ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಉತ್ತಮ ಮತ್ತು ನಿರಂತರ ಪ್ರಯತ್ನದಿಂದ ಪರೀಕ್ಷೆ ಎದುರಿಸಬೇಕು. ನಂತರ ಬರುವ ಫಲಿತಾಂಶವೇ ಜೀವನದಲ್ಲಿ ಅಂತಿಮ ಎಂದು ಭಾವಿಸಬಾರದು ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಆದಿಚುಂಚನಗಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾ ನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಹೊರ ವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್ ಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಸ್ತಿ ವಿಜಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪೂಜ್ಯ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಆಶಯದಂತೆ ಶ್ರೀಮಠವು ಹಳ್ಳಿಯಿಂದ ಜಗತ್ತಿನಾದ್ಯಂತ ಶಾಲೆಗಳನ್ನು ಪ್ರಾರಂಭಿಸುತ್ತಿದೆ ಎಂದರು.
ಹಳ್ಳಿ ಮಕ್ಕಳಿಗೆ ಶಿಕ್ಷಣ: ಹಳ್ಳಿಯನ್ನು ಇಡೀ ಭೂಮಂಡ ಲಕ್ಕೆ ವ್ಯಾಪಿಸುವಂತೆ ಹಳ್ಳಿಯ ಮಕ್ಕಳಿಗೆ ಶಿಕ್ಷಣ, ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಸುವುದರ ಮೂಲಕ ಜಗತ್ತಿನಾದ್ಯಂತ ಹಬ್ಬಿಸುವುದು ಶ್ರೀಮಠದ ಆಶಯವಾಗಿದೆ. ಶ್ರೀಮಠವು ಶಿಕ್ಷಣ, ಆರೋಗ್ಯ, ಪರಿಸರ ಕ್ಷೇತ್ರಗಳಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಶಿಕ್ಷಕರ ಪರಿಶ್ರಮ ಮತ್ತು ಪೋಷಕರ ಸಹಕಾರ ಇದ್ದಾಗ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಈಗಾಗಲೇ ಕಲಿತಿರುವ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿ ಕೊಂಡು ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳ ಬೇಕೆಂದರು. ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸುವುದರ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ರೂಢಿಸಿ ಕೊಳ್ಳಬೇಕು. ಪರೀಕ್ಷೆ ಎದುರಿಸಲು ಯಾರು ಭಯಪಡ ಬೇಡಿ ಎಂದು ಸಲಹೆ ನೀಡಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ತಾವು ಮಾಡಬೇಕಾದ ಕರ್ತವ್ಯಗಳ ಬಗ್ಗೆ ತಿಳಿ ಹೇಳಿದರು. ಎಸ್ಸೆಸ್ಸೆಲ್ಸಿ ನಂತರ ವಿದ್ಯಾರ್ಥಿಗಳು ಪೋಷಕರ ಮಾತಿಗೆ ಬೆಲೆಕೊಟ್ಟು ನಡೆದುಕೊಂಡು ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಬೇಕು. ಕಾಲೇಜಿಗೆ ಹೋದ ಮೇಲೆ ತಮ್ಮ ಜವಾಬ್ದಾರಿ ಅರಿತು ಭವಿಷ್ಯದ ಕಡೆಗೆ ಗಮನಕೊಡಬೇಕೆಂದರು.ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಶಿವರಾಮ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ಬೌದ್ಧಿಕ ಮತ್ತು ಮಾನಸಿಕವಾಗಿ ದೃಢ ನಿರ್ಧಾರದಿಂದ ಪರೀಕ್ಷೆ ಎದುರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಂದನಾಥ ಸ್ವಾಮೀಜಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಹಿರಿಯ ಕಾಂಗ್ರೆಸ್ ಮುಖಂಡ ಯಲುವಹಳ್ಳಿ ರಮೇಶ್, ಆರಕ್ಷಕ ವೃತ್ತ ನಿರೀಕ್ಷಕ ಸುದರ್ಶನ್, ಬಿಜಿಎಸ್ ಶಾಲಾ ಮುಖ್ಯಶಿಕ್ಷಕ ಮೋಹನ್ ಕುಮಾರ್ ಡಿ.ಸಿ, ಚಿಕ್ಕಬಳ್ಳಾಪುರ ವಿಭಾಗದ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು, ಪ್ರಾಂಶು ಪಾಲರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಭಾಗವಹಿಸಿದ್ದರು.