Advertisement

ಯುಜಿಸಿ ಮಾನ್ಯತೆ ರದ್ದಾಗಿದ್ದ ಅವಧಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ

02:31 AM May 28, 2019 | Sriram |

ಮೈಸೂರು: ಯುಜಿಸಿ ಮಾನ್ಯತೆ ರದ್ದಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ 2011-12 ಮತ್ತು 2012-13ನೇ ಸಾಲಿನ ಬಿ.ಎ., ಬಿ.ಕಾಂ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಂದಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಮಾತನಾಡಿ, 2011-12 ಮತ್ತು 2012-13ನೇ ಸಾಲಿನಲ್ಲಿ ಅಂತರ್‌ ಗೃಹ ಬಿ.ಎ., ಬಿ.ಕಾಂ ಪ್ರವೇಶಾತಿ ಪಡೆದು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಮತ್ತು ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂದರು.

2012-13ನೇ ಸಾಲಿನಲ್ಲಿ ಬಿ.ಎ., ಬಿ.ಕಾಂ ಗೆ ಪ್ರವೇಶಾತಿ ಪಡೆದಿದ್ದ ವಿದ್ಯಾರ್ಥಿಗಳ ಪದವಿ 2016-17ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ವಿವಿಯ ತಪ್ಪಿನಿಂದಾಗಿ ಯುಜಿಸಿ ಮಾನ್ಯತೆ ಕಳೆದುಕೊಂಡಿದ್ದರಿಂದ ಪರೀಕ್ಷೆ ನಡೆಸಲಾಗಿರಲಿಲ್ಲ. ಹೀಗಾಗಿ ವಿವಿ ನಿಯಮಾವಳಿಗಳ ಪ್ರಕಾರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ 2011-12ನೇ ಸಾಲಿನ ಬಿ.ಎ., ಬಿ.ಕಾಂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಒಂದು ಅವಕಾಶ ಹಾಗೂ 2011-12ನೇ ಸಾಲಿನ ಬಿ.ಎ., ಬಿ.ಕಾಂ ವಿದ್ಯಾರ್ಥಿಗಳಿಗೆ ಎರಡು ಅವಕಾಶಗಳನ್ನು ನೀಡುವ ಮೂಲಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. 2-3 ದಿನಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಕರೆದು ಪ್ರಕಟಣೆ ಹೊರಡಿಸಲಾಗುವುದು. ಜತೆಗೆ 2018-19ನೇ ಸಾಲಿನಲ್ಲಿ ಪ್ರವೇಶಾತಿ ಪಡೆದಿರುವ 12 ಸಾವಿರ ವಿದ್ಯಾರ್ಥಿಗಳಿಗೂ ಜುಲೈ-ಆಗಸ್ಟ್‌ನಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರವೇಶಾತಿ ಪ್ರಾರಂಭ: 2019-20ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಬೇರೆ ಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆಯನ್ನು ಮೇ 6ರಂದು ಆರಂಭಿಸಿದ್ದು, ಈಗಾಗಲೇ 77 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರವೇಶಾತಿ ಸಂಬಂಧ ವಿವಿಯ ಅಧಿಕೃತ ವೆಬ್‌ಸೈಟ್ ಅನ್ನು ಈವರೆಗೆ 31,720 ವಿದ್ಯಾರ್ಥಿಗಳು ವೀಕ್ಷಿಸಿದ್ದು, ಈ ಪೈಕಿ 759 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಆವೃತ್ತಿಯ ಪ್ರವೇಶಾತಿಗೆ ಆ.31ರವರೆಗೆ ಕಾಲಾವಕಾಶವಿದ್ದು, 50 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎಂದರು.

ಪಿಎಚ್.ಡಿ ಮುಂದುವರಿಕೆ: 2012-13ನೇ ಸಾಲಿನಿಂದ ಅನ್ವಯವಾಗುವಂತೆ 2015ರ ಮೇ 16ರ ಅಧಿಸೂಚನೆಯಲ್ಲಿ ಯುಜಿಸಿ ಮುಕ್ತ ವಿವಿಯ ಮಾನ್ಯತೆ ಹಿಂಪಡೆದಿದ್ದರಿಂದ ಸಂಶೋಧನಾರ್ಥಿಗಳಿಗೆ ಪಿಎಚ್.ಡಿ ಪದವಿಗೆ ಪ್ರವೇಶಾತಿ ತಡೆಹಿಡಿಯಲಾಗಿತ್ತು. ಪ್ರಸ್ತುತ ವಿವಿಗೆ ಯುಜಿಸಿ ಮಾನ್ಯತೆ ದೊರೆತಿರುವುದರಿಂದ ಈ ವಿವಿಯಲ್ಲಿ 2008 ಮತ್ತು 2012ರ ಪಿಎಚ್.ಡಿ ಪರಿನಿಯಮಗಳ ಪ್ರಕಾರ ನೋಂದಣಿ ಮಾಡಿಕೊಂಡಿದ್ದ 118 ಸಂಶೋಧನಾರ್ಥಿಗಳ ಸಂಶೋಧನಾ ಕಾರ್ಯವನ್ನು ಮುಂದುವರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

Advertisement

ಕೌಶಲ್ಯಾಭಿವೃದ್ಧಿ ತರಬೇತಿ ಕಡ್ಡಾಯ: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಪ್ರವೇಶಾತಿ ಪಡೆದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಾದ ಆಡಳಿತ ಕನ್ನಡ, ಇಂಗ್ಲಿಷ್‌ ಫಾರ್‌ ಕಮ್ಯೂನಿಕೇಷನ್‌ ಆ್ಯಂಡ್‌ ಸಾಫ್ಟ್ ಸ್ಕಿಲ್ಸ್, ವೆಬ್‌ ಡಿಸೈನಿಂಗ್‌, ಕಂಪ್ಯೂಟರ್‌ ಫ‌ಂಡಮೆಂಟಲ್ಸ್, ಡೆಸ್ಕ್ಟಾಪ್‌ ಪಬ್ಲಿಷಿಂಗ್‌ (ಡಿಟಿಪಿ), ಮಲ್ಟಿಮೀಡಿಯಾ ಮತ್ತು ಬೇಸಿಕ್‌ ಆಫ್ ನೆಟ್ ವರ್ಕಿಂಗ್‌ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂದು ಹೇಳಿದರು. ಮುಕ್ತ ವಿವಿ ಕುಲಸಚಿವ ಪ್ರೊ.ರಮೇಶ್‌ ಹಾಜರಿದ್ದರು.

ತರಬೇತಿಗೆ ಕಡ್ಡಾಯವಾಗಿ ಹಾಜರಾಗಿ
ಸ್ನಾತಕ ವಿದ್ಯಾರ್ಥಿಗಳಿಗೆ 3 ಹಂತಗಳ ಕೌಶಲ್ಯಾಭಿವೃದ್ಧಿ ಶಿಕ್ಷಣ ಕ್ರಮ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2 ಹಂತಗಳ ಕೌಶಲ್ಯಾಭಿವೃದ್ಧಿ ಶಿಕ್ಷಣ ಕ್ರಮವಿದೆ. ಒಂದೊಂದು ಹಂತಗಳಿಗೆ ಒಂದೊಂದು ವರ್ಷದಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲನೇ ಹಂತದ ಕೌಶಲ್ಯಾಭಿವೃದ್ಧಿ ಶಿಕ್ಷಣ ಕ್ರಮದ ವೇಳಾಪಟ್ಟಿಯನ್ನು ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಜೂನ್‌ 2 ರಿಂದ 30ರ ಅವಧಿಯಲ್ಲಿ ಮೈಸೂರು, ಬೆಂಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ ಮತ್ತು ಉಡುಪಿಯಲ್ಲಿ ತರಬೇತಿ ನಡೆಸಲಾಗುವುದು, ಈ ತರಬೇತಿಗೆ ಎಲ್ಲಾ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಹಾಜರಾಗಬೇಕು. ಕೌಶಲ್ಯಾಭಿವೃದ್ಧಿ ತರಬೇತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.ksoumysore.karnataka.gov.in
ನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ಮೇ 31ಕ್ಕೆ ನನ್ನ ಅವಧಿ ಪೂರ್ಣಗೊಳ್ಳುತ್ತಿದ್ದು, ಯುಜಿಸಿ ಮಾನ್ಯತೆ ರದ್ದಾಗಿದ್ದ ವಿವಿಗೆ ಮಾನ್ಯತೆ ಸಿಕ್ಕಿದ್ದು ಸಂತಸ ತಂದಿದೆ. ಯುಜಿಸಿ ಮಾನ್ಯತೆ ಇಲ್ಲದ್ದರಿಂದ ನನ್ನ ಅವಧಿ ಸವಾಲಿನದಾಗಿತ್ತು. ಈಗ ವಿದ್ಯಾರ್ಥಿಗಳಿಗೆ ವಿವಿ ಬಗ್ಗೆ ವಿಶ್ವಾಸ ಬಂದಿದೆ. ನಾನು ಮಾಡಿದ ಕೆಲಸಕ್ಕೆ ತೃಪ್ತಿ ಸಿಕ್ಕಿದೆ.
-ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ಮುಕ್ತ ವಿವಿ
Advertisement

Udayavani is now on Telegram. Click here to join our channel and stay updated with the latest news.

Next