Advertisement

ಹೆಜ್ಜೆ ಹೆಜ್ಜೆಗೂ ಹಣ ಕೇಳುವ ಕೈಗಳು

10:26 AM Dec 27, 2019 | Suhan S |

ಬೆಂಗಳೂರು: ಹೆರಿಗೆ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಬಾಣಂತಿಯರ ಖಾಸಗಿತನಕ್ಕೆ ಒತ್ತು ನೀಡಲಾಗುತ್ತದೆ. ಮಕ್ಕಳಿಗೆ ಹಾಲುಣಿಸಲು, ಬಟ್ಟೆ ಬದಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಬಿಬಿಎಂಪಿಯ ಗಂಗಾನಗರದ ಹೆರಿಗೆ ಆಸ್ಪತ್ರೆ ಇದಕ್ಕೆ ಭಿನ್ನ!

Advertisement

ಇಲ್ಲಿ ಬಾಣಂತಿಯರಿಗೆ ಮೀಸಲಿರಿಸಿರುವ ಸಾಮಾನ್ಯ ವಾರ್ಡ್‌ನಲ್ಲಿ ರೋಗಿಗಳ ಹಾಸಿಗೆಗಳ ನಡುವೆ ಕನಿಷ್ಠ ಪರದೆ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ, ಇಲ್ಲಿ ದಾಖಲಾಗುವ ಬಾಣಂತಿಯರು ಹಾಗೂ ಅವರನ್ನು ನೋಡಲು ಬರುವ ಸಂಬಂಧಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬಿಬಿಎಂಪಿಯ ಹೆರಿಗೆ ಆಸ್ಪತ್ರೆಗಳಿಂದ ಸಾವಿರಾರು ಬಡ ಜನರಿಗೆ ನೆರವಾಗುತ್ತಿದೆ. ಚಿಕಿತ್ಸೆ ಮತ್ತು ವೈದ್ಯಕೀಯ ಸೇವೆಗಳ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯವಿದೆ. ಆದರೆ, ಗಂಗಾನಗರ ಹೆರಿಗೆ ಆಸ್ಪತ್ರೆ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಸೇವೆ ನೀಡುವಲ್ಲಿ ತಾರತಮ್ಯ ಮಾಡುತ್ತಾರೆ. ಹಣ ನೀಡಿದವರಿಗೆ ತುರ್ತಾಗಿ ಚಿಕಿತ್ಸೆ ನೀಡುತ್ತಾರೆ. ಹಣ ನೀಡದಿದ್ದರೆ ಉದಾಸೀನ ಮಾಡುತ್ತಾರೆ ಎಂದು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಾಣಂತಿಯರು ಹಾಗೂ ಅವರ ಸಂಬಂಧಿಕರು ದೂರುತ್ತಾರೆ. ಇದು ಈ ಭಾಗದ ಸಾರ್ವಜನಿಕರು ಪಾಲಿಕೆಯ ಹೆರಿಗೆ ಆಸ್ಪತ್ರೆಯಿಂದ ವಿಮುಖರಾಗುವುದಕ್ಕೆ ಎಡೆಮಾಡಿಕೊಡುತ್ತಿದೆ.

ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ: ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸಾವಿರಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಪ್ರತಿ ತಿಂಗಳು 35ರಿಂದ 40 ಹೆರಿಗೆ ಮಾಡಿಸಲಾಗುತ್ತದೆ ಎಂದು ಆಸ್ಪತ್ರೆಯ ಸಹಾಯಕ ಸಿಬ್ಬಂದಿ ತಿಳಿಸಿದ್ದಾರೆ. ಇಷ್ಟೋಂದು ಮಂದಿ ಚಿಕಿತ್ಸೆಗೆಂದು ಬರುತ್ತಿರುವುದ ರಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆ ಇದೆ. ಬಾಣಂತಿಯರು ಹಾಗೂ ಮಕ್ಕಳ ಸುರಕ್ಷತೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಿ, ಶೌಚಾಲಯ ಮತ್ತು ನೀರಿನ ಸಮಸ್ಯೆಗಳಿಗೆ ಬಿಬಿಎಂಪಿ ಪರಿಹಾರ ಕಂಡುಕೊಳ್ಳಬೇಕಿದೆ. ಅಲ್ಲದೆ, ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರಿಗೂ ಬಿಸಿ ಮುಟ್ಟಿಸುವ ಕೆಲಸವಾಗಬೇಕಿದೆ.

ಬಾಣಂತಿಯರಿಗೆ ಮುಜುಗರ: ಆಸ್ಪತ್ರೆಯಲ್ಲಿ ಬಾಣಂತಿಯರು ಮಗುವಿಗೆ ಹಾಲುಣಿಸಲೂ ಸಹ ಮುಜುಗರ ಪಡುತ್ತಿರುವ ವಾತಾವರಣವಿದೆ. ಬಾಣಂತಿಯರನ್ನು ನೋಡಲು ಅವರ ಸಂಬಂಧಿಕರು, ಪುರುಷರು ಆಸ್ಪತ್ರೆಗೆ ಬರುತ್ತಾರೆ. “ಅವರೆದುರು ಮಕ್ಕಳಿಗೆ ಹಾಲುಣಿಸಲು ಹೇಗೆ ತಾನೆ ಸಾಧ್ಯ. ಹೀಗಾಗಿ, ಮಗುವಿಗೆ ಹಾಲುಣಿಸುವಾಗ ಯಾರನ್ನಾದರೂ ಅಡ್ಡ ನಿಲ್ಲುವಂತೆ ಹೇಳ ಬೇಕಾಗುತ್ತದೆ’ ಎಂದು ಕವಿತಾ (ಹೆಸರು ಬದಲಾಯಿಸಲಾಗಿದೆ) ಪರಿಸ್ಥಿತಿ ವಿವರಿಸುತ್ತಾರೆ.

ಮನೆಯಿಂದ ನೀರು ತರಬೇಕು!:  ಆಸ್ಪತ್ರೆಯಲ್ಲಿ ಬಿಸಿ ನೀರಿನ ವ್ಯವಸ್ಥೆಯೇ ಇಲ್ಲ ಎಂದು ಬಾಣಂತಿಯೊಬ್ಬರ ಸಂಬಂಧಿ ಬಸಮ್ಮ ದೂರುತ್ತಾರೆ. ಶೌಚಾಲಯದಲ್ಲೂ ಸರಿಯಾಗಿ ನೀರು ಬರುವುದಿಲ್ಲ. ಮಕ್ಕಳಿಗೆ ಮತ್ತು ಬಾಣಂತಿಯರ ಆರೈಕೆ ಮಾಡಲು ಬಿಸಿ ನೀರಿನ ವ್ಯವಸ್ಥೆಯೇ ಇಲ್ಲ. ನೀರಿನ ಸಮಸ್ಯೆ ಇರುವುದರಿಂದ ಮನೆ ಅಥವಾ ಅಕ್ಕಪಕ್ಕದ ಹೋಟೆಲ್‌ಗ‌ಳಿಂದ ನೀರು ತರುತ್ತಿದ್ದೇವೆ ಎಂದು ಅಳಲು ತೋಡಿಕೊಳ್ಳುತ್ತಾರೆ.

Advertisement

ದುಡ್ಡು ಕೊಟ್ಟರೆ ಫ‌ಸ್ಟ್‌ ಕ್ಲಾಸ್‌ ಟ್ರೀಟ್ಮೆಂಟ್!:  ಗಂಗಾನಗರ ಹೆರಿಗೆ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರು ನೀಡುವ ಟಿಪ್ಸ್‌(ಹಣ) ಆಧಾರದಲ್ಲಿ ಅವರಿಗೆ ವೈದ್ಯಕೀಯ ಸೇವೆ ಲಭ್ಯವಾಗುತ್ತದೆ ಎಂಬ ಆರೋಪವಿದೆ. ಹೆಬ್ಟಾಳದ ಕೇಂದ್ರ ಭಾಗದಲ್ಲಿರುವ ಆಸ್ಪತ್ರೆಗೆ ಸಾವಿರಾರು ಮಂದಿ ಬಡವರು ಬರುತ್ತಾರೆ. ಆದರೆ, ಇಲ್ಲಿನ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಹಣ ನೀಡುವವರಿಗೆ ಮಾತ್ರ ಆದ್ಯತೆ ನೀಡುತ್ತಾರೆ. ಹೆಚ್ಚು ಮುತುವರ್ಜಿ ವಹಿಸುತ್ತಾರೆ ಎಂದು ಶಾಹಿದಾ ಎಂಬವರು ದೂರುತ್ತಾರೆ. ಅಲ್ಲದೆ, ಮಕ್ಕಳಿಗೆ ಲಸಿಕೆ ಹಾಕುವಾಗಲೂ ಹಣ ನೀಡದೆ ಕೆಲಸ ನಡೆಯದು ಎಂಬ ದೂರುಗಳಿಗವೆ.

ಆಸ್ಪತ್ರೆಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಸಾರ್ವಜನಿಕರಿಂದ ಹಣ ಕೇಳುವ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. –ಕಿ ಪ್ರಮೀಳಾ.ಎಂ, ಗಂಗಾನಗರ ವಾರ್ಡ್‌ ಪಾಲಿಕೆ ಸದಸ್ಯೆ

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next