Advertisement

ಗ್ರಾಪಂ ಚುನಾವಣೆಗೂ ಇವಿಎಂ ಯಂತ್ರ

12:04 PM May 24, 2018 | |

ಕಲಬುರಗಿ: ಇನ್ಮುಂದೆ ಗ್ರಾಮ ಪಂಚಾಯಿತಿ ಚುನಾವಣೆಗೂ ಇವಿಎಂ ಯಂತ್ರಗಳನ್ನು ಬಳಕೆ ಮಾಡಲು ಚುನಾವಣೆ ಆಯೋಗ ಉದ್ದೇಶಿಸಿದೆ. ಮೊದಲ ಹಂತವಾಗಿ ಕಲಬುರಗಿ ಜಿಲ್ಲೆಯಿಂದಲೇ ಕಾರ್ಯರೂಪಕ್ಕೆ ತರಲು ಮುಂದಾಗಿದೆ.
ಜೂ.14ರಂದು ನಡೆಯುವ ಜಿಲ್ಲೆಯ 15 ಗ್ರಾಪಂ ಚುನಾವಣೆಗೆ ಇವಿಎಂ (ವಿದ್ಯುನ್ಮಾನ ಮತ ಪೆಟ್ಟಿಗೆ) ಯಂತ್ರ ಬಳಸಲು ನಿರ್ಧರಿಸಲಾಗಿದೆ. 

Advertisement

ಅಲ್ಲದೇ ಈ ಕುರಿತು ಯಂತ್ರಗಳನ್ನು ರೂಪಿಸಲು ಕಾರ್ಯಪ್ರವೃತ್ತಗೊಳ್ಳಲಾಗಿದೆ. ಇವಿಎಂ ಯಂತ್ರಗಳ ಪೂರೈಕೆ ಸಂಬಂಧವಾಗಿ ನೆರೆ ಜಿಲ್ಲೆಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಎರಡೂವರೆ ವರ್ಷದ ಹಿಂದೆ ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಪಂನ ನಾವದಗಿ ಮತಗಟ್ಟೆಯಲ್ಲಿ ಪ್ರಾಯೋಗಿಕವಾಗಿ ಇವಿಎಂ ಯಂತ್ರಗಳ ಮೂಲಕ ಚುನಾವಣೆ ನಡೆಸಲಾಗಿತ್ತು. ಈಗ ಪೂರ್ಣ ಪ್ರಮಾಣದೊಂದಿಗೆ ಇವಿಎಂ ಯಂತ್ರ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಸಂಪೂರ್ಣ ಗ್ರಾಪಂ ಚುನಾವಣೆಯನ್ನು ಇವಿಎಂ ಯಂತ್ರದಿಂದಲೇ ನಿರ್ವಹಿಸಲು ಚುನಾವಣೆ ಆಯೋಗ ಯೋಜನೆ ಹೊಂದಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಕಲಬುರಗಿ ಮೂಲಕ
ಇಡಲಾಗುತ್ತಿದೆ.

ಇವಿಎಂ ಮೂಲಕ ಗ್ರಾಪಂ ಚುನಾವಣೆ ನಡೆಯುತ್ತಿರುವುದರಿಂದ ಸಾರ್ವತ್ರಿಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಂತೆ ನುರಿತ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗುವುದಲ್ಲದೇ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಮತದಾರರಿಗೆ ಇವಿಎಂ ಮಾದರಿ ಯಂತ್ರಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಕಲಬುರಗಿ
ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ “ಉದಯವಾಣಿ’ಗೆ ತಿಳಿಸಿದ್ದಾರೆ.

ಉಪ ಕದನಕ್ಕೆ ಇವಿಎಂ ಯಂತ್ರವಿಲ್ಲ ಜಿಲ್ಲೆಯ 15 ಗ್ರಾಪಂಗಳ ಜತೆಗೆ ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ತೆರವು ಆಗಿರುವ 13 ಸದಸ್ಯ ಸ್ಥಾನಗಳಿಗೂ ಜೂ.14ರಂದೇ ಉಪ ಚುನಾವಣೆ ನಡೆಯುತ್ತಿದೆ.  ಆದರೆ ಈ ಚುನಾವಣೆಗೆ ಇವಿಎಂ ಯಂತ್ರ ಬಳಕೆ ಮಾಡುತ್ತಿಲ್ಲ. 

ಯಾವ ಗ್ರಾಪಂಗಳಿಗೆ ಚುನಾವಣೆ?: ಕಲಬುರಗಿ ತಾಲೂಕಿನ ಮರಗುತ್ತಿ ಗ್ರಾಪಂ, ಆಳಂದ ತಾಲೂಕಿನ
ಮಡಕಿ, ದಣ್ಣೂರ, ನಿರಗುಡಿ, ಭೂಸನೂರ, ಹಿತ್ತಲಶಿರೂರ, ಧುತ್ತರಗಾಂವ, ಚಿಂಚೋಳಿ ತಾಲೂಕಿನ ಕರ್ಚಖೇಡ,
ಗರಗಪಳ್ಳಿ, ಚಿತ್ತಾಪುರ ತಾಲೂಕಿನ ಕೊಳ್ಳುರ, ರಾಂಪೂರಹಳ್ಳಿ, ಜೇವರ್ಗಿ ತಾಲೂಕಿನ ಮದರಿ, ಕರಕಿಹಳ್ಳಿ, ರಂಜಣಗಿ ಗ್ರಾಪಂಗೆ ಜೂ.14ರಂದು ಇವಿಎಂ ಯಂತ್ರದಿಂದ ಚುನಾವಣೆ ನಡೆಯಲಿದೆ

Advertisement

ಈಗೇಕೆ ಚುನಾವಣೆ?
ಎರಡೂವರೆ ವರ್ಷದ ಹಿಂದೆ ಗ್ರಾಪಂ ವಿಂಗಡಣೆ ಆದಾಗ ಕೇಂದ್ರ ಸ್ಥಾನ ತಮಗೆ ಬೇಕೆಂದು ಹಲವು ಗ್ರಾಮಗಳ ಗ್ರಾಮಸ್ಥರು ನ್ಯಾಯಾಲಯದ ಮೋರೆ ಹೋಗಿದ್ದರಿಂದ ಜಿಲ್ಲೆಯ 15 ಗ್ರಾಪಂಗಳಿಗೆ ಚುನಾವಣೆ ನಡೆದಿರಲಿಲ್ಲ. ಈಗ ನ್ಯಾಯಾಲಯದಿಂದ ಪ್ರಕರಣ ಇತ್ಯರ್ಥಗೊಂಡಿದ್ದರಿಂದ ಚುನಾವಣೆ ನಡೆಸಲು ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿದೆ. ಚುನಾವಣೆಗೆ ಮೇ 30ರಂದು ಜಿಲ್ಲಾ ಚುನಾವಣಾ ಅಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ಜೂ.2ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು. ನಾಮಪತ್ರ ವಾಪಸ್‌ ಪಡೆಯಲು ಜೂ.6 ಕೊನೆ ದಿನ. ಜೂ.14ರಂದು 15 ಗ್ರಾಪಂಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದೆ.

ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಜೂ.14ರಂದು ಕಲಬುರಗಿ ಜಿಲ್ಲೆಯ 15 ಗ್ರಾಮ ಪಂಚಾಯಿತಿಗಳಿಗೆ
ನಡೆಯುವ ಚುನಾವಣೆಯಲ್ಲಿ ಇವಿಎಂ ಯಂತ್ರ ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 
 ಆರ್‌. ವೆಂಕಟೇಶಕುಮಾರ ಜಿಲ್ಲಾಧಿಕಾರಿ ಕಲಬುರಗಿ 

Advertisement

Udayavani is now on Telegram. Click here to join our channel and stay updated with the latest news.

Next