Advertisement

ವೈದ್ಯ ವೃತ್ತಿಯಲ್ಲಿ ಅತಿಯಾದ ವ್ಯಾಪಾರಿ ಮನೋಭಾವ; ಜಗದ್ಗುರು ಶಿವಾನಂದ ಸ್ವಾಮಿ

05:57 PM Dec 08, 2021 | Team Udayavani |

ಬೆಳಗಾವಿ: ಪರಮ ಪವಿತ್ರವಾದ ವೈದ್ಯ ವೃತ್ತಿಯಲ್ಲಿ ಅತಿಯಾದ ವ್ಯಾಪಾರಿ ಮನೋಭಾವ ಕಂಡು ಬರುತ್ತದೆ. ಅಲ್ಲಿ ನಿಷ್ಕಲ್ಮಶವಾದ ಸೇವೆ ಕಡಿಮೆಯಾಗುತ್ತಿದೆ ಎಂದು ಗದುಗಿನ ಶಿವಾನಂದ ಮಠದ ಜಗದ್ಗುರು ಶಿವಾನಂದ ಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು . ನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ಲಿಂ| ಡಾ| ಶಿವಬಸವ ಸ್ವಾಮೀಜಿಯವರ 132 ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

Advertisement

ವೈದ್ಯಕೀಯ ವೃತ್ತಿ ಸಂಪೂರ್ಣ ವ್ಯಾಪಾರವಾಗಿದೆ. ಆರೋಗ್ಯ ಎನ್ನುವುದು ಮಾರಾಟದ ವಸ್ತುವಾಗಿದೆ. ಆರೋಗ್ಯ ಕ್ಷೇತ್ರ ಹಾಳಾಗಿ ಹೋಗಿದೆ. ಅಲ್ಲಿ ನ್ಯಾಯ-ನೀತಿಗಳು ಉಳಿದಿಲ್ಲ. ಇದು ಅತ್ಯಂತ ಕೆಟ್ಟ ಬೆಳವಣಿಗೆ ಎಂದರು.

ಈ ಹಿಂದೆ ವೈದ್ಯರಾದವರು ರೋಗಿಗಳ ಸೇವೆಯನ್ನು ದೇವರ ಸೇವೆಯೆಂದೇ ಮಾಡುತ್ತಿದ್ದರು. ಅವರು ನೀಡುವ ಚಿಕಿತ್ಸೆಗೆ ಹಣ ಪಡೆಯುತ್ತಿರಲಿಲ್ಲ. ಬದಲಾಗಿ ಚಿಕಿತ್ಸೆ ಪಡೆದವರು ಅವರಿಗೆ ಕಾಳು-ಕಡಿ ಮತ್ತಿತರೆ ವಸ್ತುಗಳನ್ನು ನೀಡುತ್ತಿದ್ದರು. ಆದರೀಗ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ವೈದ್ಯಕೀಯ ವೃತ್ತಿಗೆ ಅಧ್ಯಾತ್ಮದ ಸ್ಪರ್ಶ ನೀಡುವ ಅಗತ್ಯವಿದೆ ಎಂದರು.

ನಾಗನೂರು ರುದ್ರಾಕ್ಷಿಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಮಾವೇಶ ಸಂದರ್ಭ ಅತ್ಯಂತ ಸಂತಸದ ವಿಷಯ. ನಾಗನೂರು ರುದ್ರಾಕ್ಷಿಮಠವೆಂಬ ಮಹಾವೃಕ್ಷದ ಬುಡದಲ್ಲಿ ಬೆಳೆದವರು ಈ ವೃಕ್ಷವನ್ನು ಮರೆಯಬಾರದು. ಅದನ್ನು ನೋಡುವುದಕ್ಕಾದರೂ ವರ್ಷಕ್ಕೊಮ್ಮೆ ಬರಬೇಕು. ವೃಕ್ಷದ ಅಂಗಳ ಕಾಣಲು ಬರಬೇಕು. ಹಳೆಯ ಮಿತ್ರರನ್ನು ಕಣ್ತುಂಬಿಸಿಕೊಳ್ಳಲು ಬರಬೇಕು ಎಂದರು.

ನೇತೃತ್ವ ವಹಿಸಿದ್ದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ವೈದ್ಯರಾದವರು ಅಧ್ಯಾತ್ಮ ಚಿಂತನೆಯ ಜತೆಗೆ ರೋಗಿಗಳನ್ನು ಉಪಚರಿಸುವ ಮನಸ್ಥಿತಿ ಹೊಂದಿದಾಗ ಮಾತ್ರ ಅವರಿಂದ ಅತ್ಯುತ್ತಮ ಸೇವೆ ಸಮಾಜಕ್ಕೆ ಸಾಧ್ಯ ಎಂದರು. ಬೆಳಗಾವಿ ರುದ್ರಾಕ್ಷಿಮಠದ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪೊ|ಎಂ.ಆರ್‌. ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ರುದ್ರಾಕ್ಷಿಮಠದ ಪೀಠಾಧಿಪತಿ ಡಾ| ಅಲ್ಲಮಪ್ರಭು ಸ್ವಾಮಿಗಳು, ಅಥಣಿಯ ಪ್ರಭು ಚನ್ನಬಸವ ಶ್ರೀಗಳು ಇದ್ದರು. ಮಹಾಂತದೇವರು, ಪ್ರೊ| ಸಿ.ಜಿ. ಮಠಪತಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next