ನವದೆಹಲಿ: ಆರೋಪಿಯಾಗಲಿ ಅಥವಾ ತಪ್ಪಿತಸ್ಥನಾಗಲಿ ಆತನ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವ ಕಾರ್ಯಾಚರಣೆ ವ್ಯವಸ್ಥೆ ಬದಲಿ ನ್ಯಾಯಕ್ಕೆ ಸ್ವೀಕಾರ್ಹವಾದ ಕಾರ್ಯವಲ್ಲ. ಇದು ಕಾನೂನು ಪ್ರಕ್ರಿಯೆಯೂ ಅಲ್ಲ ಎಂಬುದಾಗಿ ಸುಪ್ರೀಂಕೋರ್ಟ್ (Supreme court) ಬುಧವಾರ (ನ.13) ಉತ್ತರಪ್ರದೇಶ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆ ಕುರಿತು ಮಹತ್ವದ ತೀರ್ಪನ್ನು ಪ್ರಕಟಿಸಿದೆ.
ಅ*ತ್ಯಾಚಾರ, ಕೊ*ಲೆಯಂತಹ ಪ್ರಕರಣದ ಆರೋಪಿಗಳ ಮನೆಯನ್ನು ಬುಲ್ಡೋಜರ್ ಬಳಸಿ ಉತ್ತರಪ್ರದೇಶ ಸರ್ಕಾರ ಧ್ವಂಸಗೊಳಿಸುತ್ತಿದ್ದ ಕಾರ್ಯಾಚರಣೆ ನಿಲ್ಲಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.
ಕೇವಲ ಆರೋಪದ ಆಧಾರದ ಮೇಲೆ ಏಕಾಏಕಿ ಬುಲ್ಡೋಜರ್ ಬಳಸಿ ಮನೆಯನ್ನು ಧ್ವಂಸಗೊಳಿಸುವುದು ಸಾಂವಿಧಾನಿಕ ಕಾನೂನು ಮತ್ತು ಅಧಿಕಾರವನ್ನು ಬೇರ್ಪಡಿಸುವ ಮೂಲತತ್ವದ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ವಿಚಾರಣೆ ವೇಳೆ ತಿಳಿಸಿತ್ತು.
ನ್ಯಾಯಯುತ ವಿಚಾರಣೆ ನಡೆಸದೇ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಪೀಠ ತಿಳಿಸಿದ್ದು, ಆರೋಪಿಗಳು ಅಥವಾ ತಪ್ಪಿತಸ್ಥರು ಸೇರಿದಂತೆ ಎಲ್ಲರಿಗೂ ಕಾನೂನಿನ ರಕ್ಷಣೆ ಪಡೆದುಕೊಳ್ಳುವ ಅವಕಾಶ ಇದೆ.
ಇಂತಹ ಪ್ರಕರಣಗಳಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಉತ್ತರಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಸುಪ್ರೀಂಕೋರ್ಟ್, ಇದು ಮೂಲಭೂತ ಕಾನೂನು ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದೆ.
ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಡೆದುಕೊಂಡ ಅಧಿಕಾರಿಗಳೇ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ. ಮುಖ್ಯವಾಗಿ ನ್ಯಾಯಾಂಗದ ಆದೇಶದ ಗೈರು ಕಾನೂನನ್ನು ದುರ್ಬಲಗೊಳಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.