Advertisement

ಸುಧಾರಣಾವಾದಿ ಬಜೆಟ್‌ ನಿರೀಕ್ಷೆ

12:24 AM Feb 01, 2020 | mahesh |

ವರ್ಷಗಳುರುಳಿದಂತೆಯೇ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದ್ದು ಉದ್ಯೋಗ ಸೃಷ್ಟಿಗೆ ಪೂರಕವಾಗುವ ನಿರ್ದಿಷ್ಟ ಯೋಜನೆ ಅಥವಾ ಮಹತ್ತರವಾದ ಸುಧಾರಣ ಕ್ರಮವನ್ನು ಸರಕಾರ ಘೋಷಿಸುವ ಆಶಾವಾದವನ್ನು ಜನರು ಹೊಂದಿದ್ದಾರೆ.

Advertisement

ಆರ್ಥಿಕ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಕಾಣಿಸಿಕೊಂಡಿರುವ ತೀವ್ರ ತಳಮಳದ ಹಿನ್ನೆಲೆಯಲ್ಲಿ ಶನಿವಾರ ಮಂಡನೆಯಾಗಲಿರುವ ಬಜೆಟ್‌ ಹಲವು ನಿರೀಕ್ಷೆಗಳ ಮೂಟೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ ಜಾರಿಗೆ ತರಲಾದ ಯೋಜನೆಗಳ ಸ್ಥಿತಿಗತಿ, ಹಣಕಾಸು ಅಂಕಿಅಂಶಗಳ ಜತೆಯಲ್ಲಿ ಮುಂಬರುವ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವ ಹೊಸ ಯೋಜನೆಗಳು, ಸರಕಾರದ ಆಲೋಚನಾ ಕ್ರಮದ ಸ್ಥೂಲ ನೋಟವನ್ನು ಬಜೆಟ್‌ ಒಳಗೊಂಡಿರುತ್ತದೆ. ಕಳೆದ ವರ್ಷ ಜಾಗತಿಕ ಮಟ್ಟದಲ್ಲಿನ ಆರ್ಥಿಕ ಹಿಂಜರಿತದ ಪರಿಣಾಮ ದೇಶದ ಜಿಡಿಪಿ ಮೇಲೆ ಭಾರೀ ಪರಿಣಾಮ ಬೀರಿತು. ಇಷ್ಟು ಮಾತ್ರವಲ್ಲದೆ ಹಣಕಾಸು ವ್ಯವಹಾರ, ಉದ್ಯಮ ರಂಗ, ಉದ್ಯೋಗ ಮತ್ತಿತರ ಮಹತ್ತರ ವಲಯಗಳ ಮೇಲೆ ಆರ್ಥಿಕ ಹಿನ್ನಡೆಯ ಬಿಸಿ ತಟ್ಟಿ ಸರಕಾರವನ್ನು ಮುಜುಗರಕ್ಕೀಡು ಮಾಡಿದೆ. ಆರ್ಥಿಕ ಹಿಂಜರಿತವನ್ನು ಹಳಿಗೆ ತರಲು 2-3 ಬಾರಿ ಕೆಲವೊಂದು ಸುಧಾರಣ ಕ್ರಮಗಳನ್ನು ಕೈಗೊಂಡಿದ್ದು, ಅದು ಅಷ್ಟೊಂದು ಪರಿಣಾಮವನ್ನೇನೂ ಬೀರದಿದ್ದರೂ ಬೀಸುವ ದೊಣ್ಣೆಯೇಟಿನಿಂದ ಸರಕಾರವನ್ನು ಪಾರು ಮಾಡಿತ್ತು ಆದರೆ 2019-20ನೇ ಸಾಲಿನಲ್ಲಿ ಘೋಷಿಸಿದ್ದ ಕೆಲವೊಂದು ದೂರದೃಷ್ಟಿಯ ಕ್ರಮಗಳಿಗೆ ಈ ಸುಧಾರಣೆಗಳು ಒಂದಿಷ್ಟು ಹೊಡೆತ ನೀಡಿದ್ದಂತೂ ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರದ ಬಜೆಟ್‌ ಮೇಲೆ ಸಹಜವಾಗಿಯೇ ಇಡೀ ದೇಶದ ಚಿತ್ತ ನೆಟ್ಟಿದೆ.

ಶುಕ್ರವಾರ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಸದ್ಯ ದೇಶದ ಆರ್ಥಿಕ ಬೆಳವಣಿಗೆ ದರವು ಶೇ. 5ರಷ್ಟಿದೆ ಎಂದು ಅಂದಾಜಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇ.6ರಿಂದ ಶೇ. 6.5ರಷ್ಟು ಪ್ರಗತಿಯನ್ನು ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಈ ದಿಸೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಹೂಡಿಕೆದಾರರನ್ನು ಆಕರ್ಷಿಸಿ, ದೇಶದ ಸಂಪತ್ತನ್ನು ಹೆಚ್ಚಿಸುವ ಮೂಲಕ ಜಿಡಿಪಿಯನ್ನು ಹೆಚ್ಚಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದ್ದು, ಶನಿವಾರ ಮಂಡನೆಯಾಗಲಿರುವ ಬಜೆಟ್‌ ಇತ್ತ ಹೆಚ್ಚಿನ ಲಕ್ಷ್ಯ ಹರಿಸಲಿದೆ ಎಂಬ ಪರೋಕ್ಷ ಸುಳಿವನ್ನು ನೀಡಿದೆ.

ಭ್ರಷ್ಟಾಚಾರ ನಿರ್ಮೂಲನೆಯ ದೃಷ್ಟಿಯಿಂದ ಎನ್‌ಡಿಎ ಸರಕಾರ ನೋಟು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದ್ದರೂ ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಾಗಿರುವ ಅಲ್ಲೋಲಕಲ್ಲೋಲಗಳು ದೇಶದ ಜನರನ್ನು ತುಸು ಆತಂಕಕ್ಕೀಡುಮಾಡಿವೆ. ವೆಚ್ಚ ಕಡಿತ, ನಷ್ಟ ಸರಿದೂಗಿಸುವಿಕೆ ಮತ್ತಿತರ ಕಾರಣಗಳನ್ನು ಮುಂದೊಡ್ಡಿ ಸಾರ್ವಜನಿಕ ರಂಗದ ಸಣ್ಣ ಬ್ಯಾಂಕ್‌ಗಳನ್ನು ಪ್ರಬಲ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಲಾಗುತ್ತ ಬರಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರ ನೆಚ್ಚಿನ ಬ್ಯಾಂಕ್‌ಗಳು ಬಾಗಿಲು ಮುಚ್ಚುತ್ತಿವೆ. ಇನ್ನು ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಕೂಡಾ ಅತಂತ್ರ ಸ್ಥಿತಿಯಲ್ಲಿದೆ. ಸರಕಾರ ಘೋಷಿಸಿದ ವಿಆರ್‌ಎಸ್‌ ಯೋಜನೆಯಂತೆ 78,000ಕ್ಕೂ ಅಧಿಕ ಮಂದಿ ನೌಕರರು ನಿವೃತ್ತಿಯನ್ನು ಪಡೆದಿದ್ದಾರೆ. ಬಿಎಸ್‌ಎನ್‌ಎಲ್‌ನ್ನು ಈಗಾಗಲೇ ಎಂಟಿಎನ್‌ಎಲ್‌ನೊಂದಿಗೆ ವಿಲೀನ ಮಾಡಲಾಗಿದ್ದು ಇದರ ಭವಿಷ್ಯವೇನು? ಎಂಬುದು ಇನ್ನೂ ಖಚಿತವಾಗಿಲ್ಲ.

ದೇಶದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇಯಲ್ಲೂ ಕೂಡಾ ಒಂದೊಂದೇ ಸೇವೆಗಳನ್ನು ಖಾಸಗೀಕರಣ ಗೊಳಿಸ ಲಾಗುತ್ತಿದೆ. ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಹೇಳುತ್ತಲೇ ಬಂದಿದ್ದರೂ ರೈಲ್ವೇ ಕೂಡಾ ಸರಕಾರದ ಹಿಡಿತದಲ್ಲಿ ಮುಂದುವರಿಯಲಿದೆಯೇ ಅಥವಾ ಇದರಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಲಿದೆಯೇ ಎಂಬ ಪ್ರಶ್ನೆ ಇಲಾಖೆಯ ನೌಕರರನ್ನು ಕಾಡುತ್ತಿದೆ.

Advertisement

ಇವೆಲ್ಲದರ ಬಗೆಗೆ ಮುಂಬರುವ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಒಂದಿಷ್ಟು ಸ್ಪಷ್ಟತೆ ದೊರಕಲಿದೆ ಎಂಬ ನಿರೀಕ್ಷೆ ದೇಶದ ಜನತೆಯದ್ದು. ವರ್ಷಗಳುರುಳಿದಂತೆಯೇ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದ್ದು ಉದ್ಯೋಗ ಸೃಷ್ಟಿಗೆ ಪೂರಕವಾಗುವ ನಿರ್ದಿಷ್ಟ ಯೋಜನೆ ಅಥವಾ ಮಹತ್ತರವಾದ ಸುಧಾರಣ ಕ್ರಮವನ್ನು ಸರಕಾರ ಘೋಷಿಸುವ ಆಶಾವಾದವನ್ನು ಜನರು ಹೊಂದಿದ್ದಾರೆ.

ಈ ಬಜೆಟ್‌ನಲ್ಲೂ ಜನಪ್ರಿಯ ಯೋಜನೆಗಳಿಗೆ ಸರಕಾರ ಜೋತು ಬೀಳುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು ಬೆರಳೆಣಿಕೆ ಯೋಜನೆಗಳ ಘೋಷಣೆಗಳನ್ನು ಮಾತ್ರ ನಿರೀಕ್ಷಿಸಬಹುದಾಗಿದೆ. ಬಜೆಟ್‌ನಲ್ಲಿ ಉದ್ಯಮ ರಂಗದ ಚೇತರಿಕೆಗೆ ಪೂರಕವಾಗಬಲ್ಲ ಸುಧಾರಣ ಕ್ರಮಗಳಿಗೆ ಹೆಚ್ಚಿನ ಒತ್ತು ಲಭಿಸುವ ಸಾಧ್ಯತೆ ಇದ್ದು, ಈ ಮೂಲಕ ದೇಶದ ಆರ್ಥಿಕತೆಯನ್ನು ಮರಳಿ ಹಾದಿಗೆ ತರುವ ಪ್ರಯತ್ನವನ್ನು ವಿತ್ತ ಸಚಿವರು ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ. ಈ ಬಾರಿಯ ಕೇಂದ್ರ ಬಜೆಟ್‌ ಜನಪ್ರಿಯತೆಗಿಂತ ಸುಧಾರಣಾವಾದಿಯಾಗಿರಲಿದೆ ಎಂಬ ಅಭಿಪ್ರಾಯ ಆರ್ಥಿಕ ತಜ್ಞರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next