Advertisement
ಗಂಟೆಗೆ ಸುಮಾರು 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರಗೊಳ್ಳುವ ಸಾಧ್ಯತೆ ಇದೆ. ನ.4ರವರೆಗೆ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
Related Articles
ಮಲ್ಪೆ: “ಕ್ಯಾರ್’ ಬಳಿಕ ಈಗ “ಮಹಾ’ ಚಂಡಮಾರುತ ಮೀನುಗಾರರು ತತ್ತರಿಸುವಂತೆ ಮಾಡಿದೆ. ಹವಾಮಾನ ಮತ್ತು ಮೀನುಗಾರಿಕೆ ಇಲಾಖೆ ಎಚ್ಚರಿಸಿದ ಹಿನ್ನೆಲೆಯಲ್ಲಿ ಗುರುವಾರ ಎಲ್ಲ ಬೋಟುಗಳು ಮತ್ತೆ ದಡ ಸೇರುವಂತಾಗಿದೆ. ನ. 4ರ ವರೆಗೆ ಕಡಲಿಗಿಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಗಣೇಶ್ ಕೆ. ಎಚ್ಚರಿಸಿದ್ದಾರೆ.
Advertisement
ಮತ್ತೆ ಚಂಡಮಾರುತದ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಲ್ಪೆಯ ಶೇ. 100ರಷ್ಟು ಬೋಟುಗಳು ಗುರುವಾರ ಮಧ್ಯಾಹ್ನವೇ ದಡ ಸೇರಿವೆ. ಕೆಲವು ಬೋಟುಗಳು ಕಾರವಾರ ಬಂದರಿನಲ್ಲಿವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಹೇಳಿದ್ದಾರೆ.
ಕಾಸರಗೋಡು: ಯೆಲ್ಲೋ ಅಲರ್ಟ್ ಕಾಸರಗೋಡು: ಮುಂಜಾಗ್ರತೆಯ ಕ್ರಮವಾಗಿ ಕಾಸರಗೋಡು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಾಲೆಗಳಿಗೆ ರಜೆ
ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಕಾಸರಗೋಡು ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿದೆ. ದೋಣಿ ಅವಘಡ: 7 ಮಂದಿ ರಕ್ಷಣೆ
ಕಾಸರಗೋಡು: ಮಹಾ ಚಂಡಮಾರುತದ ಪರಿಣಾಮ ಸಮುದ್ರಕ್ಕೆ ತೆರಳಿದ ಎರಡು ಮೀನುಗಾರಿಕೆ ದೋಣಿಗಳು ಮಗುಚಿ ಬಿದ್ದಿದ್ದು, 7 ಮಂದಿ ಆಪಾಯದಿಂದ ಪಾರಾಗಿದ್ದಾರೆ. ಓರ್ವ ಗಾಯಗೊಂಡಿದ್ದಾರೆ. “ಮಹಾ’ ಪ್ರಭಾವ: ಉತ್ತಮ ಮಳೆ
ಅರಬಿ ಸಮುದ್ರ-ಲಕ್ಷದ್ವೀಪದಲ್ಲಿ ಉಂಟಾದ “ಮಹಾ’ ಚಂಡಮಾರುತವು ಪ್ರಬಲ ಗೊಳ್ಳುತ್ತಿರುವ ಪರಿಣಾಮ ಕರಾವಳಿಯ ಅನೇಕ ಕಡೆಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಇನ್ನೆರಡು ದಿನ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿದೆ. ಮಂಗಳೂರು ನಗರದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಭಾರೀ ಮಳೆಯಾಗಿ ರಾತ್ರಿ ವೇಳೆಗೆ ಬಿರುಸುಗೊಂಡಿತ್ತು. ಗಾಳಿ ಜೋರಾಗಿತ್ತು. ಧರ್ಮಸ್ಥಳ, ಬೆಳ್ತಂಗಡಿ, ಮಡಂತ್ಯಾರು, ಪುತ್ತೂರು, ಉಪ್ಪಿನಂಗಡಿ, ವೇಣೂರು, ಕಡಬ, ಸುಳ್ಯ, ಬಂಟ್ವಾಳ, ಉಳ್ಳಾಲ, ಕಾಸರಗೋಡು, ಕನ್ಯಾನ, ವಿಟ್ಲ, ಪುಂಜಾಲಕಟ್ಟೆ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಸುಬ್ರಹ್ಮಣ್ಯ ಸುತ್ತಮುತ್ತಲೂ ದಿನವಿಡೀ ಮಳೆಯಾಗಿದೆ. ಹಲವೆಡೆ ವಿದ್ಯುತ್ ಸ್ಥಗಿತಗೊಂಡಿತ್ತು. ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಉತ್ತಮ ಮಳೆಯಾಗಿದೆ. ತೆಕ್ಕಟ್ಟೆ, ಕಾಪು, ಕಟಪಾಡಿ, ಶಿರ್ವ, ಕೋಟೇಶ್ವರ, ಸಿದ್ದಾಪುರ, ಕೊಲ್ಲೂರು, ವಂಡ್ಸೆ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ. ವಾಯವ್ಯದತ್ತ “ಮಹಾ’ ಚಲನೆ
“ಮಹಾ’ ಚಂಡಮಾರುತವು ತಾಸಿಗೆ ಸುಮಾರು 18 ಕಿ.ಮೀ. ವೇಗದಲ್ಲಿ ವಾಯವ್ಯ ದಿಕ್ಕಿನತ್ತ ಚಲಿಸುತ್ತ ತೀವ್ರ ಸ್ವರೂಪ ಪಡೆಯುತ್ತಿದ್ದು, ಅ.31ರ ರಾತ್ರಿ 7.30ರ ಹೊತ್ತಿಗೆ ಲಕ್ಷದ್ವೀಪವನ್ನು ದಾಟಿದೆ. ಮುಂದಿನ 24 ತಾಸುಗಳಲ್ಲಿ ಅದು ವಾಯವ್ಯಕ್ಕೇ ಮುಂದುವರಿಯುತ್ತ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರಿಂದ ಲಕ್ಷದ್ವೀಪದಲ್ಲಿ ಗರಿಷ್ಠ ತೀವ್ರತೆಯ ಗಾಳಿಮಳೆ, ಕೇರಳ, ದ. ತಮಿಳುನಾಡು ಮತ್ತು ಕರ್ನಾಟಕದ ಕರಾವಳಿಯಲ್ಲಿ ವೇಗದ ಗಾಳಿ ಸಹಿತ ಭಾರೀ ಮಳೆಯಾಗಲಿದೆ.