Advertisement

ನಾಡಧ್ವಜ ಅಂಗೀಕಾರಕ್ಕೆ ಸಂಭ್ರಮ

04:37 PM Mar 10, 2018 | Team Udayavani |

ಹಾಸನ: ರಾಜ್ಯಕ್ಕೆ ಅಧಿಕೃತ ನಾಡಧ್ವಜವನ್ನು ವಿನ್ಯಾಸಗೊಳಿಸಿರುವ ಸರ್ಕಾರದ ಕ್ರಮದ ಬಗ್ಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರಮುಖರು ಸ್ವಾಗತಿಸಿದ್ದು, ಕೇಂದ್ರ ಸರ್ಕಾರದ ಅಂಗೀಕರ ಪಡೆಯಲೂ ತ್ವರಿತ
ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದ್ದಾರೆ.

Advertisement

ರಾಜ್ಯದಲ್ಲಿ ಕುಂಕುಮ ಹಾಗೂ ಹಳದಿ ಬಣ್ಣದ ಧ್ವಜವನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿತ್ತು. ಆದರೆ ಅದಕ್ಕೆ ಯಾವುದೇ ಅಧಿಕೃತ ಮಾನ್ಯತೆ ಇರಲಿಲ್ಲ. ರಾಜ್ಯಕ್ಕೆ ಅಧಿಕೃತ ನಾಡಧ್ವಜದ ಅಗತ್ಯದ ಬಗ್ಗೆ ಹಲವಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಒತ್ತಾಯಗಳು ಕೇಳಿ ಬರುತ್ತಿದ್ದವು. ಆದರೆ ಸರ್ಕಾರ ಸ್ಪಂದಿಸಿರಲಿಲ್ಲ. ಆದರೆ ಈಗ ಹಳದಿ, ಬಿಳಿ, ಕೆಂಪು ಬಣ್ಣದ ಧ್ವಜದ ಮಧ್ಯದಲ್ಲಿ ಸರ್ಕಾರದ ಲಾಂಛನವನ್ನೂ ಅಳವಡಿ ಸಿರುವ ನಾಡಧ್ವಜವನ್ನು ಅಂತಿಮಗೊಳಿಸಿರುವ ಬಗ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾರಸ್ವತ ಲೋಕದಲ್ಲಂತೂ ಸಂಭ್ರಮ ವ್ಯಕ್ತವಾಗಿದೆ.

ಅರ್ಥಪೂರ್ಣವಾಗಿದೆ: ನಾಟಕಕಾರ, ಹಿರಿಯ ಸಾಹಿತಿ ಬೇಲೂರು ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಪ್ರತ್ಯೇಕ ನಾಡಧ್ವಜ
ಬೇಕೆಂಬುದು ಕನ್ನಡಿಗರ ಬಹುದಿನ ಬೇಡಿಕೆಯಾಗಿತ್ತು. ವಿಳಂಬವಾದರೂ ಸರ್ಕಾರ ಸ್ಪಂದಿಸಿದೆ. ಇದು ಸ್ವಾಗತಾರ್ಹ
ಕ್ರಮ. ತ್ರಿವರ್ಣದ ಧ್ವಜದ ವಿನ್ಯಾಸವೂ ಚೆನ್ನಾಗಿದೆ ಹಾಗೂ ಅರ್ಥಪೂರ್ಣವೂ ಆಗಿದೆ. ವಿಶೇಷವಾಗಿ ಸರ್ಕಾರದ
ಲಾಂಛನವೂ ಒಳಗೊಂಡಿರುವುದರಿಂದ ರಾಷ್ಟ್ರ ಧ್ವಜದ ಮಾದರಿ ಯಲ್ಲಿಯೇ ನಾಡಧಜವೂ ರೂಪು ಗೊಂಡಿ
ರುವುದು ಸಂತೋಷ ತಂದಿದೆ ಎಂದರು.

ನಾಡಿನ ಸಂಸ್ಕೃತಿಯ ಪ್ರತೀಕ: ವಕೀಲರೂ ಆದ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಜ.ಹೊ.ನಾರಾಯಣಸ್ವಾಮಿ
ಅವರು, ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭದ ದೃಷ್ಟಿಯಿಂದ ಸರ್ಕಾರ ನಾಡಧ್ವಜ ರೂಪಿಸಿ ಅದರ ಅಂಗೀಕಾರಕ್ಕೆ ಮುಂದಾಗಿರಬಹುದು. ನಾಡು, ನುಡಿಯ ಸಂಬಂಧದ ಕೆಲಸಗಳು ಯಾವ ಸಂದರ್ಭದಲ್ಲಾದರೂ ಸ್ವಾಗತ. ಜಮ್ಮು – ಕಾಶ್ಮೀರ ಮಾತ್ರ ದೇಶದಲ್ಲಿ ಪ್ರತ್ಯೇಕ ಧ್ವಜ ಹೊಂದಿತ್ತು. ಈಗ ಕರ್ನಾಟಕ ಅಧಿಕೃತವಾಗಿ ನಾಡಧ್ವಜ ಹೊಂದುವ ದೇಶದ 2ನೇ ರಾಜ್ಯವಾಗಲಿದೆ. ನಾಡಿನ ಸಂಸ್ಕೃತಿಯ ಪ್ರತೀಕವಾಗಿ ಪ್ರತ್ಯೇಕ ಧ್ವಜ ಹೊಂದುವ ಅಗತ್ಯವಿತ್ತು. ಆ ನಿಟ್ಟಿನಲ್ಲಿ ಈಗ ಚಾಲನೆ ಸಿಕ್ಕಿದೆ ಎಂದರು.

ಅಭಿಮಾನದ ಸಂಕೇತ: ಲೇಖಕಿ ಎನ್‌. ಶೈಲಜಾ ಹಾಸನ ಅವರು, ಪ್ರತಿಯಿಸಿ, ಪತ್ಯೇಕ ಧ್ವಜ ಹೊಂದುವುದು ರಾಷ್ಟ್ರದ ಅಖಂಡತೆಗೆ, ಪ್ರತ್ಯೇಕತೆ ಧಕ್ಕೆ ಆಗಬಹುದೆಂಬ ಆತಂಕವಿದೆ. ಆದರೆ ನಾಡು, ನುಡಿ, ಸಂಸ್ಕೃತಿಯ ಅಭಿಮಾನ ಮೂಡಿಸಲು ಪೂರಕವಾಗಿ ನಾಡಧ್ವಜ ರೂಪಿಸಿರುವುದು ಸ್ವಾಗತಾರ್ಹ. ಕನ್ನಡಿಗರ ಒಗ್ಗಟ್ಟು, ಕರ್ನಾಟಕದ ಅಸ್ಮಿತೆಗೆ
ಅಧಿಕೃತ ನಾಡಧ್ವಜ ಬಳಕೆ ಮಾಡಲು ಮುಂದಾಗಿರುವ ಕ್ರಮ ಸ್ವಾಗತಾರ್ಹ. ಇದು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆ ಎಂದು ಅಭಿಪ್ರಾಯಪಟ್ಟರು. 

Advertisement

ಒಗ್ಗಟ್ಟಿನ ಸಂಕೇತವಾಗಿದೆ : ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ಬೇಕೆಂಬುದು ಕನ್ನಡಿಗರ ಬಹಳ ದಿನಗಳ ಹೋರಾಟವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನೇ ಅಧಿಕೃತ ನಾಡಧ್ವಜ ಎಂದು ಈಗಾಗಲೇ ಬಳಸುತ್ತಿತ್ತು. ಈಗ ಬಿಳಿಯ ಬಣ್ಣವೂ ಸೇರಿ ಸರ್ಕಾರದ ಲಾಂಛನವೂ ಒಳ ಗೊಂಡಿರುವುದರಿಂದ ಅಧಿಕೃತ ಧ್ವಜ, ರಾಷ್ಟ್ರಧ್ವಜದಷ್ಟೆ ಗೌರವದ ನಾಡಧ್ವಜವಾಗುತ್ತಿರುವುದು ಕನ್ನಡಿಗರಿಗೆ ಸಂತೋಷ ತಂದಿದೆ. ವಿನ್ಯಾಸಗೊಳಿಸಿ, ಕೇಂದ್ರ ಸರ್ಕಾರಕ್ಕೆ ಅಂಗೀಕಾರಕ್ಕಾಗಿ ಕಳುಹಿಸಿ ಸರ್ಕಾರ ಕೈ ತೊಳೆದುಕೊಳ್ಳಬಾರದು. 

ಅಂಗೀಕಾರವಾಗುವರೆಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಸನ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್‌ ಒತ್ತಾಯಿಸಿದರು. ಶಾಸ್ತ್ರೀಯ ಸ್ಥಾನಕ್ಕೆ ಪೂರಕ ಹಲವು ವರ್ಷಗಳ ಹೋರಾಟದ ನಂತರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಈಗ ರಾಜ್ಯ ಸರ್ಕಾರ ನಾಡಧ್ವಜವನ್ನೂ ವಿನ್ಯಾಸಗೊಳಿಸಿರುವುದು ಸಂತಸದ ವಿಚಾರ. ಕೇಂದ್ರ ಸರ್ಕಾರ ಅಂಗೀಕರಿಸಿದರೆ ಕನ್ನಡಕ್ಕೆ ಸಿಕ್ಕಿರುವ ಶಾಸ್ತ್ರೀಯ ಸ್ಥಾನಮಾನಕ್ಕೆ ನಾಡಧ್ವಜವೂ ಪೂರಕವಾಗಿ ರಾಷ್ಟ್ರದಲ್ಲಿ ನಾಡಿನ ಅಸ್ಮಿತೆಗೆ ಗರಿ ಮೂಡಿದಂತಾಗುತ್ತದೆ ಎಂಬುದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಉದಯರವಿ ಅಭಿಪ್ರಾಯ 

ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next