Advertisement

ಎಕ್ಸಿಟ್‌ ಪೋಲ್‌ ಎಫೆಕ್ಟ್ ಸೆನ್ಸೆಕ್ಸ್‌ 1300 ಅಂಕ ಏರಿಕೆ

02:30 AM May 21, 2019 | Team Udayavani |

ಮುಂಬಯಿ: ಲೋಕಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆ ಫ‌ಲಿತಾಂಶಕ್ಕೆ ಸೋಮವಾರ ಮುಂಬಯಿ ಷೇರು ಮಾರುಕಟ್ಟೆ 1,300 ಅಂಕಗಳ ಸ್ವಾಗತ ಕೋರಿದೆ. ರವಿವಾರ ಪ್ರಕಟವಾದ ಮತದಾನೋತ್ತರ ಸಮೀಕ್ಷೆ ಗಳ ಫ‌ಲಿತಾಂಶದಲ್ಲಿ ಎನ್‌ಡಿಎ ಸರಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಊಹಿಸಲಾಗಿದೆ. ಹೀಗಾಗಿ ಸೋಮವಾರ ಮಾರುಕಟ್ಟೆ ವಹಿವಾಟಿಗೆ ತೆರೆದುಕೊಳ್ಳುತ್ತಿದ್ದಂತೆಯೇ ಭಾರಿ ಏರಿಕೆ ಕಂಡಿದ್ದು, ದಿನದ ಅಂತ್ಯಕ್ಕೆ ಸೆನ್ಸೆಕ್ಸ್‌ ಒಟ್ಟು 1400 ಅಂಕ ಏರಿದೆ. ಸೆನ್ಸೆಕ್ಸ್‌ 39,000 ಗಡಿ ದಾಟಿದ್ದರೆ, ನಿಫ್ಟಿ 11,800 ರ ಗಡಿಯನ್ನು ಮೀರಿತು. 10 ವರ್ಷಗಳಲ್ಲೇ ಒಂದೇ ದಿನ ಕಂಡ ಅತಿ ಹೆಚ್ಚಿನ ಏರಿಕೆಗಳಲ್ಲಿ ಇದು ಒಂದಾಗಿದೆ.
ಈ ಏರಿಕೆಯಿಂದ ಸಹಜವಾಗಿಯೇ ಹೂಡಿಕೆದಾರರು 5.33 ಲಕ್ಷ ಕೋಟಿ ರೂ. ಗಳಿಕೆ ಮಾಡಿದ್ದಾರೆ. ಬಿಎಸ್‌ಇ ಲಿಸ್ಟೆಡ್‌ ಕಂಪೆನಿಗಳು ಒಟ್ಟು 151.93 ಲಕ್ಷ ಕೋಟಿ ರೂ.ಗೆ ಮೌಲ್ಯ ಹೆಚ್ಚಿಸಿಕೊಂಡಿವೆ. ಅಂತಿ ಮವಾಗಿ ದಿನದ ಅಂತ್ಯಕ್ಕೆ ಸೆನ್ಸೆಕ್ಸ್‌ 1421 ಪಾಯಿಂಟ್‌ ಏರಿಕೆ ಕಂಡು 39,352 ಆಗಿದ್ದರೆ, ನಿಫ್ಟಿ 421 ಪಾಯಿಂಟ್‌ ಏರಿಕೆಯಾಗಿ 11, 828ಕ್ಕೆ ತಲುಪಿದೆ.
ಇನ್ನು ಬ್ಯಾಂಕ್‌ ನಿಫ್ಟಿ ಕೂಡ 1309 ಅಂಕ ಗಳಿಸಿದೆ. ಬ್ಯಾಂಕ್‌ ಆಫ್ ಬರೋಡಾ, ಇಂಡಸ್‌ಇಂಡ್‌ ಬ್ಯಾಂಕ್‌, ಎಸ್‌ಬಿಐ, ಯೆಸ್‌ ಬ್ಯಾಂಕ್‌ ಭಾರಿ ಏರಿಕೆ ಕಂಡಿವೆ. 50ಕ್ಕೂ ಹೆಚ್ಚು ಷೇರುಗಳು ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚಿನ ಮೌಲ್ಯ ಗಳಿಸಿಕೊಂಡಿವೆ. ಬಜಾಜ್‌ ಫಿನ್‌ಸರ್ವ್‌, ಶ್ರೀ ಸಿಮೆಂಟ್ಸ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್ಸಿ ಬ್ಯಾಂಕ್‌, ಎಚ್‌ಡಿಎಫ್ಸಿ, ಕೋಟಕ್‌ ಬ್ಯಾಂಕ್‌, ಟೈಟಾನ್‌ ಕಂಪೆನಿ, ಎಕ್ಸಿಸ್‌ ಬ್ಯಾಂಕ್‌, ಐಸಿಐ ಸಿಐ ಬ್ಯಾಂಕ್‌, ಎಸ್‌ಬಿಐ ಮತ್ತು ಡಿಸಿಬಿ ಬ್ಯಾಂಕ್‌ ಹಾಗೂ ಇತರ ಕಂಪೆನಿಗಳ ಷೇರುಗಳು ಭಾರೀ ಏರಿಕೆ ಕಂಡಿವೆ. ಇನ್ನೊಂದೆಡೆ ರೂಪಾಯಿ ಕೂಡ ಮೌಲ್ಯವರ್ಧನೆಯಾಗಿದ್ದು, ದಿನದ ವಹಿವಾಟಿನ ವೇಳೆ ಡಾಲರ್‌ ವಿರುದ್ಧ 86 ಪೈಸೆ ಕುಸಿದು, 69.36 ಕ್ಕೆ ತಲುಪಿದೆ.

Advertisement

ರಿಲಯನ್ಸ್‌, ಎಚ್‌ಡಿಎಫ್ಸಿಯೇ ನಿರ್ಣಾಯಕ
ಸೋಮವಾರದ ಏರಿಕೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್ ಹಾಗೂ ಎಚ್‌ಡಿಎಫ್ಸಿ ಬ್ಯಾಂಕ್‌ ಷೇರುಗಳೇ ನಿರ್ಣಾಯಕವಾಗಿದ್ದವು. ಈ ಮೂರು ಷೇರುಗಳಿಂದಲೇ ಸೆನ್ಸೆಕ್ಸ್‌ ಸುಮಾರು 500 ಅಂಕಗಳಷ್ಟು ಸೂಚ್ಯಂಕವನ್ನು ಮೇಲಕ್ಕೇರಿಸಿವೆ. ಸೆನ್ಸೆಕ್ಸ್‌ ಷೇರುಗಳ ಪೈಕಿ ಇನ್ಫೋಸಿಸ್‌ ಹಾಗೂ ಬಜಾಜ್‌ ಆಟೋ ಹೊರತುಪಡಿಸಿ ಉಳಿದ ಎಲ್ಲ ಷೇರುಗಳು ಹಸಿರಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next