ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದ್ದು, ವಿವಿಧ ವೈದ್ಯಕೀಯ ಹಾಗೂ ಇನ್ನಿತರ ಸೌಲಭ್ಯಗಳ ಅಳವಡಿಕೆಯೊಂದಿಗೆ ಅಕ್ಟೋಬರ್ ವೇಳೆಗೆ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳ್ಳುವ ನಿರೀಕ್ಷೆ ಇದೆ.
ಅಂದಾಜು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಸೆಪ್ಟೆಂಬರ್ ಮೊದಲ ವಾರದಿಂದ ಶಸ್ತ್ರಚಿಕಿತ್ಸಾ ಘಟಕ ಸೇರಿದಂತೆ ವೈದ್ಯಕೀಯ ಗ್ಯಾಸ್ ಪೈಪಿಂಗ್ ಸಿಸ್ಟಮ್ (ಎಂಜಿಪಿಎಸ್) ಅಳವಡಿಸುವ ಕಾಮಗಾರಿ ಆರಂಭವಾಗಲಿದೆ. ಅಕ್ಟೋಬರ್‌ದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ 3ರ ಅಡಿ 120 ಕೋಟಿ ರೂ. ಹಾಗೂ ರಾಜ್ಯ ಸರಕಾರದ 30 ಕೋಟಿ ರೂ. ಅನುದಾನ ಸೇರಿ ಒಟ್ಟು 150 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ನಿರ್ಮಾಣವಾಗುತ್ತಿದೆ. ಈ ಹಣವನ್ನು ಸಿವಿಲ್ ಕಾಮಗಾರಿಯ ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಪ್ಲಂಬಿಂಗ್ (ಎಂಇಪಿ)ಗೆ 75 ಕೋಟಿ ರೂ. ಹಾಗೂ 65 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಗ್ಯಾಸ್ ಪೈಪಿಂಗ್ ಸಿಸ್ಟಮ್ (ಎಂಜಿಪಿಎಸ್)ಗೆ, ಮಾಡ್ಯುಲರ್ ಆಪರೇಶನ್ ಥೇಟರ್ (ಎಂಒಟಿ)ಗೆ ಮತ್ತು ವೈದ್ಯಕೀಯ ಉಪಕರಣ (ಎಂಇ) ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಪೀಠೊಪಕರಣ, ಆಡಳಿತಾತ್ಮಕ ಪೀಠೊಪಕರಣಕ್ಕೆ ಖರ್ಚು ಮಾಡಲಾಗುತ್ತಿದೆ. ಕೇಂದ್ರ ಸರಕಾರ ಸ್ವಾಮ್ಯದ ಹೈದರಾಬಾದ್ ಮೂಲದ ಎಚ್‌ಎಲ್‌ಎಲ್-ಹೈಟ್ಸ್ ಕಂಪನಿ ಈ ಕಾಮಗಾರಿಯ ನಿರ್ವಹಣೆ ಮಾಡುತ್ತಿದೆ. ನಾಸಿಕ್ ಮೂಲದ ಹರ್ಷ ಕನ್‌ಸ್ಟ್ರಕ್ಷನ್ ಕಂಪನಿಯು ಅಂದಾಜು 1.70 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸುತ್ತಿದೆ.
ಹರ್ಷ ಕಂಪನಿಗೆ 69.70 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿಕೊಡಲು 2016ರ ಆ. 12ರಂದು ಟೆಂಡರ್ ನೀಡಲಾಗಿತ್ತು. ಅದರಂತೆ ಕಂಪನಿ ಕಾಮಗಾರಿ ಆರಂಭಿಸಿ, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಿತ್ತು. ಆದರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡದ ಮುಂಭಾಗದಲ್ಲಿದ್ದ ಶವಾಗಾರ ಸ್ಥಳಾಂತರ, ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ರಾಜ್ಯ ಸರಕಾರದ ಅನುದಾನ ನೀಡುವಲ್ಲಿ ಹಾಗೂ ಅಗ್ನಿಶಾಮಕ ದಳ ಇಲಾಖೆಯಿಂದ ಅನುಮತಿ ದೊರೆಯದ್ದರಿಂದ ಕಟ್ಟಡ ಕಾಮಗಾರಿ ವಿಳಂಬವಾಗಿತ್ತು. ಏಪ್ರಿಲ್ ಮೊದಲ ವಾರದಲ್ಲಿ ಶವಾಗಾರ ಸ್ಥಳಾಂತರ ಮಾಡಲಾಗಿದ್ದು, ಅದರ ಕಟ್ಟಡ ತೆರವುಗೊಳಿಸಲಾಗಿದೆ. ಕಂಪನಿಯು ಈಗ ಕಟ್ಟಡ ಮುಂಭಾಗದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇಲ್ಲಿ ದೂರಸಂಪರ್ಕ ಇಲಾಖೆಯ ಕೇಬಲ್, ವಿದ್ಯುತ್ ಸಂಪರ್ಕ ಕೇಬಲ್, ನೀರು ಸರಬರಾಜು ಪೈಪ್‌ಲೈನ್ ಗಳು ಅಡಚಣೆ ಆಗುತ್ತಿವೆ. ಇವುಗಳಿಗೆ ಧಕ್ಕೆಯಾಗದ ರೀತಿ ಕಾಮಗಾರಿ ನಡೆಸುತ್ತಿದ್ದಾರೆ.
ಈಗಾಗಲೇ ಕಟ್ಟಡದಲ್ಲಿ ಪ್ಲೋರಿಂಗ್, ಬಾಗಿಲು ಅಳವಡಿಕೆ, ಸೀಲಿಂಗ್ ಕಾಮಗಾರಿಯು ಬಹುತೇಕ ಮುಗಿದಿದ್ದು, ಕಟ್ಟಡದ ವರಾಂಡ್‌ದಲ್ಲಿ ಗ್ರೀಲ್ ಅಳವಡಿಕೆ ಇನ್ನಿತರೆ ಸಣ್ಣ-ಪುಟ್ಟ ಕಾಮಗಾರಿಗಳು ಬಾಕಿ ಉಳಿದಿದ್ದು, ಸಿವಿಲ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಸೆಪ್ಟೆಂಬರ್ ಮೊದಲ ವಾರದಿಂದ ಶಸ್ತ್ರಚಿಕಿತ್ಸಾ ಘಟಕ ಹಾಗೂ ಎಂಜಿಪಿಎಸ್, ಎಂಓಟಿ, ಎಂಇಗಳ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಕಟ್ಟಡ ಕಾಮಗಾರಿ ಕೈಗೆತ್ತಿಕೊಂಡಿರುವ ಹರ್ಷ ಕಂಪನಿಯು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಸುವ ನಿಟ್ಟಿನಲ್ಲಿ ಭರದಿಂದ ಸಿದ್ಧತೆಗಳನ್ನು ನಡೆಸಿದೆ.
ಕಿಮ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡವು ಕಾರಣಾಂತರಗಳಿಂದ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈಗ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಎಂಜಿಪಿಎಸ್, ಎಂಒಟಿ ಸೇರಿದಂತೆ ಇನ್ನಿತರೆ ಕಾಮಗಾರಿ ಬಾಕಿ ಇದ್ದು, ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
ರತ್ನಾಚಲಂ, ಎಂಜಿನಿಯರಿಂಗ್ ಇನ್‌ಚಾರ್ಜ್, ಹೈಟ್
ಕಿಮ್ಸ್ ಆವರಣದಲ್ಲಿದ್ದ ಶವಾಗಾರ ಸ್ಥಳಾಂತರ ಸೇರಿದಂತೆ ಇನ್ನಿತರೆ ಕೆಲ ಸಮಸ್ಯೆಗಳಿಂದಾಗಿ ನಿಗದಿತ ಸಮಯದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ವಿಳಂಬವಾಗಿತ್ತು. ಏಪ್ರಿಲ್‌ನಲ್ಲಿ ಶವಾಗಾರ ಸ್ಥಳಾಂತರವಾಗಿದೆ. ಅಕ್ಟೋಬರ್ ಅಂತ್ಯದೊಳಗೆ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಅನಿಲ ಸಂಪಗಾಂವ, ಪ್ರೊಜೆಕ್ಟ್
ಮ್ಯಾನೇಜರ್, ಹರ್ಷ ಕನ್‌ಸ್ಟ್ರಕ್ಷನ್ ಪ್ರೈ.ಲಿ.,