Advertisement

ಕರಾವಳಿಯ ರೈಲ್ವೇ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ನಿರೀಕ್ಷೆ

10:10 AM Jan 15, 2020 | sudhir |

ಮಂಗಳೂರು: ಪ್ರತಿ ವರ್ಷವೂ ಕೇಂದ್ರ ಬಜೆಟ್‌ ಮಂಡನೆ ಸಮೀಪಿಸುವಾಗ ಕರಾವಳಿ ಕರ್ನಾಟಕದ ರೈಲ್ವೇ ಸೌಲಭ್ಯ-ಬೇಡಿಕೆಗಳ ಬಗ್ಗೆ ಜನರಲ್ಲಿ ನಿರೀಕ್ಷೆಗಳು ಗರಿಗೆದರುತ್ತವೆ. ಈ ಬಾರಿಯಾದರೂ ಕರಾವಳಿಯ ಪ್ರಮುಖ ರೈಲ್ವೇ ಬೇಡಿಕೆಗಳಿಗೆ ಮನ್ನಣೆ ಸಿಗಬಹುದೆಂಬ ಆಶಾವಾದ ಮೂಡಿದೆ.

Advertisement

ಕರಾವಳಿಯಲ್ಲಿ ರೈಲ್ವೇ ಸೌಲಭ್ಯ ಅಭಿವೃದ್ಧಿ ವಿಚಾರದಲ್ಲಿ ದಶಕಗಳಿಂದ ಬಾಕಿಯಿರುವ ಪ್ರಸ್ತಾವನೆಗಳು, ಬೇಡಿಕೆ ಗಳು ಇನ್ನೂ ಈಡೇರಿಲ್ಲ. ಈ ಬಗ್ಗೆ ರೈಲ್ವೇ ಯಾತ್ರಿಕರ ಸಂಘಟನೆಗಳು, ಅಭಿವೃದ್ಧಿ ಪರ ಸಂಘಟನೆಗಳು ನಿರಂತರವಾಗಿ ಆಗ್ರಹಿಸುತ್ತಲೇ ಬಂದಿವೆ. ನೂರಾರು ಮನವಿಗಳು ಸಲ್ಲಿಕೆಯಾಗಿವೆ. ಆದರೆ ದೊರಕಿರುವ ಸ್ಪಂದನೆ ನಿರಾಶಾದಾಯಕ. ಆದರೆ ಈ ಬಾರಿ ರಾಜ್ಯದ ಸುರೇಶ್‌ ಅಂಗಡಿಯವರು ರೈಲ್ವೇ ಸಹಾಯಕ ಸಚಿವರಾಗಿರುವುದು ಮತ್ತು ರಾಜ್ಯದ ಬೇಡಿಕೆಗಳಿಗೆ ಅವರು ಈಗಾಗಲೇ ತೋರಿರುವ ಸಕಾರಾತ್ಮಕ ಸ್ಪಂದನೆ ಆಶಾವಾದ ಹುಟ್ಟುಹಾಕಿದೆ.

ಹಳೆಯ ಪ್ರಸ್ತಾವನೆಗಳು
ಮಂಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆ ಗೇರಿಸುವ ಯೋಜನೆ ಬಜೆಟ್‌ನಲ್ಲಿ ಪ್ರಸ್ತಾವನೆಯಾಗಿ ದಶಕ ಕಳೆದರೂ ಅನುಷ್ಠಾನಗೊಂಡಿಲ್ಲ. ಪಡುಬಿದ್ರಿ- ಕಾರ್ಕಳ- ಬೆಳ್ತಂಗಡಿ- ಉಜಿರೆ-ಧರ್ಮಸ್ಥಳ- ನೆಟ್ಟಣ
ಮಧ್ಯೆ 120 ಕಿ.ಮೀ. ಹೊಸ ಮಾರ್ಗ, ಮೈಸೂರು- ಮಂಗಳೂರು -ಮಡಿಕೇರಿ ಮೂಲಕ 272 ಕಿ.ಮೀ. ಹೊಸ ಮಾರ್ಗ ಯೋಜನೆಗಳಿಗೆ ಪ್ರಾಥಮಿಕ ತಾಂತ್ರಿಕ ಮತ್ತು ಸಂಚಾರ ಸರ್ವೇ ಬಗ್ಗೆ ಸದಾನಂದ ಗೌಡರು ರೈಲ್ವೇ ಸಚಿವರಾಗಿದ್ದಾಗ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಇವು ಈಗಲೂ ಬಜೆಟ್‌ ಕಡತದಲ್ಲೇ ಇವೆ.

ಪ್ರಮುಖ ಬೇಡಿಕೆಗಳು
ಕರಾವಳಿಯಲ್ಲಿ ರೈಲ್ವೇ ಸೌಲಭ್ಯ ಅಭಿವೃದ್ಧಿಯ ಬೇಡಿಕೆಗಳು ದಶಕದಿಂದ ಈಡೇರದೆ ಬಾಕಿಯುಳಿದಿದೆ. ರೈಲ್ವೇ ಯಾತ್ರಿ ಸಂಘ, ಪ. ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ದಿ ಸಂಘ, ಕುಕ್ಕೆ ಸುಬ್ರಹ್ಮಣ್ಯ- ಮಂಗಳೂರು ರೈಲ್ವೇ ಬಳಕೆದಾರರ ಸಂಘ, ಕುಂದಾಪುರ ರೈಲ್ವೇ ಹಿತರಕ್ಷಣ ಸಮಿತಿ ಮತ್ತು ರೈಲ್ವೇ ಹೋರಾಟಗಾರರು ಈ ಬೇಡಿಕೆಗಳನ್ನು ನಿರಂತರವಾಗಿ ಮಂಡಿಸುತ್ತಲೇ ಬಂದಿದ್ದಾರೆ.

ಉಳ್ಳಾಲದಿಂದ ಪ್ರಾರಂಭಿಸಿ ಮಂಗಳೂರು ಸೆಂಟ್ರಲ್‌, ಜಂಕ್ಷನ್‌ ಸೇರಿದಂತೆ ಮಂಗಳೂರು, ಉಡುಪಿ, ಹಾಸನ, ಕಾರವಾರ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ
ಮಂಗಳೂರು ರೈಲ್ವೇ ವಿಭಾಗ ರಚಿಸಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದ ಮಂಡನೆಯಾಗುತ್ತಿದ್ದರೂ ಪೂರಕ ಸ್ಪಂದನೆ ರೈಲ್ವೇ ಇಲಾಖೆಯಿಂದ ದೊರಕಿಲ್ಲ. ಮಂಗಳೂರು ವಿಭಾಗ ವನ್ನು ನೈಋತ್ಯ ವಲಯಕ್ಕೆ ಸೇರಿಸಬೇಕು ಎಂಬ ಆಗ್ರಹಕ್ಕೂ ಮನ್ನಣೆ ದೊರಕಿಲ್ಲ.

Advertisement

ಬೇಡಿಕೆಗಳು
– ಯಶವಂತಪುರ-ಮಂಗಳೂರು ಜಂಕ್ಷನ್‌ ಗೋಮಟೇಶ್ವರ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಮತ್ತು ಅದು ನಿತ್ಯ ಸಂಚರಿಸಬೇಕು.
–  ಮಂಗಳೂರಿನಿಂದ ಅರಸೀಕೆರೆ ಮಾರ್ಗವಾಗಿ ಮೀರಜ್‌ಗೆ 1990ರ ದಶಕದಲ್ಲಿ ಸಂಚಾರ ನಡೆಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸನ್ನು ಮರಳಿ ಆರಂಭಿಸಬೇಕು.
– ಗೋವಾದ ವಾಸ್ಕೋಡ ಗಾಮಾದಿಂದ ಮಂಗಳೂರು ಮೂಲಕ ಸುಬ್ರಹ್ಮಣ್ಯದ ವರೆಗೆ ಪ್ಯಾಸೆಂಜರ್‌ ರೈಲು ಓಡಿಸಬೇಕು.
– ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ರಾತ್ರಿ ಸುಬ್ರಹ್ಮಣ್ಯದಲ್ಲಿ ತಂಗಿ ಬೆಳಗ್ಗೆ ಮಂಗಳೂರಿಗೆ ಸಂಚರಿಸಬೇಕು.
– ಮಂಗಳೂರು- ಹಾಸನ- ಬೆಂಗಳೂರು- ತಿರುಪತಿಗೆ ನೂತನ ರೈಲು ಆರಂಭ.
– ಮಂಗಳೂರಿನಿಂದ ಬೆಂಗಳೂರಿಗೆ ವೀಕೆಂಡ್‌ ಮತ್ತು ರಜಾ ವಿಶೇಷ ರೈಲು ಓಡಿಸಬೇಕು.
– ಸ್ಥಗಿತಗೊಂಡಿರುವ ಕಣ್ಣೂರು-ಬೈಂದೂರು ಪ್ಯಾಸೆಂಜರ್‌ ಬದಲಾಗಿ ಚೆರ್ವತ್ತೂರು – ಮಂಗಳೂರು ಪ್ಯಾಸೆಂಜರ್‌ ರೈಲನ್ನು ವಾಸ್ಕೊ/ಮಡಗಾಂವ್‌ ತನಕ ವಿಸ್ತರಿಸಬೇಕು.
– ಸಿಎಸ್‌ಟಿ-ಮಂಗಳೂರು ಜಂಕ್ಷನ್‌ ರೈಲನ್ನು ಮಂಗಳೂರು ಸೆಂಟ್ರಲ್‌ನಿಂದ ಹೊರಡಿಸಬೇಕು.
– ಮಂಗಳೂರು ಸೆಂಟ್ರಲ್‌ನಲ್ಲಿ 4 ಮತ್ತು 5ನೇ ಪ್ಲಾಟ್‌ಫಾರಂ ನಿರ್ಮಾಣ ತ್ವರಿತಗೊಳ್ಳಬೇಕು.

ಕರಾವಳಿಯ ಹಲವಾರು ವರ್ಷಗಳ ಬೇಡಿಕೆಗಳು, ಈ ಹಿಂದಿನ ರೈಲ್ವೇ ಬಜೆಟ್‌ಗಳಲ್ಲಿ ಮಾಡಿರುವ ಪ್ರಸ್ತಾವನೆಗಳನ್ನು ಅನುಷ್ಠಾನಕ್ಕೆ ತರಲು ಆದ್ಯತೆ ನೀಡಬೇಕೆಂಬ ಬೇಡಿಕೆಯನ್ನು ಈಗಾಗಲೇ ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಮತ್ತು ಸಹಾಯಕ ಸಚಿವ ಸುರೇಶ್‌ ಅಂಗಡಿಯವರೆದುರು ಮಂಡಿಸಿದ್ದೇನೆ. ಪೂರಕ ಸ್ಪಂದನೆ ದೊರಕಬಹುದು ಎಂಬ ನಿರೀಕ್ಷೆ ನಮ್ಮದು.
– ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ. ಲೋಕಸಭಾ ಕ್ಷೇತ್ರ

  • ಕೇಶವ ಕುಂದರ್
Advertisement

Udayavani is now on Telegram. Click here to join our channel and stay updated with the latest news.

Next