Advertisement

ಮಂಗಳೂರು: ಮರಳುಗಾರಿಕೆಗೆ ಶೀಘ್ರ ಅನುಮತಿ: ಡಿಸಿ

10:59 AM Dec 03, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ಹಾಗೂ ನಾನ್‌ಸಿಆರ್‌ಝಡ್‌ ವಲಯದಲ್ಲಿ ಕಾನೂನುಬದ್ಧವಾಗಿ ಮರಳುಗಾರಿಕೆ ನಡೆಸುವ ನಿಟ್ಟಿನಲ್ಲಿ ಆಯ್ಕೆಯಾಗುವ ಎಲ್ಲ ಅರ್ಹ ಗುತ್ತಿಗೆದಾರರಿಗೆ ಒಂದೆರಡು ದಿನಗಳಲ್ಲಿ ಅನುಮತಿ ಆದೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಪತ್ರಿಕಾಭವನದಲ್ಲಿ ಶುಕ್ರವಾರ ಮಾತನಾಡಿ, ಸಿಆರ್‌ಝಡ್‌ ವ್ಯಾಪ್ತಿಯ ಸಾಂಪ್ರದಾಯಿಕ ಮರಳುಗಾರಿಕೆಯಡಿ 142 ಮಂದಿಯ ಅರ್ಜಿ ಪರಿಶೀಲಿಸಲಾಗಿದ್ದು ಇತರ 52 ಮಂದಿಯ ಅರ್ಜಿ ಪರಿಶೀಲಿಸಲಾಗುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಅರ್ಹ ಗುತ್ತಿಗೆದಾರರಿಗೆ ಮರಳುಗಾರಿಕೆಗೆ ಆದೇಶ ಹೊರಡಿಸಲಾಗುವುದು ಎಂದರು.

ನಾನ್‌ ಸಿಆರ್‌ಝಡ್‌ ವಲಯದಲ್ಲಿ 18 ಕಡೆ ಮರಳು ದಿಬ್ಬಗಳನ್ನು ಗುರುತಿಸಿ ಟೆಂಡರ್‌ ಆಗಿದೆ. ಇಲ್ಲಿ 10 ಲಕ್ಷ ಮೆಟ್ರಿಕ್‌ ಟನ್‌ ಮರಳು ಗುರುತಿಸಲಾಗಿದೆ. ಇನ್ನುಳಿದಂತೆ ಗುರುತಿಸಲಾಗಿರುವ ಇತರ 17 ಮರಳು ದಿಬ್ಬಗಳಿಗೆ ಪರಿಸರ ಅನುಮತಿ (ಇಸಿ)ಯನ್ನು ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಹೊರ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟದ ಆರೋಪದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಕೇರಳದ ಗಡಿಯಲ್ಲಿ ಖುದ್ದು ನಿಂತು ಪರಿಶೀಲನೆಯನ್ನೂ ಮಾಡಿದ್ದೇನೆ. ನಮ್ಮ ಜಿಲ್ಲೆಯ ಮರಳನ್ನು ನಮ್ಮ ಜಿಲ್ಲೆಯ ಆವಶ್ಯಕತೆಗೆ ಬಳಸಬೇಕಾಗಿದೆ. ಮರಳುಗಾರಿಕೆ ಕಾನೂನುಬದ್ಧವಾಗಿ ಜಿಲ್ಲೆಯಾದ್ಯಂತ ನಡೆದಾಗ ಅಕ್ರಮವಾಗಿ ಸಾಗಾಟವಾಗಲು ಸಾಧ್ಯವಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಯಕ್ಷಗಾನ; ಮಧ್ಯರಾತ್ರಿ 12ರವರೆಗೆ ವಿಶೇಷ ಅನುಮತಿ :

Advertisement

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವತಿಯಿಂದ ನಡೆಯುವ ಪುರಾತನ, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಬೆಳಗ್ಗಿನವರೆಗೆ ನಡೆಸಲು ಅನುಮತಿ ಕೋರಿದ್ದರು. ಆದರೆ, ರಾತ್ರಿ 10ರ ಬಳಿಕ ಕರ್ಕಶ ಶಬ್ದ ಬಳಸದಂತೆ ಸುಪ್ರಿಂಕೋರ್ಟ್‌, ಹೈಕೋರ್ಟ್‌ ಆದೇಶ ಹೊರಡಿಸಿದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ನಿರ್ದೇಶನ ನೀಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಸಭೆ ನಡೆಸಿ ಯಕ್ಷಗಾನ ಕಾಲಮಿತಿಯನ್ನು ರಾತ್ರಿ 12 ಗಂಟೆಯವರೆಗೆ ವಿಸ್ತರಿಸಿ ವಿಶೇಷ ಅನುಮತಿ ನೀಡಲಾಗಿದೆ ಎಂದರು.

ಶಿರಾಡಿ ಘಾಟಿ; ಜ.15ರೊಳಗೆ  ಗುಂಡಿ ಮುಚ್ಚಲು ನಿರ್ದೇಶನ:

ಸಂಚಾರ ಸಮಸ್ಯೆಗೆ ಕಾರಣವಾಗುತ್ತಿರುವ ಶಿರಾಡಿ ಘಾಟಿ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಜತೆಗೆ ಸಭೆ ನಡೆಸಲಾಗಿದೆ. ಅಗತ್ಯವಿದ್ದರೆ ಮರ, ವಿದ್ಯುತ್‌ ಕಂಬ ತೆರವುಗೊಳಿಸಲು ಕೂಡ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಶಿರಾಡಿ ರಸ್ತೆಯ ಗುಂಡಿಯನ್ನು ಡಿ.20ರೊಳಗೆ ಮುಚ್ಚುವಂತೆ ತಿಳಿಸಲಾಗಿದೆ. ಆದರೆ ಅದು ಕಷ್ಯ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿರುವುದರಿಂದ ಜ.15ರೊಳಗೆ ಸಂಪೂರ್ಣವಾಗಿ ಗುಂಡಿ ಮುಚ್ಚುವ ಕೆಲಸ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next