Advertisement

ಒಂದೆಡೆಪರೀಕ್ಷೆ ;ಇನ್ನೊಂದೆಡೆ ಚುನಾವಣೆ:ಕೋಸ್ಟಲ್‌ವುಡ್‌ನ‌ಲ್ಲಿಗಲಿಬಿಲಿ

04:21 PM Mar 01, 2018 | |

ಕೋಸ್ಟಲ್‌ವುಡ್‌ ಅಂಗಳದಲ್ಲಿ ಒಂದೊಂದೇ ಸಿನೆಮಾಗಳು ರೆಡಿಯಾಗುತ್ತಿದೆ. ಶೂಟಿಂಗ್‌ ಕಾಣುತ್ತಿದೆ. ಕರಾವಳಿಯ ಬೇರೆ ಬೇರೆ ಕಡೆಗಳಲ್ಲಿ ತುಳು ಸಿನೆಮಾ ಚಿತ್ರೀಕರಣವೂ ನಡೆಯುತ್ತಿದೆ. ಕೆಲವು ಸಿನೆಮಾಗಳಂತೂ ಈಗಾಗಲೇ ರೆಡಿಯಾಗಿ ಬಿಡುಗಡೆಯ ಹೊಸ್ತಿಲಲ್ಲಿದೆ. ಇಷ್ಟಿದ್ದರೂ ಸದ್ಯ ಯಾವುದೇ ತುಳು ಚಿತ್ರಗಳು ಥಿಯೇಟರ್‌ನಲ್ಲಿ ಕಾಣುತ್ತಿಲ್ಲ. ಯಾಕೆ ಈ ತರ ಎಂಬುದು ಈಗಿನ ಪ್ರಶ್ನೆ.

Advertisement

ಕಳೆದ ಜನವರಿಯಿಂದ ಯಾವುದೇ ಸಿನೆಮಾ ಬಿಡುಗಡೆಯಾಗದಿದ್ದ ಕಾಲದಲ್ಲಿ ‘ಬಲೇ ಪುದರ್‌ ದೀಕ ಈ ಪ್ರೀತಿಗ್‌’ ಸಿನೆಮಾ ರಿಲೀಸ್‌ ಆಗುವ ಮೂಲಕ ಕೋಸ್ಟಲ್‌ವುಡ್‌ ಎಚ್ಚರದಲ್ಲಿದೆ ಎಂದು ನೆನಪು ಮಾಡಲಾಗಿತ್ತು. ಆದರೆ, ಹೆಚ್ಚು ದಿನ ಈ ಸಿನೆಮಾ ನಿಲ್ಲಲು ಆಗಲಿಲ್ಲ. ಹೀಗಾಗಿ ಸದ್ಯ ಯಾವ ಸಿನೆಮಾವೂ ಥಿಯೇಟರ್‌ನಲ್ಲಿಲ್ಲ. ಹಾಗಾದರೆ, ಕೆಲವೇ ದಿನದಲ್ಲಿ ಹೊಸ ಸಿನೆಮಾ ರಿಲೀಸ್‌ ಆಗಬಹುದು ಎಂದು ನೀವು ನಂಬಿದರೆ, ಅದೂ ಕೂಡ ಸುಳ್ಳಾಗಬಹುದು. ಯಾಕೆಂದರೆ, ಕೆಲವೇ ದಿನಗಳಲ್ಲಿ ಎದುರಾಗುವ ಪಿಯುಸಿ ಹಾಗೂ ಎಸೆಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಹೊಸ ತುಳು ಚಿತ್ರಗಳನ್ನು ರಿಲೀಸ್‌ ಮಾಡಲು ಚಿತ್ರ ನಿರ್ಮಾಪಕರು ಹಿಂದೇಟು ಹಾಕುವ ಸಾಧ್ಯತೆ ಇದೆ.

ಎರಡೂ ಪರೀಕ್ಷೆ ಮುಗೀಯಿತು ಎನ್ನುವಷ್ಟರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಮತ್ತೆ ಸಿನೆಮಾ ರಿಲೀಸ್‌ ದಿನಾಂಕ ಮುಂದೆ ಹೋಗುವುದು ಬಹುತೇಕ ಪಕ್ಕಾ ಆದಂತಾಗಿದೆ. ಹೀಗಾಗಿ ಅತ್ತ ಪರೀಕ್ಷೆ- ಇತ್ತ ಚುನಾವಣೆಯ ಗುಮ್ಮದಿಂದಾಗಿ ತುಳು ಸಿನೆಮಾಗಳು ಥಿಯೇಟರ್‌ಗೆ ಬರಲು ಹೆದರುವಂತಾಗಿದೆ.

ಪರೀಕ್ಷೆ ಸಮಯದಲ್ಲಿ ಮಕ್ಕಳು ಓದು- ಬರಹದಲ್ಲಿಯೇ ಬ್ಯುಸಿಯಾಗಿರುತ್ತಾರೆ. ಹೀಗಾಗಿ ಮನೆಯವರು ಕೂಡ ಮಕ್ಕಳ ಪರೀಕ್ಷೆಯಲ್ಲಿಯೇ ತೊಡಗಿಸಿಕೊಂಡಿರುತ್ತಾರೆ. ಈ ಕಾಲದಲ್ಲಿ ಸಿನೆಮಾ ರಿಲೀಸ್‌ ಮಾಡಿದರೆ, ಸಿನೆಮಾ ನೋಡುವವರು ಇಲ್ಲದೆ ಸಮಸ್ಯೆ ಎದುರಿಸಬೇಕು ಎಂಬುದು ಚಿತ್ರ ತಂಡದ ಆಲೋಚನೆ.

ಪ್ರತೀ ವರ್ಷ ಈ ಸಮಯದಲ್ಲಿ ಪರೀಕ್ಷೆಗಳ ಸವಾಲು ಇತರ ಚಿತ್ರಗಳಂತೆ ತುಳು ಚಿತ್ರಗಳಿಗೂ ಇದೆ. ಆದರೆ, ಈ ವರ್ಷ ಎದುರಾದ ಚುನಾವಣೆಯ ಕಾರಣದಿಂದ ಮತ್ತೆ ಚಿತ್ರತಂಡ ಸ್ವಲ್ಪ ಹಿಂದೇಟು ಹಾಕಿದಂತಿದೆ. ಚುನಾವಣೆಯ ಬ್ಯುಸಿ, ಕಾರ್ಯಕರ್ತರ ಓಡಾಟದಿಂದಾಗಿ ಥಿಯೇಟರ್‌ಗೆ ಬರುವವರು ಕಡಿಮೆ ಇರುತ್ತಾರೆ ಎಂಬ ಲೆಕ್ಕಾಚಾರದಿಂದ ಫಿಲ್ಮ್ ರಿಲೀಸ್‌ಗೆ ಕೊಂಚ ದಿನ ಮುಂದೂಡಲು ನಿರ್ಧರಿಸುತ್ತಾರೆ. ಹೀಗಾಗಿ ಈಗಾಗಲೇ ರೆಡಿಯಲ್ಲಿರುವ ಸಿನೆಮಾದವರು ಕೂಡ ಒಂದೆರಡು ತಿಂಗಳು ಕಳೆಯಲಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲಿಗೆ ತುಳುಚಿತ್ರ ಒಂದೆರಡು ತಿಂಗಳು ಸ್ತಬ್ಧವಾಗುವುದು ಬಹುತೇಕ ನಿಚ್ಚಳವಾಗಿದೆ.

Advertisement

ಈ ಮಧ್ಯೆ ಒಂದೆರಡು ತಿಂಗಳಲ್ಲಿ ರಿಲೀಸ್‌ ಆಗಲಿರುವ ಸಿನೆಮಾ ಹಾಗೂ ಆ ಸಮಯದಲ್ಲಿ ಸಿದ್ಧವಾಗುವ ಸಿನೆಮಾ ಒಟ್ಟು ಸೇರಿ ಕೆಲವು ಸಿನೆಮಾ ಚುನಾವಣೆ ಮುಗಿದ ಅನಂತರ ಪ್ರದರ್ಶನಕ್ಕಾಗಿ ಮುಗಿಬೀಳುವ ಸಾಧ್ಯತೆಯೂ ಇದೆ. ಈ ಹಿಂದೆಯೂ ಇಂತಹ ಸಂದರ್ಭ ಎದುರಾಗಿತ್ತು. ಕೇವಲ ಒಂದೇ ತಿಂಗಳಿನಲ್ಲಿ 2- 3 ಸಿನೆಮಾಗಳು ತೆರೆಕಂಡ ಉದಾಹರಣೆಯೂ ಇದೆ.

ರಿಲೀಸ್‌ ತವಕದಲ್ಲಿರುವ ಸಿನೆಮಾಗಳು
ಬಹುನಿರೀಕ್ಷೆಯ ಸೂರಜ್‌ ಶೆಟ್ಟಿ ನಿರ್ದೇಶನದ ‘ಅಮ್ಮೆರ್‌ ಪೊಲೀಸಾ’, ಮಂಜು ರೈ ಮೂಳೂರು ನಟನೆಯ ‘ಮೈ ನೇಮ್‌ ಈಸ್‌ ಅಣ್ಣಪ್ಪ’, ರಾಜೇಶ್‌ ಬ್ರಹ್ಮಾವರ ನಿರ್ಮಾಣದ ‘ಕಟಪಾಡಿ ಕಟ್ಟಪ್ಪೆ’, ರಂಜಿತ್‌ ಸುವರ್ಣ ನಿರ್ದೇಶನದ ‘ಉಮಿಲ್‌’, ಇನ್ನುಳಿದಂತೆ ಕರಾವಳಿಯ ಪ್ರತಿಭಾನ್ವಿತ ಸಿನೆಮಾ ತಂಡವೇ ಸಿದ್ಧಗೊಳಿಸಿದ ‘ತೊಟ್ಟಿಲ್‌’, ಪುದರ್‌ಗೊಂಜಿ ಬೊಡೆದಿ’, ‘ಅಪ್ಪೆ ಟೀಚರ್‌’, ‘ಇಲ್ಲೊಕ್ಕೆಲ್‌’, ‘ಎಕ್ಕೂರು’, ‘ಪಡ್ಡಾಯಿ’, ‘ಕೋರಿ ರೊಟ್ಟಿ’, ‘ದಗ್‌ಲ್ಬಾಜಿ’, ‘ದೇಯಿ ಬೈದ್ಯೆತಿ, ‘ರಾ..ರಾ’, ‘ಜೈ ಮಾರುತಿ ಯುವಕ ಮಂಡಲ’ ಸಹಿತ ಹಲವು ಚಿತ್ರಗಳು ಈ ವರ್ಷವೇ ರಿಲೀಸ್‌ನ ತವಕದಲ್ಲಿದೆ. ಆದರೆ, ಚುನಾವಣೆ ಮುಗಿಯುವವರೆಗೆ ಇಷ್ಟೂ ಸಿನೆಮಾಗಳು ಕಾಯಬೇಕಾ? ಎಂಬುದು ಈಗಿನ ಪ್ರಶ್ನೆ.

ಕಳೆದ ವರ್ಷ ‘ಗುಡ್ಡೆದ ಭೂತ’ ‘ಮದಿಪು’, ‘ಚಾಪ್ಟರ್‌’, ‘ಏಸ’, ‘ಅರ್ಜುನ್‌ ವೆಡ್ಸ್‌ ಅಮೃತಾ’, ‘ಅರೆ ಮರ್ಲೆರ್‌’, ‘ಪತ್ತನಾಜೆ’, ‘ನೇಮೊದ ಬೂಳ್ಯ’, ‘ರಂಗ್‌ ರಂಗ್‌ದ ದಿಬ್ಬಣ’, ‘ಅಂಬರ್‌ ಕ್ಯಾಟರರ್’ ಸಿನೆಮಾ ರಿಲೀಸ್‌ ಆಗಿತ್ತು. ವಿಶೇಷವೆಂದರೆ, ಮೇ ಕಾಲಕ್ಕಾಗುವಾಲೇ ನಾಲ್ಕು ಸಿನೆಮಾ ರಿಲೀಸ್‌ ಆಗಿತ್ತು. ಆದರೆ, ಈ ವರ್ಷ ಇಲ್ಲಿಯವರೆಗೆ ಒಂದು ಬಿಡುಗಡೆಯಾಗಿದ್ದು, ಮೇ ಸಮಯಕ್ಕಾಗುವಾಗ ಬೇರೆ ಸಿನೆಮಾ ರಿಲೀಸ್‌ ಆಗಬಹುದಾ? ಎಂಬ ಪ್ರಶ್ನೆ ಮೂಡಿದೆ. 

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next