ವೆನಿಸ್: ಜಾಗತಿಕ ತಾಪಮಾನದ ಹಿನ್ನೆಲೆ ಸಮುದ್ರದ ನೀರಿನ ಮಟ್ಟ ಏರಿಕೆಯಾದ್ದರಿಂದ ಪ್ರವಾಹಕ್ಕೆ ತುತ್ತಾಗಿರುವ ವೆನಿಸ್ ನಗರ ಶೇ. 70ರಷ್ಟು ಮುಳುಗಡೆಯಾಗಿದೆ. ಜತೆಗೆ, ನಗರದ ಪಾರಂಪರಿಕ ಹಾಗೂ ಬೆಲೆಕಟ್ಟಲಾಗದ ಕಲಾತ್ಮಕ ಕಟ್ಟಡಗಳು ನೆಲಸಮಗೊಳ್ಳುವ ಆತಂಕವೂ ಆವರಿಸಿದೆ.
1966ರಲ್ಲೊಮ್ಮೆ ಈ ನಗರದಲ್ಲಿ ಇದೇ ರೀತಿ ಆಗಿ ಎಲ್ಲೆಲ್ಲೂ 6 ಅಡಿ 4 ಅಂಗುಲದಷ್ಟು ನೀರು ಆವರಿಸಿತ್ತು. ಆದರೆ, ಸರಕಾರಗಳು ಎಚ್ಚರಗೊಳ್ಳಲಿಲ್ಲ. ಹಾಗಾಗಿ, 50 ವರ್ಷದ ಅನಂತರ ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದೆ.
ಇಡೀ ನಗರ, ಇಟಲಿಯ ಅದ್ಭುತ ಚಿತ್ರಕಾರರಾದ ಟಿಂಟೊರೆಟೊ, ಜಾರ್ಜಿನ್, ಟೈಟನ್ ಹಾಗೂ ಇನ್ನಿತರ ಕಲಾವಿದರ ಬೆಲೆ ಕಟ್ಟಲಾಗದ ಅಸಂಖ್ಯ ಕಲಾಕೃತಿಗಳನ್ನು ಹೊಂದಿರುವ ವಸ್ತು ಸಂಗ್ರಹಾಲಯಗಳಿಂದ ತುಂಬಿದೆ.
ಅಲ್ಲದೆ, ವಿಶೇಷ ಜಾತಿಯ ಬೆಕ್ಕುಗಳು, ಶತಮಾನಗಳಷ್ಟು ಹಳೆಯ ಕಲಾತ್ಮಕ ಕಟ್ಟಡಗಳು, ಕಣ್ಮನ ಸೆಳೆಯುವ ವಾಸ್ತು ಶಿಲ್ಪಗಳಿಂದಾಗಿ ವೆನಿಸ್‌ಗೆ, 1987ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆ ದಕ್ಕಿದೆ.
ಇಷ್ಟೆಲ್ಲಾ ವಿಶೇಷತೆಗಳಿರುವ ಈ ನಗರ ಇಂದು ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮಕ್ಕೆ ಸೂಕ್ತ ಉದಾಹರಣೆಯಾಗಿ ನಿಂತಿರುವುದು ಬೇಸರದ ಸಂಗತಿ ಎಂದು ತಜ್ಞರು ವಿಷಾದಿಸಿದ್ದಾರೆ.