Advertisement

ಲಾರಿ ಮಾಲೀಕರಿಗೆ ವಿನಾಯಿತಿ ನೀಡಿ: ಸೈಯದ್‌

09:41 AM May 29, 2021 | Team Udayavani |

ದಾವಣಗೆರೆ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಲಾರಿ ಮಾಲೀಕರಿಗೆ ಕೆಲವು ವಿನಾಯಿತಿ ನೀಡಿ, ಚಾಲಕರಿಗೆ ಪರಿಹಾರ ಪ್ಯಾಕೇಜ್‌ ಘೋಷಿಸಬೇಕು ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೊàರ್ಟ್‌ ಏಜೆಂಟರ್‌ ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾರಿ ಮಾಲೀಕರ ಸಂಕಷ್ಟವನ್ನು ಅರಿತು ಸರ್ಕಾರ 1ರಿಂದ 3 ಲಾರಿ ಹೊಂದಿರುವ ಮಾಲೀಕರಿಗೆ ಒಂದು ವರ್ಷ ಕಾಲ ತೆರಿಗೆ ವಿನಾಯಿತಿ ನೀಡಬೇಕು. ಮಾಲೀಕರ ಆರ್ಥಿಕ ಸ್ಥಿತಿ ಸುಧಾರಿಸುವವರೆಗೂ ಕನಿಷ್ಠ 3 ತಿಂಗಳುಗಳ ಕಾಲ ಟೋಲ್‌ ಸಂಗ್ರಹಿಸಬಾರದು. ಲಾರಿ ಖರೀದಿಗೆ ಹಣಕಾಸು ಸಂಸ್ಥೆಗಳು ನೀಡಿರುವ ಸಾಲ ಮರು ಪಾವತಿ ಮಾಡಲು ಒಂದು ಬಡ್ಡಿ ರಹಿತವಾಗಿ ಕಂತು ತುಂಬಿಸಿಕೊಳ್ಳಲು ನಿರ್ದೇಶನ ನೀಡಬೇಕು. ಲಾರಿ ಚಾಲಕರಿಗೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು. ಕಳೆದ ವರ್ಷದ ಲಾಕ್‌ಡೌನ್‌ ವೇಳೆಯಲ್ಲಿ ಲೀಟರ್‌ಗೆ 68 ರೂ. ಇದ್ದ ಡೀಸೆಲ್‌ ಈಗ 91 ರೂ. ತಲುಪಿದೆ. ಹೀಗೆ ಡೀಸೆಲ್‌ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವ ಸರ್ಕಾರದ ಕ್ರಮದಿಂದ ಲಾರಿ ಮಾಲೀಕರಿಗೆ ಆರ್ಥಿಕ ಹೊರೆ ಆಗುತ್ತಿದೆ. ಆದ್ದರಿಂದ ತಕ್ಷಣವೇ ಡೀಸೆಲ್‌ ಬೆಲೆ ಏರಿಕೆಯನ್ನು ವಾಪಾಸ್‌ ಪಡೆಯಬೇಕು. ಇಲ್ಲದಿದ್ದರೆ, ಲಾಕ್‌ಡೌನ್‌ ಬಳಿಕ ಲಾರಿ ಮಾಲೀಕರು ಮುಷ್ಕರ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೋವಿಡ್ ಸಂಕಷ್ಟದ ನಡುವೆಯೇ ಡೀಸೆಲ್‌, ವಾಹನಗಳ ಬಿಡಿ ಭಾಗಗಳು, ಟೈರ್‌ಗಳ ಬೆಲೆ ಶೇ.15 ರಷ್ಟು ಏರಿಕೆಯಾಗಿವೆ. ಈ ಬೆಲೆ ಏರಿಕೆಯು ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಲಾರಿ ಮಾಲೀಕರ ಗಾಯದ ಮೇಲೆ ಬರೆ ಎಳೆದಿದೆ. ಅಲ್ಲದೇ ಟೋಲ್‌, ಟ್ಯಾಕ್ಸ್‌, ತ್ತೈಮಾಸಿಕ ರಸ್ತೆ ತೆರಿಗೆ, ಎಫ್‌ಸಿ, ಪರ್ಮಿಟ್‌ ಶುಲ್ಕಗಳು ಸಹ ಹೆಚ್ಚಳವಾಗಿದೆ. ಈ ನಡುವೆ ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌, ಜನತಾ ಕರ್ಫ್ಯೂ ವಿಧಿಸಿ, ಅಗತ್ಯ ವಸ್ತುಗಳ ಸರಕು ಸಾಗಾಣಿಕೆಗೆ ಅವಕಾಶ ನೀಡಿದೆ. ಆದರೆ, ಉದ್ದಿಮೆ ಮತ್ತು ಕೈಗಾರಿಕೆಗಳು ಬಂದ್‌ ಆಗಿರುವುದರಿಂದ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಲಾರಿಗಳು ನಿಂತಲ್ಲೇ ನಿಂತಿವೆ. ಆದ್ದರಿಂದ ಲಾರಿ ಮಾಲೀಕರು ಸಹ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಲಾರಿ ಮಾಲೀಕರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದರು.

ಸಂಘದ ಕಾರ್ಯದರ್ಶಿ ಎಸ್‌.ಕೆ. ಮಲ್ಲಿಕಾರ್ಜುನ್‌, ಪದಾಧಿಕಾರಿಗಳಾದ ದಾದಾಪೀರ್‌, ಮಹಾಂತೇಶ್‌ ಒಣರೊಟ್ಟಿ, ಮುರುಗೇಶ್‌, ಖಲೀಲ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next