Advertisement

ಸಿಲಿಕಾನ್‌ ಸಿಟಿ ದುಬಾರಿ ನಾಯಿಗಳ ದುನಿಯಾ

01:05 PM Jun 13, 2022 | Team Udayavani |

ಮಾನವನ ಇತಿಹಾಸದಲ್ಲಿ ಅವನ ಸಹಾಯಕ್ಕೆ, ರಕ್ಷಣೆಗಾಗಿ ನಿಂತ ನಿಯತ್ತಿನ ಪ್ರಾಣಿ ಶ್ವಾನ. ಆಹಾರವನ್ನು ಬಿಟ್ಟು ಏನನ್ನೂ ಅಪೇಕ್ಷಿಸದೆ ತನ್ನ ಮಾಲಿಕನಿಗೆ ಸೇವೆ ನೀಡುತ್ತಿದ್ದ ನಾಯಿಯಲ್ಲಿ ಈಗ ಅನೇಕ ತಳಿಗಳಿವೆ. ಅನೇಕ ಜಾತಿಗಳಿವೆ. ಋತುಮಾನ ಬದಲಾದಂತೆ ದೇಶ ವಿದೇಶದ ನಾಯಿಗಳು ನಮಗೆ ಕಾಣಸಿಗು ತ್ತಿವೆ. ಅವುಗಳಿಗಾಗಿಯೇ ಆಟಗಳು, ಕ್ರೀಡಾ ತರಬೇತಿಗಳನ್ನು ಏರ್ಪಡಿಸಲಾಗುತ್ತಿದೆ. ಉತ್ತಮ ತಳಿಯ ಶ್ವಾನಗಳನ್ನು ಎಷ್ಟೇ ಹಣವಾದರೂ ಕೊಟ್ಟು ಕೊಂಡು ಸಾಕುವ ಟ್ರೆಂಡ್‌ ರಾಜಧಾನಿಯಲ್ಲಿ ಹೆಚ್ಚುತ್ತಿದೆ. ಹಲವರು ತಾನು ತನ್ನ ಪೆಟ್‌ ಅನ್ನು ಕೊಂಡು ಸಾಕಿದ ಅನೇಕ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ವಿವಿಧ ತಳಿಗಳ ಮಾಹಿತಿ ಈ ವಾರದ ಸುದ್ದಿಸುತ್ತಾಟದಲ್ಲಿ.

Advertisement

ರಾಜಧಾನಿಯಲ್ಲಿ ಶ್ವಾನ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿವಿಧ ಜಾತಿಯ ನಾಯಿಗಳನ್ನು ಸಾಕುವ ಟ್ರೆಂಡ್‌ ಸೃಷ್ಟಿಯಾಗಿದೆ. ಅದರಲ್ಲೂ ಒಬ್ಬಂಟಿಯಾಗಿರು ವವರು ಶ್ವಾನಗಳನ್ನು ಹೆಚ್ಚಾಗಿ ಸಾಕುತ್ತಿದ್ದಾರೆ. ಆಶ್ಚರ್ಯ ಎಂದರೆ ಒಂದು ಕೋಟಿ ರೂ.ಮೊತ್ತದ ಶ್ವಾನವೂ ಸಹ ಇಲ್ಲಿ ಕಾಣಸಿಗುತ್ತಿದೆ. ಅಷ್ಟೇ ಅಲ್ಲ ನಗರದಲ್ಲಿ ಇತ್ತೀಚೆಗೆ ಶ್ವಾನಗಳಿಗೆ ವಿವಿಧ ಕ್ರೀಡೆಗಳು ನಡೆಯುತ್ತವೆ. ಓಟ, ಎತ್ತರ ಜಿಗಿತ ಸೇರಿದಂತೆ ಶ್ವಾನಗಳಿಗಾಗಿಯೇ ನಾನಾ ರೀತಿಯ ಆಟಗಳನ್ನು ಏರ್ಪಡಿಸಲಾಗುತ್ತಿದೆ. ಮೊದಲು ಶ್ವಾನಗಳನ್ನು ಜೀವ ರಕ್ಷಣೆಗೆ, ಹೊಲ, ಕಣ ಕಾಯಲು ಸಾಕುತ್ತಿದ್ದರು. ಹಾಗೂ ಕುರಿ, ಕತ್ತೆ, ಹಸು ಗಳನ್ನು ಕಾಯುವವರು ರಕ್ಷಣೆಗಾಗಿ ಜತೆಗೆ ನಾಯಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ತದನಂತರ ಶ್ವಾನಗಳನ್ನು ಪೊಲೀಸ್‌ ಇಲಾಖೆಯಲ್ಲಿ ಅಪರಾಧಿಗಳ ಪತ್ತೆಗೆ ಬಳಸಲು ಪ್ರಾರಂಭಿಸಿದರು. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಶ್ವಾನಗಳನ್ನು ಸಾಕುವುದು ಒಂದು ರೀತಿಯ ಹವ್ಯಾಸವಾಗಿದ್ದು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆ ಅವುಗಳನ್ನು ವಾಕಿಂಗ್‌ ಕರೆದುಕೊಂಡು ಹೋಗುವುದು, ಅದಕ್ಕಿಷ್ಟವಾದ ಆಹಾರವನ್ನು ತಿನಿಸುವುದು ಅದರೊಂದಿಗೆ ಆಟವಾಡುವುದು ರೂಢಿಗತವಾಗಿದೆ. ಪೊಮರೇನಿಯನ್‌, ಜರ್ಮನ್‌ ಶೆಫ‌ರ್ಡ್‌, ರಾಟ್ವಿಲರ್‌, ಲ್ಹಾಸಾ ಅಪ್ಸೊ, ಗೋಲ್ಡನ್‌ ರೆಟ್ರೈವರ್‌, ಮುಧೋಳ, ಪಗ್‌, ಪಿಟ್‌ಬುಲ್‌, ಹಸ್ಕಿ, ಲ್ಯಾಬ್‌, ಬಾಕ್ಸರ್‌ ಸೇರಿದಂತೆ ನಾನಾ ಜಾತಿಯ ನಾಯಿಗಳನ್ನು ಬೆಂಗಳೂರಿಗರು ಇಷ್ಟಪಟ್ಟು ಸಾಕುತ್ತಿದ್ದಾರೆ. ಶ್ವಾನಗಳು ನಿಯತ್ತಿಗೆ ಹೆಸರುವಾಸಿ. ಜತೆಗೆ ಅವು ನಮ್ಮಿಂದ ಆಹಾರವನ್ನು ಬಿಟ್ಟು ಬೇರೇನನ್ನೂ ನಿರೀಕ್ಷಿಸುವುದಿಲ್ಲ. ಯಾವ ಸಮಯದಲ್ಲಿಯೂ ಹೊರಗಿನಿಂದ ಮನೆಗೆ ಬಂದರೆ ಸಾಕು, ಋಷಿಯಿಂದ ಮೇಲೆ ಮೇಲೆ ಹಾರುತ್ತವೆ. ಶ್ವಾನಗಳ ಸ್ವಾಗತದಿಂದ ಹೊರಗಿನ ಆಯಾಸ ಪರಿಹಾರವಾಗುತ್ತದೆ ಎನ್ನುತ್ತಾರೆ ಶ್ವಾನ ಸಾಕುವವರು. ಅನೇಕ ಸಿನಿಮಾಗಳಲ್ಲಿ ಶ್ವಾನಗಳ ಬಳಕೆಯಿದೆ. ನಿಶ್ಶಬ್ದ, ಸಿಂಹದ ಮರಿ ಸೈನ್ಯ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿ ಶ್ವಾನಗಳನ್ನು ಬಳಸಲಾಗಿದೆ. ಇತ್ತೀಚೆಗೆ ತೆರೆಕಂಡ ಚಾರ್ಲಿ ಸಿನಿಮಾದ ಚಿತ್ರಕತೆ ನಾಯಿಯ ಮೇ ಕೇಂದ್ರೀಕೃತವಾಗಿದೆ. ಅದೆಷ್ಟೋ ಜನ ಚಾರ್ಲಿಯ ಪಾತ್ರವನ್ನೇ ನೋಡಲು ಸಿನಿಮಾದತ್ತಾ ಧಾವಿಸುತ್ತಿದ್ದಾರೆ.

ಸೈಬೀರಿಯನ್‌ ಹಸ್ಕಿ :

( ಬೆಲೆ : 40ರಿಂದ 50 ಸಾವಿರ ರೂ )

ನೋಡಲು ಇದೊಂದು ತೋಳದ ಹಾಗೆ ಕಾಣುತ್ತದೆ. ಆದರೆ, ಮಕ್ಕಳೊಂದಿಗೆ ಯಾವುದೇ ಅಪಾಯವಿಲ್ಲದೇ ಆಟ ಆಡುತ್ತದೆ. ತುಂಬಾ ಕ್ರಿಯಾಶಿಲವಾಗಿದ್ದು, ಇದರ ದೈಹಿಕ ನೋಟ ಚೆನ್ನಾಗಿರುತ್ತದೆ. ಈ ಜಾತಿಯ ನಾಯಿ ಸೆಕೆಗೆ ಹೊಂದಿಕೊಳ್ಳುವುದಿಲ್ಲ. ತಂಪು ವಾತಾವರಣದಲ್ಲಿ ಹೆಚ್ಚು ಬೆಳೆಸುತ್ತಾರೆ. ಬಸವೇಶ್ವರ ನಗರದ ಸೌರವ್‌ ಶೆಣೈ ಅವರು, ತಮ್ಮ ತಾಯಿ ಮನೆಯಲ್ಲಿ ಒಬ್ಬರೇ ಇರುತ್ತಾರೆ ಎಂದು ಹಸ್ಕಿ ಶ್ವಾನವನ್ನು ಖರೀದಿಸಿದರು.

Advertisement

ಈ ಶ್ವಾನದ ಮರಿಯು ಸರಿಸುಮಾರು 40ರಿಂದ 50 ಸಾವಿರ ರೂ. ಇದೆ. ಇವರು ಸಾಕಿರುವ ಕಿಯಾರ(ಶ್ವಾನ)ಗೆ ಒಂದು ವರ್ಷವಾಗಿದ್ದು, ಅನ್ನ, ರಾಯಲ್‌ ಕೆನಿನ್‌, ಚಿಕನ್‌ ಹಾಗೂ ಮೊಸರನ್ನವನ್ನು ಇಷ್ಟಪಟ್ಟು ತಿನ್ನುತ್ತದೆ. ಇದಕ್ಕೆ ಎರಡು ಬಾರಿ ಆದರೂ ವಾಕಿಂಗ್‌ ಕರೆದುಕೊಂಡು ಹೋಗಬೇಕು. ಇಲ್ಲವಾದರೆ ಗಲಾಟೆ ಮಾಡುತ್ತದೆ ಎನ್ನುತ್ತಾರೆ.

ಜರ್ಮನ್‌ ಶೆಫ‌ರ್ಡ್‌ :

( ಬೆಲೆ : 15ರಿಂದ 20 ಸಾವಿರ ರೂ)

ಜರ್ಮನ್‌ ಶೆಫ‌ರ್ಡ್‌ ಜಾತಿಯ ಶ್ವಾನವು ತೋಳದ ಹಾಗೆ ಕಾಣಿಸುತ್ತದೆ. ಈ ತಳಿ ಜರ್ಮನ್‌ ಮೂಲದ್ದು, ಸುಮಾರು 55ರಿಂದ 65 ಸೆಂ.ಮೀ. ಎತ್ತರ ಬೆಳೆಯುತ್ತದೆ. 10- 14 ವರ್ಷ ಬದುಕುತ್ತದೆ. 30 ದಿನಗಳ ಮರಿಯು 15ರಿಂದ 20 ಸಾವಿರ ರೂ.ಗೆ ಸಿಗುತ್ತದೆ. ಈ ಜಾತಿಯ ಶ್ವಾನಗಳಿಗೆ ಸುಲಭವಾಗಿ ತರಬೇತಿ ನೀಡಬಹುದು. ಆದ್ದರಿಂದ ಹೆಚ್ಚಾಗಿ ಪೊಲೀಸ್‌ ಮತ್ತು ಮಿಲಿಟರಿಗಳಲ್ಲಿ ಬಳಸುತ್ತಾರೆ.

ಈ ಜಾತಿಯ ನಾಯಿಗಳು ಬೇಗನೇ ಹಿಪ್‌ ಡಿಸ್‌ಪ್ಲೇಸಿಯ ಹಾಗೂ ಚರ್ಮ ರೋಗಕ್ಕೆ ಒಳಾಗಾಗುತ್ತವೆ.ಈ ಜಾತಿಯ ಶ್ವಾನಕ್ಕೆ ರೋಷ ಹೆಚ್ಚು. ಅಷ್ಟೇ ಚುರುಕು. ಸಾಕಿದವರಿಗೆ ಅಚ್ಚುಮೆಚ್ಚಿನ ಸ್ನೇಹಜೀವಿಯಾಗಿರುತ್ತವೆ. ಬೇಟೆಗೆ ಯಾವಾಗಲೂ ಸಿದ್ಧವಿರುತ್ತವೆ. ಮಾಂಸದ ಆಹಾರವನ್ನು ಹೆಚ್ಚು ಇಷ್ಟಪಡುತ್ತದೆ. ಆದರೂ, ಮನೆಯವರು ಬಂದರೆ ಸಾಕು ಯಾವುದೇ ಆಪೇಕ್ಷೆಗಳು ಇಲ್ಲದೇ ನಿಶ್ಕಲ್ಮಶವಾದ ಪ್ರೀತಿಯಿಂದ ಸ್ವಾಗತಿಸುತ್ತದೆ. ಆಗ ಐದು ನಿಮಿಷ ತಲೆ ಸವರಿದರೆ ಸಾಕು ಬೇರೇನು ಕೇಳುವುದಿಲ್ಲ. ಮನೆಯವರಿಗೆ ಯಾವುದೇ ಅಪಾಯವಾಗದಂತೆ ಕಾಪಾಡುತ್ತದೆ ಎಂದು ಹೇಳುತ್ತಾರೆ ಭರತ್‌.

ಗೋಲ್ಡನ್‌ ರಿಟ್ರೈವರ್‌ :

( ಬೆಲೆ : 15ರಿಂದ 20 ಸಾವಿರ ರೂ )

ಗೋಲ್ಡನ್‌ ರಿಟ್ರೈವರ್‌ ಮೂಲತಃ ಸ್ಕಾಟ್ಲೆಂಡ್‌ ಮೂಲದ ಶ್ವಾನ. ಇದರ ಕೂದಲು ಉದ್ದವಾಗಿದ್ದು, ಬಂಗಾರದ ಬಣ್ಣದಿಂದ ಕೂಡಿರುತ್ತದೆ. ಜತೆಗೆ ಜಲನಿರೋಧಕ ಹೊದಿಕೆಯನ್ನು ಹೊಂದಿರುತ್ತದೆ. ಸುಮಾರು 21ರಿಂದ 24 ಸೆಂ.ಮೀ. ಎತ್ತರವಿರುತ್ತದೆ. ಹಾಗೂ ಕೂದಲು ದಟ್ಟವಾಗಿರುವುದರಿಂದ ಉದುರುವಿಕೆ ಹೆಚ್ಚಾಗಿರುತ್ತದೆ.

ಆದ್ದರಿಂದ ಸ್ನಾನ ಮಾಡಿಸುವುದು ಹಾಗೂ ಬಾಚುವುದು ಅಗತ್ಯ. ಈ ಜಾತಿಯ ಶ್ವಾನಗಳನ್ನು ಹಿಂದೆ ಬೇಟೆಗೆ ಬಳಸಲಾಗುತ್ತಿತ್ತು. ತದನಂತರ ಸ್ನೇಹ ಜೀವಿಯಾಗಿ ಸಾಕುತ್ತಿದ್ದಾರೆ.

ಲ್ಯಾಬ್ರಡಾರ್‌ ರಿಟ್ರೈವರ್ : ‌

( ಬೆಲೆ : 10ರಿಂದ 12 ಸಾವಿರ ರೂ. )

ಈ ಜಾತಿಯ ನಾಯಿಗೆ ಪ್ರೀತಿಯಿಂದ ಲ್ಯಾಬ್‌ ಎಂದೂ ಕರೆಯುತ್ತಾರೆ. ಕೆನಡಾ ಬೆಲೆ ಮೂಲದ್ದು, 54ರಿಂದ 57 ಸೆಂ.ಮೀ. ಎತ್ತರ ಬೆಳೆಯುತ್ತದೆ. 12ರಿಂದ 14 ವರ್ಷಗಳ ಕಾಲ ಜೀವಿಸುತ್ತದೆ. ಇತರೆ ನಾಯಿಗಳಿಗೆ ಹೋಲಿಸಿದರೆ, ಕೂದಲು ಕಡಿಮೆ, ಚರ್ಮ ದಪ್ಪವಾಗಿರುತ್ತದೆ.

ರಾಜರಾಜೇಶ್ವರಿ ನಗರದ ಚಿರಾಗ್‌ ಎಂಬ ಬಾಲಕ 10 ಸಾವಿರ ಕೊಟ್ಟು 30 ದಿನದ ಲ್ಯಾಬ್‌ ತಂದನು. ಅದಕ್ಕೆ ಸಿಂಬಾ ಎಂದು ನಾಮಕಾರಣ ಮಾಡಿ, ಇದೀಗ 1 ವರ್ಷದ ಜನ್ಮದಿನವನ್ನು ಆಚರಿಸಿದ್ದಾನೆ. ಪ್ರತಿದಿನ ಮನೆಯಲ್ಲಿ ಮಾಡಿದ ಅಡುಗೆಯನ್ನೇ ಅದಕ್ಕೂ ತಿನ್ನಿಸುತ್ತಾನೆ. ಇದರ ಜತೆಗೆ ಸೇಬು, ಬಾಳೆಹಣ್ಣು, ಹಲಸು ಹಣ್ಣನ್ನೂ ಕೂಡ ತಿನ್ನುತ್ತದೆ. ಸಿಂಬಾ ತುಂಬಾ ಚುರುಕಾಗಿದೆ ಎನ್ನುತ್ತಾರೆ ಪೋಷಕರು.

ಬಾಕ್ಸರ್‌ :

( ಬೆಲೆ : 25ರಿಂದ 30 ಸಾವಿರ ರೂ )

ಬಾಕ್ಸರ್‌ ತಳಿ ಜರ್ಮನಿ ಮೂಲದ್ದು, 22ರಿಂದ 24 ಸೆಂ.ಮೀ. ಎತ್ತರ ಬೆಳೆಯುತ್ತದೆ. ಹಾಗೂ 9ರಿಂದ 15 ವರ್ಷ ಜೀವಿತವಾಧಿಯನ್ನು ಹೊಂದಿದೆ. ಈ ಜಾತಿಯ ಶ್ವಾನವು ನೋಡಲು ಒರಟು(ರ್ಯಾಶ್‌) ಆಗಿದ್ದರೂ, ಕುಟುಂಬಸ್ಥರ ಕಾಳಜಿಯಲ್ಲಿ ಮುಂದಿರುವ ಸ್ನೇಹ ಗುಣವನ್ನು ಹೊಂದಿರುತ್ತದೆ. ಒಂದು ಮರಿಗೆ 25ರಿಂದ 30 ಸಾವಿರ ರೂ. ಬೆಲೆ ಇದೆ. ನಾಯಿಗಳು ಸಾಮಾನ್ಯವಾಗಿ ನಾನ್‌ವೆಜ್‌ ಪ್ರಿಯವಾಗಿರುತ್ತದೆ.

ಆದರೆ ಇಲ್ಲೊಬ್ಬರು ಸಾಕಿರುವ ಸಿಂಬಾ (ನಾಯಿ) ತರಕಾರಿ, ಮೊಳಕೆಕಾಳುಗಳ ಪ್ರಿಯವಾಗಿದೆ. ಬೆಳಗ್ಗೆ ಪೆಡಿಗ್ರಿ, ಮೊಟ್ಟೆ, ಹಾಲು ಸೇವಿಸಿದರೆ, ಸಂಜೆ ತರಕಾರಿಯಲ್ಲಿ ಟೊಮೆಟೋ, ಕಾಳುಗಳಲ್ಲಿ ಶೇಂಗಾ ಬೀಜ, ಹಣ್ಣುಗಳಲ್ಲಿ ಮಾವು ಎಂದರೆ ಪ್ರಾಣ ಎನ್ನುತ್ತಾರೆ ಆದಿತ್ಯ ಹೆಗಡೆ. ಈಗ ಸಿಂಬಾಗೆ ಎರಡೂವರೆ ವರ್ಷ. ಎಲ್ಲರೊಂದಿಗೆ ಪ್ರೀತಿಯಿಂದ ಆಟವಾಡುತ್ತದೆ ಎಂದರು.

ಲ್ಹಾಸಾ ಆಪ್ಸೋ :

( ಬೆಲೆ :  15ರಿಂದ 20 ಸಾವಿರ ರೂ. )

ಲ್ಹಾಸಾ ಆಪ್ಸೋ ಟಿಬೆಟ್‌ ಮೂಲಕದ ನಾಯಿ. ಇದು 25 ಸೆಂ.ಮೀ ಎತ್ತರ ಬೆಳೆಯುತ್ತದೆ. ಈ ಜಾತಿಯ ನಾಯಿಗಳು ಉದ್ದನೆಯ ಕೂದಲುಗಳನ್ನು ಹೊಂದಿದ್ದು, ಸ್ನೇಹ ಜೀವಿಯಾಗಿರುತ್ತದೆ. ಇದರಿಂದ ಯಾವುದೇ ಅಪಾಯವಿಲ್ಲ. ಮಕ್ಕಳು ಸಲೀಸಾಗಿ ಇದರೊಂದಿಗೆ ಆಟವಾಡಬಹುದು. ಮಾರುಕಟ್ಟೆಯಲ್ಲಿ ಒಂದೂವರೆ ತಿಂಗಳ ಮರಿಯು ಸುಮಾರು 15ರಿಂದ 20 ಸಾವಿರ ರೂ. ಬೆಲೆ ಇದೆ. ಕೆನಲ್‌ ಕ್ಲಬ್‌ ಸಮೀಕ್ಷೆ ಪ್ರಕಾರ ಈ ತಳಿಯು ಸರಾಸರಿ 14 ವರ್ಷ 4 ತಿಂಗಳು ಜೀವಿಸುತ್ತದೆ. ಬೆಂಗಳೂರಿನಲ್ಲಿಯೇ ಸುಮಾರು 45 ದಿನಗಳ ಮರಿಯನ್ನು 15 ಸಾವಿರ ರೂ.ಗೆ ಖರೀದಿಸಲಾಗಿದೆ. ಇದೀಗ ಡೆಲ್ಟಾಗೆ ಏಳು ತಿಂಗಳು ವಯೋಮಿತಿ.

ಇದರ ಕೂದಲು ಇತರೆ ನಾಯಿಗಳಿಗಿಂತ ಹೆಚ್ಚು ಉದ್ದವಾಗಿದ್ದು, ಆ ಶ್ವಾನ ಓಡಾಡುವ ಪ್ರದೇಶದಲ್ಲಿ ಕೂದಲು ಉದುರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ವಾರಕ್ಕೆ ಕನಿಷ್ಠ ಮೂರು ಬಾರಿ ಆದರೂ ಶುಚಿಗೊಳಿಸಬೇಕು. ಹಾಗೂ ಉಪ್ಪು, ಹುಳಿ, ಖಾರ, ಸಿಹಿ ಇರುವ ಆಹಾರವನ್ನು ನೀಡಬಾರದು. ಶ್ವಾನಗಳಿಗೆಂದೆ ವಿಶೇಷ ಆಹಾರವಿದ್ದು, ವಯೋಮಿತಿ ಆಧಾರದಲ್ಲಿ ಆಹಾರವನ್ನು ನೀಡಬೇಕು. ಅಥವಾ ಮೊಸರನ್ನ, ಮೂಳೆರಹಿತ ಚಿಕನ್‌ ನೀಡಬಹುದು ಎನ್ನುತ್ತಾರೆ ರಾಮಮೂರ್ತಿ ನಗರದ ಸುರೇಶ್‌.

ಪೊಮರೇನಿಯನ್‌ :

( ಬೆಲೆ : 10ರಿಂದ 12 ಸಾವಿರ ರೂ )

ಇದೊಂದು ಎಲ್ಲರ ಅಚ್ಚುಮೆಚ್ಚಿನ ಶ್ವಾನ. ನೋಡಲು ಮುದ್ದುಮುದ್ದಾಗಿರುತ್ತದೆ ಹಾಗೂ ಮುಟ್ಟಿದರೆ ರೇಷ್ಮೆಯಂಥ ಮೈ ಕೂದಲು. ಅಷ್ಟೇ ಚುರುಕಾದ ಶ್ವಾನ. ಇದು ಮೂಲತಃ ಮಧ್ಯ ಯುರೋಪ್‌ನ ತಳಿ. ಸುಮಾರು 6ರಿಂದ 12 ಸೆಂ. ಮೀ ಎತ್ತರ ಬೆಳೆಯುತ್ತದೆ. 12ರಿಂದ 16 ವರ್ಷ ಬದುಕಿರುತ್ತದೆ. ಈ ತಳಿಯ ಶ್ವಾನಗಳು ಮನುಷ್ಯರೊಂದಿಗೆ ತುಂಬಾ ಸ್ನೇಹ, ಕ್ರಿಯಾಶೀಲ ವಾಗಿರುತ್ತವೆ.

ಒಬ್ಬಂಟಿಯಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ವ್ಯಕ್ತಿ, ಕೆಲವು ದಿನಗಳ ನಂತರ ಒಂದು 30 ದಿನಗಳ ಪೊಮೆರೇನಿಯನ್‌ ಶ್ವಾನವನ್ನು 10 ಸಾವಿರ ಕೊಟ್ಟು ಖರೀದಿಸಿದರು. ಚಿಕ್ಕ ಮರಿಯೊಂದನ್ನು ಮನೆಯಲ್ಲಿ ಬಿಟ್ಟು ಹೋಗದೇ, ತಾನು ಎಲ್ಲಿ ಹೋಗುತ್ತಾನೋ ಅಲ್ಲಿಗೆ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆ ಶ್ವಾನ ಅವರಿಗೆ ಮಾತ್ರವಲ್ಲದೇ, ಕಾರಿನಲ್ಲಿ ಹತ್ತುವ ಪ್ರಯಾಣಿಕರಿಗೂ ಅಷ್ಟೇ ಹೊಂದಿಕೊಂಡಿತ್ತು. ಪ್ರಯಾಣದ ದಾರಿಯುದ್ದಕ್ಕೂ ಅವರೊಂದಿಗೆ ಆಟವಾಡುತ್ತಾ, ಪ್ರಯಾಣ ಹಾಗೂ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರಯಾಣಿಕರು ಸಂತೋಷದಿಂದ ಪ್ರಯಾಣಿಸುತ್ತಿದ್ದಾರೆ ಎಂದು ಚಾಲಕ ವಿವೇಕ್‌ ತನ್ನ ಶ್ವಾನ(ಸೋನು) ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಧೋಳ :

( ಬೆಲೆ : 8ರಿಂದ 12 ಸಾವಿರ ರೂ. )

ಮುಧೋಳ ನಾಯಿ ಕರ್ನಾಟಕದ ಮುಧೋಳ ಪ್ರದೇಶದ್ದು, ಈ ಜಾತಿಯು 57ರಿಂದ 72 ಸೆಂ. ಮೀ ಎತ್ತರ ಬೆಳೆಯುತ್ತದೆ. ಶ್ವಾನಗಳಲ್ಲೇ ಅತೀ ಎತ್ತರ ಬೆಳೆಯುವ ಜಾತಿ ಇದಾಗಿದೆ. ಅತ್ಯಂತ ತೆಳ್ಳನೆಯ ಉದ್ದವಾದ ಬಲಿಷ್ಠ ಸ್ನಾಯುಗಳನ್ನು ಹೊಂದಿರುತ್ತದೆ.

ಇದರ ಜೀವಿತಾವಧಿ 10ರಿಂದ 12 ವರ್ಷ. ಈ ಜಾತಿ ಶ್ವಾನವು ಗಂಟೆಗೆ 50 ಕಿ.ಮೀ. ವೇಗದಲ್ಲಿ ಓಡಬಲ್ಲವು. ಹಾಗೂ 270 ಡಿಗ್ರಿವರೆಗೆ ದೃಷ್ಟಿಕೋನವನ್ನು ಹೊಂದಿದ್ದು, ಸೂಕ್ಷ್ಮತೆಗಳನ್ನು ಹೆಚ್ಚು ಗ್ರಹಿಸುತ್ತದೆ. ಆದ್ದರಿಂದ ಭಾರತೀಯ ಸೇನೆಯಲ್ಲಿ ಈ ಶ್ವಾನಗಳನ್ನು ಬಳಸುತ್ತಾರೆ.

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next