Advertisement

ರೂಪಾಂತರದ ವೈರಸ್‌ ಪ್ರಾಣಿಗಳಿಂದ ನಮಗೆ?; ಟೆಕ್ಸಾಸ್‌ ವಿವಿ ತಜ್ಞರಿಂದ ಹೊಸ ಸಂಶೋಧನೆ

08:07 AM May 31, 2020 | Hari Prasad |

ಹ್ಯೂಸ್ಟನ್‌: ಕೋವಿಡ್ ವೈರಸ್‌ ರೂಪಾಂತರ ಹೊಂದಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು ಮತ್ತು ಮನುಷ್ಯನ ದೇಹದೊಳಗೆ ಪ್ರವೇಶಿಸಿ, ಸೋಂಕು ಹರಡುವ ಸಾಮರ್ಥ್ಯ ಗಳಿಸಿಕೊಳ್ಳಬಹುದು ಎಂದು ಟೆಕ್ಸಾಸ್‌ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನ ವರದಿಯೊಂದು ತಿಳಿಸಿದೆ.

Advertisement

ಈ ಸಂಶೋಧನಾ ವರದಿ, ಕೋವಿಡ್‌-19 ಸಾಂಕ್ರಾಮಿಕದ ಮೂಲದ ಬಗ್ಗೆ ಬೆಳಕು ಚೆಲ್ಲಿದೆ. ‘ಸೈನ್ಸ್‌ ಅಡ್ವಾನ್ಸಸ್‌’ ನಿಯತಕಾಲಿಕದಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. ಕೋವಿಡ್‌ – 19ನ ಆನುವಂಶಿಕ ವಿಶ್ಲೇಷಣೆ ಮತ್ತು ಪ್ರಾಣಿಗಳಲ್ಲಿ ಅದರ ರೂಪಾಂತರದ ಸಾದೃಶ್ಯ ಕುರಿತು ಅಧ್ಯಯನ ನಡೆಸಿದ ಸಂಶೋಧಕರು, ಇದರ ಹತ್ತಿರದ ಸಂಬಂಧಿಯ ವೈರಸ್ಸೇ ಬಾವಲಿಗೆ ಸೋಂಕು ತಗಲುವ ವೈರಸ್‌ ಆಗಿದೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ.

ಚಿಪ್ಪುಹಂದಿಗೆ (ಪ್ಯಾಂಗೋಲಿನ್‌) ಸೋಂಕು ತರಬಹುದಾದ ಕೋವಿಡ್ ವೈರಸ್‌, ನಿರ್ಣಾಯಕವಾದ ಜೀನ್‌ನ ತುಣುಕೊಂದರ ವಿನಿಮಯದ ಮೂಲಕ ಮಾನವರಿಗೆ ಸೋಂಕು ಹರಡಬಹುದಾದ ಸಾಮರ್ಥ್ಯವನ್ನು ಗಳಿಸುತ್ತದೆ.

ಈ ರೀತಿ, ಜೀವಿಯಿಂದ ಜೀವಿಗೆ ಹರಡುವ ಸಂದರ್ಭದಲ್ಲಿ ವೈರಸ್‌, ತನ್ನ ಆನುವಂಶಿಕ ವಸ್ತುವಿನ ಬದಲಾವಣೆ ಮೂಲಕ ರೂಪಾಂತರ ಹೊಂದಿ, ಆತಿಥೇಯ ಜೀವಿಯ ಕೋಶಗಳಿಗೆ ಬಂಧಿತವಾಗಿ ಸೋಂಕು ಹರಡುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ ಎಂದು ವರದಿ ಹೇಳಿದೆ.

ಈ ವೈರಸ್‌ಗಳು ಬಾವಲಿಯಿಂದ ಪುನುಗು ಬೆಕ್ಕು ಅಥವಾ ಒಂಟೆಗೆ ಹರಡಿ, ಅಲ್ಲಿ ಆನುವಂಶೀಯವಾಗಿ ವಿಕಸನ ಹೊಂದಿ ಮನುಷ್ಯರಿಗೆ ಸೋಂಕು ತಗಲುವ ಸಾಮರ್ಥ್ಯವನ್ನೂ ಗಳಿಸಿರಬಹುದು.

Advertisement

ಚಿಪ್ಪು ಹಂದಿಯಿಂದ ವಿಕಸನ ಹೊಂದಿ ಮನುಷ್ಯರಿಗೆ ಸೋಂಕು ಹರಡುವ ಸಾಮರ್ಥ್ಯ ಬೆಳೆಸಿಕೊಂಡ ವೈರಸ್‌ಗಳಲ್ಲಿ ಜೀವಕೋಶದ ಪೊರೆಗೆ ಅಂಟಿಕೊಳ್ಳುವ ದೃಢತೆ ಹೆಚ್ಚಾಗಿ ಕಂಡುಬರುತ್ತಿದೆ.

ಆದರೆ, ಬಾವಲಿಯಿಂದ ವಿಕಸನ ಹೊಂದಿ ಮನುಷ್ಯರಿಗೆ ಸೋಂಕು ಹರಡುವ ಸಾಮರ್ಥ್ಯ ಬೆಳೆಸಿಕೊಂಡ ವೈರಸ್‌ಗಳಲ್ಲಿ ಜೀವ ಕೋಶದ ಪೊರೆಗೆ ಅಂಟಿಕೊಳ್ಳುವ ಗುಣ ಅಷ್ಟಾಗಿ ಕಂಡುಬರುವುದಿಲ್ಲ. ಆದರಿದು ಮಾನವನ ಸೋಂಕಿಗೆ ಕಾರಣವಾಗುವ ವೈರಸ್‌ಗೆ ಹೆಚ್ಚು ನಿಕಟತೆ ಹೊಂದಿದೆ.

ಹೀಗಾಗಿ, ಈಗ ಮಾನವರಿಗೆ ಸೋಂಕು ಹರಡುತ್ತಿರುವ ಕೋವಿಡ್ ವೈರಸ್‌, ಚಿಪ್ಪುಹಂದಿ ಮತ್ತು ಬಾವಲಿಗಳಿಗೆ ತಗುಲಿದ ವೈರಸ್‌ಗಳ ಹೈಬ್ರಿಡ್‌ ತಳಿ ಆಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next