Advertisement

ಗಮನಸೆಳೆದ ಜನಜಾಗೃತಿ ವಸ್ತು ಪ್ರದರ್ಶನ

09:27 PM Aug 07, 2019 | Lakshmi GovindaRaj |

ಚಾಮರಾಜನಗರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲೆಯ ನಾಗರಿಕರಿಗೆ ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ವಿವಿಧ ಆರೋಗ್ಯ ವಿಷಯಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಜನಜಾಗೃತಿ ವಸ್ತು ಪ್ರದರ್ಶನಕ್ಕೆ ನಗರದಲ್ಲಿ ಬುಧವಾರ ಚಾಲನೆ ನೀಡಲಾಯಿತು.

Advertisement

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಮಾಹಿತಿ ಪೂರಕ ಜನಜಾಗೃತಿ ವಸ್ತುಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ವೀಕ್ಷಣೆ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಆರೋಗ್ಯ ಇಲಾಖೆಯ ಅನುಷ್ಠಾನ ಮಾಡುತ್ತಿರುವ ಆರೋಗ್ಯ, ನೈರ್ಮಲ್ಯ ಕಾರ್ಯಕ್ರಮಗಳ ಕುರಿತ ಮಾಹಿತಿ ಫ‌ಲಕಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.

ಮಾಹಿತಿಗಳು ಅತ್ಯಂತ ಉಪಯುಕ್ತ: ನಂತರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಆರೋಗ್ಯ ಮತ್ತು ಸ್ವತ್ಛತೆಯ ವಿಷಯಗಳ ಬಗ್ಗೆ ಆಕರ್ಷಕವಾಗಿ ವಸ್ತು ಪ್ರದರ್ಶನದಲ್ಲಿ ಫ‌ಲಕಗಳು ಮೂಡಿಬಂದಿವೆ. ಜನಸಾಮಾನ್ಯರು ಅದರಲ್ಲೂ ಮಹಿಳೆಯರಿಗೆ ಆರೋಗ್ಯ ಸಂಬಂಧಿ ನೀಡಲಾಗಿರುವ ಮಾಹಿತಿಗಳು ಅತ್ಯಂತ ಉಪಯುಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ವಸ್ತುಪ್ರದರ್ಶನದ ಪ್ರಯೋಜನ ಪಡೆಯಬೇಕು ಎಂದರು.

ಆರೋಗ್ಯ ಸಮಸ್ಯೆ ತಪ್ಪಿಸಿ: ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿರುವ ಫ‌ಲಕಗಳ ಚಿತ್ರಗಳು ಜನರಿಗೆ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತಿಳಿಸುತ್ತದೆ. ಈ ನಿಟ್ಟಿನಲ್ಲಿ ಜನ ಸಾಮಾನ್ಯರು ಆರೋಗ್ಯದ ಕಾಳಜಿಗಾಗಿ ಜಾಗೃತರಾದರೆ ಮುಂಬರುವ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

Advertisement

ಗಮನ ಸೆಳೆದ ಫ‌ಲಕಗಳು: ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆ, ನವಜಾತ ಶಿಶು ಆರೈಕೆ, ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ತಾಯಿ ಕಾರ್ಡ್‌, ಶೌಚಾಲಯ ಬಳಕೆ, ನೀರು ಸಂರಕ್ಷೆಯಂತಹ ಮಾಹಿತಿ ನೀಡುವ ಫ‌ಲಕಗಳು ವಸ್ತುಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ಮುಂಜಾಗ್ರತೆ ವಹಿಸಿ: ಕ್ಷಯರೋಗ ನಿಯಂತ್ರಣ, ಡೆಂಘೀ ಹರಡದಂತೆ ವಹಿಸಬೇಕಿರುವ ಮುಂಜಾಗ್ರತೆ ಕ್ರಮಗಳು, ಹಸಿ ಮತ್ತು ಒಣ ಕಸದ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಮಾಹಿತಿ, ಫ್ಯೋರೋಸಿಸ್‌ ತಡೆಗಟ್ಟುವಿಕೆ ಕುರಿತು ಚಿತ್ರ ಫ‌ಲಕಗಳ ಮೂಲಕ ಜನರನ್ನು ಜಾಗೃತಿ ಮೂಡಿಸುವಲ್ಲಿ ವಸ್ತುಪ್ರದರ್ಶನ ರೂಪುಗೊಂಡಿದೆ.

ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಎಂ.ಸಿ. ರವಿ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next