ನವದೆಹಲಿ: 1999ರ ಜಾರ್ಖಂಡ್ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಸಿಬಿಐ ವಿಶೇಷ ಕೋರ್ಟ್ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪದಲ್ಲಿ ದಿಲೀಪ್ ರೇಗೆ ಜೈಲು ಶಿಕ್ಷೆ ವಿಧಿಸಿದ್ದು, ಇತ್ತೀಚೆಗಷ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ದೋಷಿ ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿತ್ತು.
ಕ್ರಿಮಿನಲ್ ಸಂಚು ಮತ್ತು ಇತರ ಆರೋಪಗಳನ್ನು ಎಸಗಿರುವ ಆರೋಪದಡಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿನ ಕೇಂದ್ರ ಖಾತೆ ಮಾಜಿ ರಾಜ್ಯ ಸಚಿವ ದಿಲೀಪ್ ರೇ ದೋಷಿ ಎಂದು ಕೋರ್ಟ್ ಆದೇಶ ನೀಡಿತ್ತು.
ಇದನ್ನೂ ಓದಿ:ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ
ಭಾರತೀಯ ದಂಡ ಸಂಹಿತೆ 409 ಸೇರಿದಂತೆ ವಿವಿಧ ಕಾಯ್ದೆಯಡಿ ರೇ ಅಪರಾಧಿ ಎಂದು ಕೋರ್ಟ್ ಘೋಷಿಸಿದ್ದು, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅಕ್ಟೋಬರ್ 6ರಂದು ತೀರ್ಪು ನೀಡಿದ್ದ ಸಂದರ್ಭದಲ್ಲಿ ತಿಳಿಸಿತ್ತು.
ಅಕ್ಟೋಬರ್ 14ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ಅಂತಿಮ ವಾದ ಆಲಿಸಿದ್ದ ಸಿಬಿಐ ವಿಶೇಷ ಕೋರ್ಟ್ ನ ಜಡ್ಜ್ ಭರತ್ ಪರಾಶರ್ ಅಕ್ಟೋಬರ್ 26ಕ್ಕೆ ಶಿಕ್ಷೆಯನ್ನು ಪ್ರಕಟಿಸುವುದಾಗಿ ತಿಳಿಸಿದ್ದರು.