್‌ ಆಗಿವೆ. ಕೋವಿಡ್ ಹಾಗೂ ಹಕ್ಕಿ ಜ್ವರದ ಭೀತಿ ಜೊತೆಗೆ ಲಾಕ್‌ಡೌನ್‌ ಪರಿಣಾಮದಿಂದ ಸದ್ಯಕ್ಕೆ ಕೋಳಿ ಸಾಕಾಣಿಕೆ ಚಟುವಟಿಕೆ ಸ್ಥಗಿತವಾಗಿದೆ. ಹೀಗಾಗಿ ಈ ಫಾರಂಗಳು ಇದೀಗ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ದಾಸ್ತಾನು ಮಾಡುವ ಹಾಗೂ ಕೃಷಿ ಚಟುವಟಿಕೆ ಸಾಮಗ್ರಿ ಇಡುವ ಗೋದಾಮುಗಳಾಗಿವೆ.

ಖಾಸಗಿ ಕಂಪನಿಗಳೊಂದಿಗೆ ಒಪ್ಪದ ಮಾಡಿಕೊಂಡಿದ್ದ ಕೋಳಿ ಫಾರಂಗಳ ಮಾಲೀಕರಿಗೆ ಲಾಕ್‌ಡೌನ್‌ ಸ್ಪಲ್ಪ ಹೊಡೆತ ಕೊಟ್ಟರೆ, ಸ್ವಯಂ ಕೋಳಿ ಸಾಕಾಣಿಕೆ ಮಾಡಿದವರಿಗೆ ದೊಡ್ಡ ಹೊಡೆತ ಕೊಟ್ಟಿದೆ. ಕೋಳಿ ಸಾಕಾಣಿಕೆಗೆ ಹಿಂದೇಟು: ಮಾಂಸ ಮಾರಾಟ ಮಾಡುವ “ಸುಗನಾ’ ಸೇರಿದಂತೆ ಕೆಲ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕೋಳಿ ಫಾರಂ ಮಾಲೀಕರು ಕೇವಲ ಅವುಗಳ ನಿರ್ವಹಣೆ ಮಾಡಿದರೆ ಸಾಕು. ಮರಿ ತಂದು ಕೊಡುವುದರ ಜೊತೆಗೆ ಅವುಗಳ ಆಹಾರ, ಔಷದೋಪಚಾರವನ್ನು ಆಯಾ ಕಂಪನಿಗಳೇ ನಿರ್ವಹಿಸುತ್ತವೆ. 45 ದಿನಗಳ ಬಳಿಕ ಉತ್ತಮವಾಗಿ ಬೆಳೆದ ಕೋಳಿಗಳನ್ನು ತೂಕ ಮಾಡಿ ಕಂಪನಿಗಳು ತೆಗೆದುಕೊಂಡು ಹೋಗುತ್ತವೆ. ಈ ವೇಳೆ ಕೆ.ಜಿಗೆ ಇಂತಿಷ್ಟು ಹಣ ಎಂದು ಕೋಳಿ ಫಾರಂ ಮಾಲೀಕರಿಗೆ ನೀಡುತ್ತವೆ. ಆದರೆ ಲಾಕ್‌

ಡೌನ್‌ ಅವಧಿಯಲ್ಲಿ ಬೆಳೆದು ನಿಂತಿದ್ದ ಕೋಳಿಗಳನ್ನು ಕಂಪನಿಗಳು ಸಹ ತೆಗೆದುಕೊಂಡು ಹೋಗಲು ಹಿಂದೇಟು ಹಾಕಿದ್ದವು. ಇದರಿಂದ 45 ದಿನಗಳ ಬಳಿಕ ಮತ್ತೆ ಕೋಳಿ ತೂಕದಲ್ಲಿ ಇಳಿಕೆಯಾದ ಪರಿಣಾಮ ಫಾರಂ ಮಾಲೀಕರಿಗೆ ನಷ್ಟ ಉಂಟಾಗಿತ್ತು. ಕಂಪನಿಗಳ ಜೊತೆಗೆ ಒಪ್ಪಂದವಿಲ್ಲದೇ ಸ್ವಯಂ ಕೋಳಿ ಸಾಕಾಣಿಕೆ ಮಾಡಿದ್ದ ಫಾರಂ ಮಾಲೀಕರ ಕೋಳಿಗೆ ಬೆಲೆ ಸಿಗದ ಕಾರಣ ಸಂಕಷ್ಟ ಅನುಭವಿಸುವಂತೆ ಆಗಿತ್ತು. ಹೀಗಾಗಿ ಸದ್ಯಕ್ಕೆ ಲಾಕ್‌ ಡೌನ್‌ ಮುಗಿಯುವ ವರೆಗೂ ಕೋಳಿ ಸಾಕಾಣಿಕೆಗೆ ಫಾರಂ ಮಾಲೀಕರು ಹಿಂದೇಟು ಹಾಕುವಂತಾಗಿದೆ.

ಜೀವಂತ ಸಮಾಧಿ ಮಾಡಿದ್ರು: ಕಳೆದ ತಿಂಗಳು ಕೋವಿಡ್ ಭೀತಿಯಿಂದ ಮಾಂಸ ಸೇವನೆಗೆ ಹಿನ್ನಡೆ ಹಾಗೂ ಮಾಂಸಾಹಾರ ಹೋಟೆಲ್‌ ಬಾಗಿಲು ಮುಚ್ಚಿದ ಪರಿಣಾಮ ಕೋಳಿ ಫಾರಂನ ಕೋಳಿಗಳನ್ನು ಕೇಳುವವರೇ ಇಲ್ಲದಂತಾಗಿತ್ತು. ಇದರಿಂದ ಕೋಳಿ ಮಾಂಸದ ಬೆಲೆಯಲ್ಲೂ ಇಳಿಕೆ ಆಗುವುದರ ಜೊತೆಗೆ ಮಾಂಸದ ಅಂಗಡಿಗಳು ಸಹ ಕೆಲ ಸಮಯ ಬಾಗಿಲು ತೆರೆಯಲು ಹಿಂದೇಟು ಹಾಕಿದ ಪರಿಣಾಮ ಕೋಳಿಗೆ ಬೆಲೆ ಸಿಗದೇ ಕೋಳಿ ಫಾರಂ ಮಾಲೀಕರು ಸಂಕಷ್ಟಕ್ಕೆ ನಸಿಲುಕಿದ್ದರು. ಇದರಿಂದ ಹೊರಗೆ ಬರಲಾಗದೇ ಬೆಳೆದು ನಿಂತಿದ್ದ ಕೋಳಿಗಳ ಸಾಗಾಣಿಕೆ ಹಾಗೂ ಮಾರಾಟ ಮಾಡಲಾಗದೇ ಕೆಲ ಕೋಳಿ ಫಾರಂ ಮಾಲೀಕರು ತಮ್ಮ ಹೊಲದಲ್ಲಿಯೇ ತೆಗ್ಗು ತೆಗೆದು ಕೋಳಿಗಳನ್ನುಜೀವಂತ ಸಮಾಧಿ ಮಾಡಿದ್ದರು. ಇದೀಗ ಲಾಕ್‌ಡೌನ್‌ ಸಡಿಲಿಕೆ ಪರಿಣಾಮ ಮಾಂಸಾಹಾರ ಅಂಗಡಿಗಳು ಬಾಗಿಲು ತೆರೆದಿವೆ. ತಿಂಗಳ ಬಳಿಕ ಜನರು ಮಾಂಸದ ರುಚಿ ನೋಡಲು ಮುಂದಾಗಿದ್ದಾರೆ. ಆದರೆ ಕೋಳಿ ಫಾರಂಗಳು ಬಾಗಿಲು ಮುಚ್ಚಿರುವ ಕಾರಣ ಕೋಳಿಗಳ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಇದರಿಂದ ಕೋಳಿ ಮಾಂಸದ ಬೆಲೆಯಲ್ಲಿ ಗಣನೀಯ ಏರಿಕೆ ಆಗಿದೆ.

Advertisement

ಕೋಳಿ ಫಾರಂಗಳು ಮತ್ತೆ ಬಾಗಿಲು ತೆರೆದು, ಸಾಕಾಣಿಕೆಗೆ ಮುಂದಾದರೂ ಅವು ಗ್ರಾಹಕರ ಕೈಗೆ ಸಿಗಬೇಕಾದರೆ ಒಂದೂವರೆ ತಿಂಗಳಾದರೂ ಬೇಕು. ಆದರೆ ಲಾಕ್‌ಡೌನ್‌ ಮುಗಿಯುವ ವರೆಗೂ ಕೋಳಿ ಸಾಕಾಣಿಕೆಗೆ ಕೆಲ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲ ಮಾಲೀಕರು ಸಾಕಾಣಿಗೆಗೆ ಮುಂದಾಗಿದ್ದರೂ ಕೋಳಿ ಮಾಂಸದ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ.

ಕೋವಿಡ್ ಲಾಕ್‌ಡೌನ್‌ ಆರಂಭಕ್ಕೂ ಮುನ್ನವೇ ಬೆಳೆದು ನಿಂತಿದ್ದ ಕೋಳಿಗಳನ್ನು ಕಂಪನಿಗಳೇ ಬಂದು ತೆಗೆದುಕೊಂಡು ಹೋದ ಪರಿಣಾಮ ನಷ್ಟದಿಂದ ಪಾರಾಗಿದ್ದೇವೆ. ಆದರೆ ಲಾಕ್‌ಡೌನ್‌ ಅವಧಿಯಲ್ಲಿ ಕೋಳಿಗಳು ಮಾರಾಟವಾಗದೇ ಉಳಿದು ಕೆಲ ಕೋಳಿ ಫಾರಂ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಸದ್ಯ ಕಂಪನಿಗಳು ಮರಿ ನೀಡಲು ಮುಂದಾಗಿದ್ದರೂ ಲಾಕ್‌ಡೌನ್‌ ಮುಗಿಯುವ ವರೆಗೂ ಕೋಳಿ ಸಾಕಾಣಿಕೆ ಮುಂದಾಗದಿರಲು ನಿರ್ಧರಿಸಿದ್ದೇವೆ. -ಅರುಣ ಮಸೂತಿ, ಕೋಳಿ ಫಾರಂ ಮಾಲೀಕ

ಜಿಲ್ಲೆಯಲ್ಲಿ 163 ಕೋಳಿ ಫಾರಂಗಳ ಶೇ.50ಕ್ಕೂ ಹೆಚ್ಚು ಕೋಳಿ ಫಾರಂಗಳು ಬಂದ್‌ ಆಗಿದ್ದರೆ ಇಲಾಖೆ ಸಮೀಕ್ಷೆ ಪ್ರಕಾರ ಕೋವಿಡ್ ಹಾಗೂ ಹಕ್ಕಿ ಜ್ವರದ ಭೀತಿಯಿಂದ ಜಿಲ್ಲೆಯಲ್ಲಿ ಶೇ.70ರಷ್ಟು ಮಾಂಸಾಹಾರ ಸೇವನೆ ಕಡಿಮೆ ಆಗಿದೆ. ಕೋಳಿ ಫಾರಂಗಳ ಕಾರ್ಯ ನಿರ್ವಹಣೆ ಬಗ್ಗೆ ಸಮೀಕ್ಷೆ ಕೈಗೊಳ್ಳಲು ಸದ್ಯಕ್ಕೆ ಹಳ್ಳಿ-ಹಳ್ಳಿಗೂ ಹೋಗದಂತಹ ಸ್ಥಿತಿ ಇದೆ. -ಸಾಯಿಕುಮಾರ ಹಿಳ್ಳಿ, ಸಹಾಯಕ ನಿರ್ದೇಶಕ, ಮಾದರಿ ಸಮೀಕ್ಷಾ ಯೋಜನೆ, ಪಶು ಸಂಗೋಪನಾ ಇಲಾಖೆ

 

 

ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next