ಮೈಸೂರು: ವಿಜಯದಶಮಿ ದಿನ ನಡೆಯಬೇಕಿದ್ದ ರೋಮಾಂಚಕಾರಿ ವಜ್ರಮುಷ್ಠಿ ಕಾಳಗ ಅರಮನೆಯ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆಯಿತು. ಮೈಸೂರಿನ ಮಂಜುನಾಥ ಜಟ್ಟಿ -ಚನ್ನಪಟ್ಟಣದ ದ್ಯಾದರ ಜಟ್ಟಿ ಜೋಡಿ, ಚಾಮರಾಜ ನಗರದ ಪುರುಷೋತ್ತಮ ಜಟ್ಟಿ ಹಾಗೂ ಬೆಂಗಳೂರಿನ ರಾಘವೇಂದ್ರ ಜಟ್ಟಿ ಜೊಡಿಗಳು ಅಖಾಡಕ್ಕಿಳಿದು ವಜ್ರಮುಷ್ಠಿ ಕಾಳಗ ನಡೆಸಿದರು.
ಭಾನುವಾರ ರಾತ್ರಿಯೇ ಮೈಸೂರು ನಗರಕ್ಕೆ ಆಗಮಿಸಿದ್ದ ಜಟ್ಟಿಗಳು ಸೋಮವಾರ ಬೆಳಗ್ಗೆಯೇ ನಜರ್‌ಬಾದ್‌ನಲ್ಲಿರುವ ನಿಂಬುಜಾದೇವಿ ದೇವಸಾನದಲ್ಲಿ ಪೂಜೆ ಸಲ್ಲಿಸಿ,ಅಲ್ಲಿಂದ ಮೆರವಣಿಗೆಯಲ್ಲಿ ಹೊರಟು ಬೆಳಗ್ಗೆ 9.15ಕ್ಕೆ ಅರಮನೆಗೆ ಆಗಮಿಸಿದರು. ಅರಮನೆಯ ಕಲ್ಯಾಣಮಂಟಪದ ಎದುರಿನ ಸವಾರಿತೊಟ್ಟಿಯಲ್ಲಿನ ಅಖಾಡದ ಮಟ್ಟಿಗೆ ಪೂಜೆ ಸಲ್ಲಿಸಲಾಯಿತು. ಕಾಳಗಕ್ಕೆ ಸಜ್ಜಾಗಿದ್ದ ಜಟ್ಟಿಗಳು ಪೂಜೆ ಸಲ್ಲಿಸಿ, ಮಟ್ಟಿಗೆ ನಮಸ್ಕಾರ ಮಾಡಿದರು.
ಹಿರಿಯ ಜಟ್ಟಿಗಳು ಸಾಂಪ್ರದಾಯಿಕವಾಗಿ ಎರಡೂ ಜೋಡಿಗಳನ್ನು ಕಾಳಗಕ್ಕೆ ಬಿಡುತ್ತಿದ್ದಂತೆ ನಾಲ್ವರೂ ಅಖಾಡದಲ್ಲಿ ಸೆಣಸಾಡಿದರು. ಪುರುಷೋತ್ತಮ ಜಟ್ಟಿಯ ಆಕ್ರಮಣಕ್ಕೆ ರಾಘವೇಂದ್ರಜಟ್ಟಿಯ ತಲೆಯಿಂದ ರಕ್ತ ಚಿಮ್ಮುತ್ತಿದ್ದಂತೆ ಕಾಳಗವನ್ನು ಅಂತ್ಯಗೊಳಿಸಲಾಯಿತು.
ಈ ವೇಳೆ ವಿಜಯಯಾತ್ರೆಗೆ ಹೊರಟ ಯದುವೀರ್ ಅವರಿಗೆ ಶಿರಬಾಗಿ ನಮಿಸಿದ ಜಟ್ಟಿಗಳಿಗೆ ಫಲ-ತಾಂಬೂಲ ಹಾಗೂ ಗೌರವ ಧನ ನೀಡಿ ಸತ್ಕರಿಸಲಾಯಿತು. ವಿಜಯದಶಮಿಯ ದಿನ ನಡೆಯುವ ವಜ್ರಮುಷ್ಠಿ ಕಾಳಗವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು,
ಆದರೆ, ಈ ವರ್ಷ ರಾಜಮನೆತನದ ಇಬ್ಬರ ಸಾವಿನ ಹಿನ್ನೆಲೆಯಲ್ಲಿ ಬೇರೆ ದಿನ ನಡೆಸಿದ್ದರಿಂದ ಜಟ್ಟಿಗಳ ಕುಟುಂಬದವರು, ನೆಂಟರು ಹಾಜರಿದ್ದು ಕಾಳಗವನ್ನು ಕಣ್ತುಂಬಿಕೊಂಡರು. ಪ್ರತಿವರ್ಷ ಜಟ್ಟಿ ಕಾಳಗ ನಡೆಯುವಾಗ ಪ್ರಮೋದಾದೇವಿ ಒಡೆಯರ್ ಸೇರಿದಂತೆ ರಾಜವಂಶಸ್ಥರು ಕಲ್ಯಾಣಮಂಟಪದ ಮಾಳಿಗೆಯಲ್ಲಿ ನಿಂತು ಕಾಳಗ ವೀಕ್ಷಿಸುತ್ತಿದ್ದರು. ಆದರೆ, ಈ ಬಾರಿ ಅವರು ವೀಕ್ಷಣೆಯಿಂದ ದೂರ ಉಳಿದರು.