ಮಂಡ್ಯ: ಕೋವಿಡ್ 19 ಭೀತಿಯಲ್ಲೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದ್ದರಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘದಿಂದ ನಡೆದ ಕೋವಿಡ್-19ರ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮಗ್ರವಾಗಿ ನಿಭಾಯಿಸಿದ ಅಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ 19 ಇದ್ದರೂ ಆರೋಗ್ಯಕರವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ರಾಜ್ಯ ಸರ್ಕಾರದ ದಿಟ್ಟನಿಟ್ಟ ನಿರ್ಧಾರ ಮತ್ತು ಕೋವಿಡ್ -19ರ ನಿಯಮದಂತೆ ಪರೀಕ್ಷೆ ನಡೆಸಲು ಆರೋಗ್ಯ ಮತ್ತು ಶಿಕ್ಷಣ ತಜ್ಞರ ಸಲಹೆ, ಅಧಿಕಾರಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರ ಸಹಕಾರದಿಂದ ಉತ್ತಮವಾಗಿ ಪರೀಕ್ಷೆ ನಡೆದಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಘುನಂದನ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಿದ ಸನ್ನಿವೇಶಕ್ಕೂ ಅಭಿನಂದನೆ ಮಾಡುತ್ತಿರುವುದು ವಿಶೇಷವಾಗಿದೆ.
ನಮ್ಮ ನಿರೀಕ್ಷೆಯ ಫಲಿತಾಂಶ ಪ್ರಥಮ ಸ್ಥಾನ ಲಭಿಸಿದರೆ ಸಾಧನೆಗೆ ಫಲ ಲಭಿಸುತ್ತದೆ. 9ರಂದು ಮೌಲ್ಯಮಾಪನ ನಡೆದು, ಆಗಸ್ಟ್ ಮೊದಲ ವಾರ ಫಲಿತಾಂಶ ಪ್ರಕಟಿಸುವ ಬಗ್ಗೆ ಸರ್ಕಾರ ತಿಳಿಸಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವು, ಚಂದ್ರಕಾಂತ, ಶಿವಪ್ಪ ಅವರನ್ನು ಅಭಿನಂದಿಸಲಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ಜಿಲ್ಲಾಧ್ಯಕ್ಷ ರಜಿನಿರಾಜ್, ಪ್ರಧಾನ ಕಾರ್ಯದರ್ಶಿ ನೀನಾ ಪಟೇಲ್, ಉಪಾಧ್ಯಕ್ಷೆ ಶಕುಂತಲಾ, ಭೈರೇಗೌಡ, ಶಿಕ್ಷಕಿ ಜಯಂತಿ, ಬಸವೇಗೌಡ ಇದ್ದರು.