Advertisement

ಹೊಸ ಘೋಷಣೆಗಳ ನಿರೀಕ್ಷೆ, ಅಭಿವೃದ್ಧಿ ಅಪೇಕ್ಷೆ!

10:53 AM Jun 01, 2022 | Team Udayavani |

ಕಾರ್ಕಳ: ಮಲೆನಾಡು ಮತ್ತು ಕರಾವಳಿ ಸಂಪರ್ಕದ ಪ್ರಧಾನ ಕೊಂಡಿಯಾಗಿ ಬೆಳೆದ ಕಾರ್ಕಳ, ಹೆಬ್ರಿ ತಾಲೂಕು ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿದ್ದರೂ ಸಾಧಿಸುವಂತದ್ದು ಇನ್ನೂ ಕೆಲವಿದೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಮತ್ತೂಂದಷ್ಟು ನಿರೀಕ್ಷೆಗಳು ಈ ಭಾಗದ ನಾಗರಿಕರಲ್ಲಿ ಗರಿಗೆದರಿಕೊಂಡಿವೆ.

Advertisement

ಸಾಕಾರಗೊಳ್ಳಬೇಕಿದೆ ಕನಸುಗಳು

ಉದ್ಯೋಗ ಸೃಷ್ಟಿಗಾಗಿ ಉದ್ದಿಮೆಗಳ ಸ್ಥಾಪನೆಗಳಾಗಬೇಕಿದೆ. ಹಿಂದಿನ ಬಜೆಟ್‌ ನಲ್ಲಿ ಘೋಷಣೆಯಾಗಿದ್ದ ಜವಳಿ ಘಟಕ ಪೂರ್ಣವಾಗಬೇಕಿದೆ. ಪ್ರವಾಸೋದ್ಯಮವಾಗಿ ಅಭಿವೃದ್ಧಿಗೆ ಪೂರಕ ಪ್ಯಾಕೇಜ್‌ನ ಆವಶ್ಯಕತೆಯಿದೆ. ಕಾರ್ಕಳ ಹೆಬ್ರಿ ತಾ|ಗಳಲ್ಲಿ ಸಂಚಾರ ವ್ಯವಸ್ಥೆಗೆ ಸರಕಾರಿ ಸಾರಿಗೆ ಬಸ್‌ ಗಳಿಲ್ಲ. ಕಾರ್ಕಳ, ಹೆಬ್ರಿ ಕೇಂದ್ರೀಕರಿಸಿ ಡಿಪೋದ ಅಗತ್ಯವಿದೆ. ಇಂದಿಗೂ ಹಳ್ಳಿಯ ಜನ, ಶಾಲಾ ಮಕ್ಕಳು ಖಾಸಗಿ ವಾಹನವನ್ನೇ ಅವಲಂಬಿಸುತ್ತಿದ್ದಾರೆ. ಹಬ್‌ಗಳ ನಿರ್ಮಾಣವಾಗಬೇಕಿದೆ. ಪ್ರವಾಸಿ ಕೇಂದ್ರ ಕಾರ್ಕಳ ರೈಲು ಮಾರ್ಗಗಳಿಲ್ಲದೆ ರೈಲು ವ್ಯವಸ್ಥೆಯಿಂದ ತಾ| ವಂಚಿತವಾಗಿದೆ. ಪ. ಘಟ್ಟ ತಪ್ಪಲಿನ ಪ್ರದೇಶವಾದ್ದರಿಂದ ಕಾಡು ಪ್ರಾಣಿಗಳ ಹಾವಳಿಯಿದೆ. ಕೃಷಿ ಸಂಬಂಧಿತ ಸಮಸ್ಯೆಗಳಿವೆ. ಅರಣ್ಯ ವಾಸಿಗಳ ಹಲವು ಕುಟುಂಬಗಳಿಗೆ ಇನ್ನು ಹಕ್ಕುಪತ್ರ ಸಿಕ್ಕಿಲ್ಲ. ನಕ್ಸಲ್‌ ಬಾಧಿತ ಗ್ರಾಮಗಳಲ್ಲಿ ಒಂದಷ್ಟು ಸುಧಾರಣೆಗಳು ಆಗಬೇಕಿದೆ. ಕಾರ್ಕಳ ನಗರದಲ್ಲಿ ಒಂದೇ ಕಡೆ ಕೇಂದ್ರೀಕೃತ ನಿಲ್ದಾಣದ ಆವಶ್ಯಕತೆಯಿದೆ.

ಹೆಬ್ರಿ ಇನ್ನಷ್ಟು ಸೌಕರ್ಯ ಒದಗಬೇಕಿದೆ

ಹೆಬ್ರಿ ತಾ| ಆಗಿ ಪ್ರತ್ಯೇಕಿಸಿಕೊಂಡಿದ್ದರೂ ಕಂದಾಯ ಗ್ರಾಮಗಳ ಸೇರ್ಪಡೆ ವೇಳೆ ಅವೈಜ್ಞಾನಿಕ ವಿಭಜನೆಯಿಂದ ಜನ ಹೆಬ್ರಿ ತಾ|ನಲ್ಲಿದ್ದರೂ ಇತರ ತಾ|ಗಳಿಗೆ ಅಲೆದಾಡುತ್ತಿದ್ದು ಇದನ್ನು ತಪ್ಪಿಸಬೇಕಿದೆ.

Advertisement

ಕುಂದಾಪುರ, ಕಾರ್ಕಳದಿಂದ ಬೇರ್ಪಟ್ಟ ಹೆಬ್ರಿ ತಾ|ಗೆ ಸೇರ್ಪಡೆಗೊಂಡ ಗ್ರಾಮಗಳ ಜನತೆಗೆ ಹೆಬ್ರಿ ತಾ|ನ ಸೇವೆ ದೊರಕುವಂತೆ ಆಗಬೇಕು. ಹೆಬ್ರಿ ತಾಲೂಕಾಗಿ ಪೂರ್ಣಗೊಂಡಿದ್ದರೂ ಹೆಬ್ರಿ ತಾ|ನ ಕಡತಗಳು ಕಾರ್ಕಳದಲ್ಲೇ ಇವೆ. ಹೆಬ್ರಿ ತಾ| ಕಚೇರಿಗೆ ವರ್ಗಾಯಿಸಿ ಸೇವೆ ದೊರಕಿಸುವಂತೆ ಮಾಡಬೇಕಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ. ಆಸ್ಪತ್ರೆಯನ್ನು ತಾ| ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕಿದೆ. ಉಪನೋಂದಣಿ ಕಚೇರಿ, ಹೆಬ್ರಿ ತಾ| ಸುಸಜ್ಜಿತ ಪೊಲೀಸ್‌ ಠಾಣೆ ಅವಶ್ಯವಿದೆ. ಅಗ್ನಿಶಾಮಕ ಸ್ಟೇಶನ್‌ಗೆ ಜಾಗ ಗುರುತಿಸಲಾಗಿದೆಯಷ್ಟೆ. ದಾನಿಗಳು ನೀಡಿದ ಆ್ಯಂಬುಲೆನ್ಸ್‌ ನಿರ್ವಹಣೆಗೆ ವ್ಯವಸ್ಥೆಗಳಿಲ್ಲ. ಪೂರ್ಣ ಪ್ರಮಾಣದ ತಾಲೂಕಾಗಿದ್ದರೂ ಕೃಷಿ, ರಿಜಿಸ್ಟ್ರಾರ್‌ ಇತ್ಯಾದಿ ಕೆಲವು ಇಲಾಖೆಗಳು ಇನ್ನು ತಾ|ಗೆ ಬಂದಿಲ್ಲ. ಸರ್ವೇಯರ್‌ಗಳ ಸಮಸ್ಯೆಯಿಂದ ಹೊಸ ಸರ್ವೇ ಆಗುತ್ತಿಲ್ಲ.

ಸಿಎಂ ಒಡನಾಟ

ಸಚಿವ ವಿ. ಸುನಿಲ್‌ಕುಮಾರ್‌ ಅವರು ಸಿಎಂ ಅವರ ನೇರ ಒಡವಾಟ ಇರಿಸಿ ಕೊಂಡವರು ಎನ್ನುವುದು ನಿರೀಕ್ಷೆ ಹೆಚ್ಚಲು ಇನ್ನೊಂದು ಕಾರಣ. ಸಹಜವಾಗಿ ಕ್ಷೇತ್ರಕ್ಕೆ ಮತ್ತಷ್ಟೂ ಯೋಜನೆಗಳನ್ನು ತರುವಲ್ಲಿ ಸಚಿವರು ಮುಖ್ಯಮಂತ್ರಿಯ ಮೂಲಕ ಯಶಸ್ವಿಯಾಗುತ್ತಾರೆ ಎನ್ನುವ ನಿರೀಕ್ಷೆಯಿಂದಲೇ ಜನ ಸಿಎಂ ಭೇಟಿಗೆ ಕಾತರ ಹೊಂದಿದ್ದಾರೆ. ಸಿಎಂ ಸ್ವಾಗತಕ್ಕೆ ಎರಡೂ ತಾ|ಗಳು ಸಜ್ಜಾಗಿವೆ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಉಭಯ ತಾ|ನ ಎಲ್ಲೆಡೆ ಪೂರ್ವ ಸಿದ್ಧತೆ ಸಭೆ ನಡೆದಿದೆ. ಅಧಿಕಾರಿಗಳ ಜತೆಗೂ ಹಲವು ಸುತ್ತಿನ 6 ಸಭೆ ನಡೆದು ತಯಾರಿಗಳಾಗಿವೆ.

ಸಿಎಂ ಮುಂದಿಡುವೆ

ಉಭಯ ತಾ|ನಲ್ಲಿ ಸಾಕಷ್ಟು ಅಭಿವೃದ್ಧಿಗಳು ಇತ್ತೀಚಿನ ವರ್ಷಗಳಲ್ಲಿ ಆಗಿದೆ. ಅಭಿವೃದ್ಧಿಗಳು ಎಲ್ಲವೂ ಒಂದೆ ಬಾರಿಗೆ ಆಗುವಂತದಲ್ಲ. ಇಷ್ಟರಲ್ಲೆ ಸಾಧ್ಯವಾಗುವುದನ್ನು ಮಾಡಿದ್ದೇವೆ. ಇನ್ನು ಮುಂದೆಯೂ ಮಾಡಿ ತೋರಿಸುತ್ತೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಿಎಂ ಮುಂದೆ ಕೆಲವು ಬೇಡಿಕೆಗಳನ್ನು ಭೇಟಿ ವೇಳೆ ಅನಂತರವೂ ಇಡುವವನಿದ್ದೇನೆ. ವಿ.ಸುನಿಲ್‌ಕುಮಾರ್, ಸಚಿವರು

ಆಗಿದೆ, ಆಗುವಂಥದ್ದಿದೆ

ಹೆಬ್ರಿ ಅನ್ನು ಹೋಬಳಿ ಮಾಡಿಕೊಂಡು ತಾ| ಮಾಡಬೇಕಿತ್ತು. ಅದು ಪೂರ್ವದಲ್ಲಿ ಮಾಡದೆ ಸಮಸ್ಯೆಯಾಗಿದೆ. ಸಚಿವ ಸುನಿಲ್‌ಕುಮಾರ್‌ ಬೇಡಿಕೆಯನ್ನು ಈಡೇರಿಸುತ್ತ ಬರುತ್ತಿದ್ದಾರೆ. ಇನ್ನು ಆಗುವಂಥದ್ದಿದೆ. ಹೆಬ್ರಿ ತಾ| ಕೇಂದ್ರದಲ್ಲೇ ಎಲ್ಲ ಸೌಕರ್ಯಗಳು ಸಿಗುವಂತಾಗಬೇಕು. ಸಂಜೀವ ಶೆಟ್ಟಿ ಹೆಬ್ರಿ, ಅಧ್ಯಕ್ಷ, ಪ್ರಗತಿಪರ ನಾಗರಿಕ ಹೋರಾಟ ಸಮಿತಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next