ಬೆಂಗಳೂರು: ಅಬಕಾರಿ ಸುಂಕ ಹಾಗೂ ಜಿಎಸ್‌ಟಿಯಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳ ಬಗ್ಗೆ ವಾಣಿಜ್ಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರಿಸಿರುವುದು ಶ್ಲಾಘನೀಯ ಎಂದು ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಎ.ಕೋರೆ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಿಂದ ಶನಿವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವ್ಯಾಪಾರ ತೆರಿಗೆ, ಅಬಕಾರಿ ಸುಂಕ ಹಾಗೂ ಜಿಎಸ್‌ಟಿ ವಿಷಯಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಹೊಂದಿರುವ ಹಾಗೂ ಅಭಿವೃದ್ಧಿಯತ್ತ ಸಾಗಿರುವ ಬಹುತೇಕ ದೇಶಗಳಲ್ಲಿ ಈಗಾಗಲೇ ಜಿಎಸ್‌ಟಿಯಂತಹ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಈಗ ಭಾರತದಲ್ಲಿಯೂ ಜಿಎಸ್‌ಟಿ ಜಾರಿಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ತಿಳಿಸಬೇಕಾಗಿದೆ ಎಂದು ತಿಳಿಸಿದರು.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಜಿಎಸ್‌ಟಿ ಪ್ರಮುಖ ಪಾತ್ರವಹಿಸಲಿದ್ದು, ಜಿಎಸ್‌ಟಿಯ ಜಾರಿಯಿಂದ ಒಂದು ವರ್ಷದಲ್ಲಿ ಆದ ಬದಲಾವಣೆಗಳ ಕುರಿತು ಕೇಂದ್ರ ಸರ್ಕಾರ ನೀಡುವ ಮಾಹಿತಿಯಿಂದ ತಿಳಿಯಲಿದೆ. ಜಿಎಸ್‌ಟಿ ಜಾರಿ ಬಳಿಕವೂ ಹಲವಾರು ಮಾರ್ಪಡುಗಳನ್ನು ಸರ್ಕಾರ ಮಾಡಿದ್ದು, ಅವುಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
ವಿವಿಯ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಆರ್.ಸರ್ವಮಂಗಳಾ ಮಾತನಾಡಿ, ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗಿದೆ.
ಅದೇ ರೀತಿ ಜಿಎಸ್‌ಟಿ ಹಾಗೂ ವಾಣಿಜ್ಯ ತೆರಿಗೆಯಲ್ಲಿನ ಬದಲಾವಣೆಗಳಿಗೆ ತಕ್ಕಂತೆ ವಿವಿಯು ಪಠ್ಯ ಪರಿಷ್ಕರಣೆ ಮಾಡುತ್ತಿದ್ದು, ಶಿಕ್ಷಕರಿಗೂ ಪುನರ್ ಮನನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ.ರವಿ, ಉಪ ಆಯುಕ್ತ ಡಿ.ಪಿ.ಪ್ರಕಾಶ್, ಮುರಳೀಕೃಷ್ಣ, ಅನೀಶ್ ಅವರು ಜಿಎಸ್‌ಟಿ ಹಾಗೂ ಅಬಕಾರಿ ಸುಂಕಕ್ಕೆ ಸಂಬಂಧಿಸಿದ ವಿಷಯಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಸಚಿವ ಡಾ.ರಾಮಚಂದ್ರಗೌಡ, ವಿಭಾಗದ ಮುಖ್ಯಸ್ಥ ಡಾ.ಎಂ.ಮುನಿರಾಜು ಸೇರಿದಂತೆ ಪ್ರಮುಖರು ಹಾಜರಿದ್ದರು.