ನವದೆಹಲಿ: ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ನೇಣಿಗೇರಿಸುವ ಬದಲು ಬೇರೆ ಯಾವುದಾದರೂ ಕಡಿಮೆ ನೋವಿನ ಪ್ರಕ್ರಿಯೆ ಮೂಲಕ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ಸಾಧ್ಯವಿದೆಯೇ ಎಂದು ಪರಿಶೀಲಿಸಿ, ಚರ್ಚಿಸಿ, ಈ ಕುರಿತು ಮಾಹಿತಿ ಸಂಗ್ರಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಅತ್ಯಂತ ಕ್ರೂರವೆನಿಸುವ ನೇಣಿನ ಬದಲು, ಕಡಿಮೆ ನೋವುಕಾರವಾದ ಮಾರಣಾಂತಿಕ ಇಂಜೆಕ್ಷನ್, ಗುಂಡು ಹಾರಿಸುವುದು ಅಥವಾ ವಿದ್ಯುತ್ ಕುರ್ಚಿಯ ಮೇಲೆ ಕೂರಿಸುವ ಶಿಕ್ಷೆಗಳನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ ಆಲಿಸಿದೆ.
ಈ ವೇಳೆ ಕಡಿಮೆ ನೋವಿನ ಮೂಲಕ ಶಿಕ್ಷೆಯ ಅನ್ಯವಿಧಾನವನ್ನು ತಿಳಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿದೆ. ಅಲ್ಲದೇ, ನೇಣು ಪ್ರಕ್ರಿಯೆಯಿಂದಾಗುವ ಪರಿಣಾಮದ ಬಗ್ಗೆ ವೈಜ್ಞಾನಿಕ ದತ್ತಾಂಶಗಳು ಹಾಗೂ ವರದಿಯನ್ನು ಸಲ್ಲಿಸುವಂತೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರನ್ನು ಕೋರಿದ್ದು,ಬಳಿಕ ಈ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸುವುದಾಗಿಯೂ ತಿಳಿಸಿದೆ.