Advertisement
ಈ ಸಂಬಂಧ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದ ಮುಖ್ಯಾಂಶಗಳು ಹೀಗಿದೆ :
Related Articles
Advertisement
ಬರಲಿರುವ ಮೂರನೆ ಅಲೆಯು ಮಕ್ಕಳ ಮೇಲೆ ಹಾಗೂ ಮೊದಲ ಎರಡು ಅಲೆಗಳಲ್ಲಿ ಕೊರೋನಾದಿಂದ ಬಚಾವಾದವರ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆ ಇದೆಯೆಂದು ಅಂದಾಜಿಸುತ್ತಿದ್ದಾರೆ.
ರಾಜ್ಯದ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನೆದುರಿಸುತ್ತಿದ್ದಾರೆ. ಅಪೌಷ್ಟಿಕತೆಯು ಮಾರಣಾಂತಿಕವಾದ ಗಂಭೀರ ಸಮಸ್ಯೆಗಳಿಗೆ ಮಕ್ಕಳು ಮತ್ತು ಯುವಜನತೆಯನ್ನು ದೂಡುತ್ತಿದೆ. ಕೊರೋನ ನೆಪದಲ್ಲಿ ಅಂಗನವಾಡಿ ನೀಡುತ್ತಿದ್ದ ಪೌಷ್ಟಿಕ ಆಹಾರ ಮತ್ತು ಶಾಲೆಗಳಲ್ಲಿ ತಯಾರಿಸುತ್ತಿದ್ದ ಬಿಸಿಯೂಟವನ್ನು ನಿಲ್ಲಿಸಿದ್ದರಿಂದಾಗಿ ಅಪೌಷ್ಟಿಕತೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
ಮೂರು ನಾಲ್ಕು ತಿಂಗಳಿಗೊಮ್ಮೆ ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಮನೆಗಳಿಗೆ ನೀಡುತ್ತಿರುವುದರಿಂದ ಮಕ್ಕಳಿಗೆ ಸಿಗಬೇಕಾದ ಆಹಾರ ಸಮರ್ಪಕವಾಗಿ ಸಿಗುತ್ತಿಲ್ಲ.
ರಾಜ್ಯದ ಮಕ್ಕಳು, ಮಹಿಳೆಯರು ಹಾಗೂ ಯುವಜನರಲ್ಲಿನ ಅಪೌಷ್ಟಿಕತೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ.
ಒಕ್ಕೂಟ ಸರ್ಕಾರದ ಆರೋಗ್ಯ ಇಲಾಖೆಯ ವತಿಯಿಂದ ನಡೆಸಿರುವ ಸಮೀಕ್ಷೆ-೫ (೨೦೧೯-೨೦ ) ರ ಪ್ರಕಾರ ರಾಜ್ಯದಲ್ಲಿರುವ ನಿಗಧಿತ ಪ್ರಮಾಣಕ್ಕಿಂತ ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ.೩೩ ರಷ್ಟಿದೆ. ಶೇ.೬೫.೫ ರಷ್ಟು ಮಕ್ಕಳ ಹಿಮೊಗ್ಲೋಬಿನ್ ಪ್ರಮಾಣ ೧೧ ಗ್ರಾಂ ಗಿಂತ ಕಡಿಮೆ ಇದೆ. ಇದು ಅತ್ಯಂತ ಗಾಬರಿ ಹುಟ್ಟಿಸುವ ಸಂಗತಿಯಾಗಿದೆ.
ಅದೇ ರೀತಿ ೧೦೦೦ ಮಕ್ಕಳಲ್ಲಿ ೨೫ ಮಕ್ಕಳು ೫ ವರ್ಷ ತುಂಬುವ ಮೊದಲೆ ರಾಜ್ಯದಲ್ಲಿ ಮರಣ ಹೊಂದುತ್ತಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ ೨೮ ಮಕ್ಕಳು ಮರಣ ಹೊಂದುತ್ತಿದ್ದಾರೆ. ಒಕ್ಕೂಟ ಸರ್ಕಾರದ ಸುಸ್ಥಿರ ಅಭಿವೃದ್ಧಿ ಗುರಿ ೨೦೨೦-೨೧ ರ ಸಮೀಕ್ಷೆಯ ಪ್ರಕಾರ ಈ ವಯಸ್ಸಿನ ಮಕ್ಕಳ ಮರಣ ಪ್ರಮಾಣವ ೨೮ ರಷ್ಟಿದೆ. ಹಾಗಾಗಿ ೨೦೧೯ -೨೦ ಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ.
ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ.೪೦ ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಯಾದಗಿರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಧಾರವಾಡ ಮುಂತಾದ ಜಿಲ್ಲೆಗಳಿವೆ. ರಾಜ್ಯದ ಸರಾಸರಿ ಪ್ರಮಾಣ ಶೇ.೩೨ ರಷ್ಟಿದೆ.
ತೀವ್ರ ಅಪೌಷ್ಟಿಕತೆಯುಳ್ಳವರಲ್ಲಿ ಶೇ. ೨೫ ರಷ್ಟು ಮಕ್ಕಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೆ ಇದ್ದಾರೆ ಎಂಬುದು ತೀವ್ರ ಕಳವಳದ ವಿಚಾರ.
ಇಂಥ ಸ್ಥಿತಿಯಿರುವಾಗ ರಾಜ್ಯ ಸರ್ಕಾರವು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಅಪೌಷ್ಟಿಕತೆಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು ಮತ್ತಿತರರನ್ನು ಸಮರ್ಪಕವಾಗಿ ಗುರ್ತಿಸಿ ಅವರ ಆರೋಗ್ಯವನ್ನು ಸುಧಾರಿಸುವ ಕೆಲಸವನ್ನು ಮಾಡಲೇಬೇಕಾಗಿದೆ. ಈಗಾಗಲೆ ನಮ್ಮ ಪಕ್ಷದ ಹಲವು ಶಾಸಕರು ಸಿದ್ಧ ಪೌಷ್ಟಿಕಾಂಶಗಳುಳ್ಳ ಔಷಧಿ, ಆಹಾರಗಳನ್ನು ವಿತರಿಸುತ್ತಿದ್ದಾರೆ.
ಸರ್ಕಾರವು ಕೇವಲ ಬಾಯಿಮಾತಿನ ಕೆಲಸಗಳನ್ನು ಬಿಟ್ಟು ಅಪೌಷ್ಟಿಕತೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು ಮತ್ತು ಇತರೆ ವಯಸ್ಸಿನ ಜನರನ್ನು ಗುರ್ತಿಸಿ ಸಮರೋಪಾದಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ವಿತರಣೆ ಮಾಡುವಂತೆ ಆಗ್ರಹಿಸುತ್ತೇನೆ.