Advertisement

ಜಮೀರ್ ಮನೆ ಕಟ್ಟಿದ್ದಾರೆ ಅಷ್ಟೆ,ಹಣ ದುರುಪಯೋಗ ಎಲ್ಲಿಆಗಿದೆ?:ED ದಾಳಿ ವಿರುದ್ಧ ಸಿದ್ದು ಟೀಕೆ

06:38 PM Aug 07, 2021 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈ ಹಾಕದೆ ಇರುವುದು ಉತ್ತಮ.   ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಈ ವಿಚಾರದಲ್ಲಿ ದ್ವೇಷರಾಜಕಾರಣ ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

Advertisement

ಇಂದು (ಆ.07) ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅವರು, ಬೆಂಗಳೂರಿನ ಮೇಲು ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, ಗುಜರಾತ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಏಕೆ ಇಡಲಾಗಿದೆ. ಈ ಹೆಸರುಗಳನ್ನು ಕೇಂದ್ರ ಸರ್ಕಾರ ಸರ್ಕಾರ ಬದಲಾಯಿಸುವುದೇ? ಎಂದು ಪ್ರಶ್ನಿಸಿದ್ದಾರೆ.

ಮೇಜರ್ ಧ್ಯಾನ್‍ಚಂದ್ ಅವರು ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಪ್ರಶಸ್ತಿಗೆ ಅವರ ಹೆಸರು ಇಡಬಹುದಾಗಿತ್ತು. ರಾಜೀವ್‍ ಗಾಂಧಿಯವರ ಹೆಸರೇಕೆ ಬದಲಿಸಬೇಕು? ದೇಶಕ್ಕಾಗಿ ಸೇವೆ ಸಲ್ಲಿಸಿದವರ ಸ್ಮರಣೆಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಒಂದು ಪರಂಪರೆ ಎಂದಿದ್ದಾರೆ.

ಗರೀಬಿ ಹಠಾವೋ ಘೋಷಣೆ ಮೂಲಕ ಬಡವರ ಏಳಿಗೆಗೆ ಶ್ರಮಿಸಿದ್ದ ಇಂದಿರಾಗಾಂಧಿ, ಭೂ ಸುಧಾರಣೆ ಕಾಯ್ದೆ ಕೂಡ ಜಾರಿಗೆ ತಂದವರು. ಈ ಕೊಡುಗೆಯನ್ನು ಗೌರವಿಸಿ ಇಂದಿರಾ ಕ್ಯಾಂಟೀನ್‍ಗೆ ಅವರ ಹೆಸರು ಇಡಲಾಗಿದೆ.  ಅವರ ಸೇವೆಯನ್ನು ಗೌರವಿಸುವುದರಲ್ಲಿ ತಪ್ಪೇನಿದೆ?  ಬಡವರಿಗೆ ಕೊಡುತ್ತಿದ್ದ ಏಳು ಕೆ.ಜಿ. ಅಕ್ಕಿಯನ್ನು‌ ಕಡಿತಗೊಳಿಸಿದ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಬಡವರ ಬಗ್ಗೆ ಏನು ಕಾಳಜಿ ಇದೆ?  ಬಿಜೆಪಿಗೆ ತಮ್ಮ ನಾಯಕರ ಹೆಸರಿನ ಬಗ್ಗೆ ಅಷ್ಟೊಂದು ಮೋಹ ಇದ್ದರೆ ಹೊಸ ಯೋಜನೆ ಪ್ರಾರಂಭಿಸಿ, ಹೊಸ ಹೆಸರು ಇಟ್ಟುಕೊಂಡು ಮೆರೆದಾಡಲಿ. ಬೇಡ ಎಂದವರು ಯಾರು? ಆ ಯೋಗ್ಯತೆ ಇವರಿಗಿಲ್ಲ ಎಂದು ಕಿಡಿಕಾರಿದ್ದಾರೆ.

ನೂತನ ಸಚಿವ ಸಂಪುಟದಲ್ಲಿ ಬಹುತೇಕ ಹಳಬರೇ ಸಚಿವರಿದ್ದಾರೆ. ಹೀಗಾಗಿ ಹೊಸದನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಕರ್ನಾಟಕ ಸರ್ಕಾರದ ಮಂತ್ರಿಮಂಡಲದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿಲ್ಲ. ಹಳೆ ಮೈಸೂರು ಭಾಗಕ್ಕೆ ಅವಕಾಶ ಕಡಿಮೆಯಾಗಿದೆ. ರಾಜ್ಯದಲ್ಲಿ ಶೇ. 24.1 ರಷ್ಟು ದಲಿತರಿದ್ದಾರೆ. ಆದರೆ, ಪರಿಶಿಷ್ಟರಿಗೆ ನಾಲ್ಕು ಸ್ಥಾನ ಮಾತ್ರ ನೀಡಲಾಗಿದೆ. ಬೋವಿ, ಕೊರಚ, ಕೊರಮರಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ನನ್ನ ಸಂಪುಟದಲ್ಲಿ ಸಾಮಾಜಿಕ ನ್ಯಾಯದಡಿ ಸರ್ವಜಾತಿಗಳಿಗೂ ಪ್ರಾತಿನಿಧ್ಯ ನೀಡಲಾಗಿತ್ತು ಎಂದಿದ್ದಾರೆ.

Advertisement

ಇನ್ನು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ವಿಚಾರದ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸಾಮಾನ್ಯವಾಗಿ ಐಟಿ ದಾಳಿ‌ ನಡೆಸಿದ ಬಳಿಕ ಅಗತ್ಯ ಬಿದ್ದರೆ ಇ.ಡಿ ದಾಳಿ ಮಾಡುತ್ತದೆ. ಅದು ಆದಾಯ ಮೀರಿ ಆಸ್ತಿ ಗಳಿಸಿದ್ದರೆ, ಅಕ್ರಮವಾಗಿ ಹಣ ವರ್ಗಾವಣೆ ಅಥವಾ ದುರುಪಯೋಗವಾಗಿದ್ದರೆ ಮಾತ್ರ. ಜಮೀರ್ ಅವರ ಮನೆ ಮೇಲಿನದು ದುರುದ್ದೇಶದ ದಾಳಿ. ನಮ್ಮ ಪಕ್ಷದ ಶಾಸಕ ಜಮೀರ್ ಮನೆ ಮೇಲೆ ಇ.ಡಿ ಏಕಾಏಕಿ ದಾಳಿ ನಡೆಸಿದೆ. ಇದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶದಿಂದ ಕೂಡಿದ ದಾಳಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಇದು ಮೊದಲಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಶಾಸಕರಾದ ಜಮೀರ್ ಮನೆ ಕಟ್ಟಿದ್ದಾರೆ ಅಷ್ಟೆ. ಹಣ ದುರುಪಯೋಗ ಅಥವಾ ಅಕ್ರಮ ವರ್ಗಾವಣೆ ಎಲ್ಲಿ ಆಗಿದೆ? ಕರ್ನಾಟಕ ಬಿಜೆಪಿ ನಾಯಕರ ಮನೆ ಮೇಲೆ ಏಕೆ ದಾಳಿ ನಡೆಯುವುದಿಲ್ಲ. ಅವರೆಲ್ಲಾ ಬಡವರೇ?  ಬಿಪಿಎಲ್ ಕಾರ್ಡುದಾರರೇ ? ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next