ಬೇಸಿಗೆಯ ಬಿಸಿಲ ಬೇಗೆ, ಸುಡು ಬಿಸಿಲು, ಬೇಸಿಗೆ ಬಂತೆಂದರೆ ಮೈಮೇಲೆ ಏಳುವ ಬೆವರುಸಾಲೆಯ ಕಿರಿಕಿರಿ. ಇದಕ್ಕೆ ವಯಸ್ಸಿನ ಹಂಗಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರನ್ನೂ ಕಾಡುತ್ತದೆ. ಅತಿಯಾಗಿ ಬೆವರುವವರಲ್ಲಿ ಇದರ ಕಾಟ ಜಾಸ್ತಿ. ಬೆನ್ನು, ಕುತ್ತಿಗೆ, ಎದೆ, ಭುಜ, ತೊಡೆಚರ್ಮ ಮಡಚುವ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅತಿ ಸೆಕೆ ಮಾತ್ರವಲ್ಲ, ವಿಪರೀತ ಕೆಲಸದ ಒತ್ತಡ, ಅನಾರೋಗ್ಯಕರ ಜೀವನ ಶೈಲಿ, ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು, ಮದ್ಯಪಾನ, ಧೂಮಪಾನದಿಂದಲೂ ಬೆವರುಸಾಲೆ ಏಳುತ್ತದೆ. ತಣ್ಣನೆಯ ನೀರಿನ ಸ್ನಾನ ಇದಕ್ಕೆ ಉತ್ತಮ ಪರಿಹಾರ. ದೇಹವನ್ನು ತಂಪಾಗಿಡುವುದು ಕೂಡ ಅತಿ ಮುಖ್ಯ.
ಬೆವರುಸಾಲೆ ನಿವಾರಿಸಲು ಕೆಲ ಮನೆಮದ್ದು
ಬೇವಿನೆಲೆ ಹಾಕಿ ಕುದಿಸಿದ ನೀರನ್ನು ಸ್ನಾನ್ನಕ್ಕೆ ಬಳಸಿ. ಇಲ್ಲ ಬೇವಿನೆಲೆ ನೀರು ಬೆರೆಸಿ ರುಬ್ಬಿ ಪೇಸ್ಟ್ ತಯಾರಿಸಿ ಬೆವರುಸಾಲೆ ಮೇಲೆ ಹಚ್ಚಿ ಅರ್ಧ ಗಂಟೆ ನಂತರ ತಣ್ಣೀರ ಸ್ನಾನ ಮಾಡಿ. ಅತಿಯಾದ ಬೆವರುಸಾಲೆಯಿಂದ ಅವು ಸೋಂಕಿಗೆ ಪರಿವರ್ತನೆಯಾಗುವುದನ್ನು ತಡೆಯುತ್ತದೆ. ಬೆವರುಸಾಲೆ ಇರುವಾಗ ಸ್ನಾನಕ್ಕೆ ಸೋಪ್ ಬಳಸಬೇಡಿ. ಲೋಳೆಸರ ಜೆಲ್ ಅಥವಾ ಲೋಳೆಸರ ತಿರುಳನ್ನು ಬೆವರುಸಾಲೆ ಮೇಲೆ ಹಚ್ಚಿದರೆ ತಂಪನೆಯ ಅನುಭವವಾಗಿ ತುರಿಕೆ ಕಡಿಮೆಯಾಗುತ್ತದೆ. ಬೇಗ ವಾಸಿಯಾಗುತ್ತದೆ. ಬೆವರುಸಾಲೆ ಮೇಲೆ ಐಸ್‌ಕ್ಯೂಬ್ ಅನ್ನು ನಿಧಾನವಾಗಿ ಸವರಿ.
ಅತಿಯಾದ ಬೆವರುಸಾಲೆ ಇದ್ದರೆ ಒಂದು ಕಪ್ ತಣ್ಣನೆಯ ನೀರಿಗೆ ಒಂದು ಚಮಚ ಬೇಕಿಂಗ್ ಪೌಡರ್ ಬೆರೆಸಿ. ಇದಕ್ಕೆ ಬಟ್ಟೆಯನ್ನು ಅದ್ದಿ ಸ್ವಲ್ಪ ಹಿಂಡಿ ಬೆವರುಸಾಲೆ ಮೇಲೆ ಹೊದೆಯಿರಿ. ತುರಿಕೆ ಇಲ್ಲವಾಗಿಸುತ್ತದೆ. ದಿನಕ್ಕೆ 5-6 ಬಾರಿ ಹೀಗೆ ಮಾಡಿ. ಕೊತ್ತಂಬರಿಬೀಜದ ಪುಡಿ-ಅರಸಿನವನ್ನು ಕಲಸಿ ರೋಸ್‌ವಾಟರ್ ಬೆರೆಸಿ ಬೆವರುಸಾಲೆ ಮೇಲೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ಶ್ರೀಗಂಧದ ಪುಡಿಗೆ ರೋಸ್‌ವಾಟರ್ ಬೆರೆಸಿದ ಪೇಸ್ಟ್‌ನ್ನು ಬೆವರುಸಾಲೆಯಾದ ಭಾಗಗಳಿಗೆ ಲೇಪಿಸಿ. ಅಕ್ಕಿ ತೊಳೆದ ನೀರನ್ನು ಬೆವರುಸಾಲೆಗೆ ಬಳಸಬಹುದಾಗಿದೆ.
10 ಗ್ರಾಂ ಶ್ರೀಗಂಧದ ಹುಡಿ ಮತ್ತು 5 ಗ್ರಾಂ ರುಬ್ಬಿದ ಗಸಗಸೆ ಮತ್ತು ರೋಸ್‌ವಾಟರ್ ಬೆರೆಸಿ ಮಿಶ್ರಣ ತಯಾರಿಸಿ ಬೆವರುಸಾಲೆಗೆ ಲೇಪಿಸಿ. ಒಣಗಿದ ನಂತರ ಸ್ನಾನ ಮಾಡಿ. ಜೀರಿಗೆ ಪುಡಿ ಮತ್ತು ಕೊಬ್ಬರಿಎಣ್ಣೆ ಬೆರೆಸಿ ದಪ್ಪಗಾದ ಪಾಕದಂತೆ ಮಾಡಿ ಬೆವರುಸಾಲೆಯ ಮೇಲೆ ಲೇಪಿಸಿ. ಅರ್ಧ ಗಂಟೆ ನಂತರ ಸ್ನಾನ ಮಾಡಿ. ಕಲ್ಲಂಗಡಿ ಅಥವಾ ಸೌತೆಕಾಯಿ ತುಂಡನ್ನು ಬೆವರುಸಾಲೆ ಮೇಲೆ ಸವರಿಕೊಳ್ಳಿ. ಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ನೆನೆಸಿಡಿ. ಅದು ಕರಗಿದ ನಂತರ ಬೆವರುಸಾಲೆ ಮೇಲೆ ಹಚ್ಚಿ. ಜೇನುತುಪ್ಪ ಸಹ ಬೆವರುಸಾಲೆಗೆ ಹಚ್ಚಬಹುದು. ಇದಕ್ಕೆ ಬೇಗ ವಾಸಿ ಮಾಡುವ ಗುಣವಿದೆ. ಕೇವಲ ಹಚ್ಚಿದರೆ ಸಾಲದು. ದೇಹದ ಒಳಗೂ ತಂಪಾಗಿಡಬೇಕು. ಸಿಹಿ ಲಸ್ಸಿ , ಒಂದು ಚಮಚ ಸಕ್ಕರೆ ಹಾಕಿದ ಮೊಸರು, ನಿಂಬೆ ಜ್ಯೂಸ್ ದಿನಕ್ಕೆರಡು ಬಾರಿ ಸೇವಿಸಿ ಬೆವರುಸಾಲೆಯಿಂದ ಮುಕ್ತಿ ಪಡೆಯಿರಿ. ಸ್ನಾನದ ನಂತರ ಬೆವರುಸಾಲೆ ನಿರೋಧಕ ಪೌಡರನ್ನು ಬಳಸಬಹುದು.