Advertisement
ನಗರದ ಪ್ರಮುಖ ಶಿವ ಸನ್ನಿಧಿಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯ, ಮಾರುಕಟ್ಟೆಯ ಶ್ರೀ ಕೋಟೆ ಜಲಕಂಠೇಶ್ವರ ದೇವಾಲಯ, ಹಳೇ ಮದ್ರಾಸ್ ರಸ್ತೆಯಲ್ಲಿರುವ ಶಿವೋಹಂ ಶಿವ ದೇವಸ್ಥಾನ, ಚಾಮರಾಜಪೇಟೆಯ ರಾಮೇಶ್ವರ, ಕೆ.ಆರ್.ರಸ್ತೆಯ ಉಮಾಮಹೇಶ್ವರ ದೇವಸ್ಥಾನ ಸೇರಿದಂತೆ ಎಲ್ಲಾ ಶಿವನ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಅಭಿಷೇಕ, ರುದ್ರಾಭಿಷೇಕ ಮಾಡಿ ಬಿಲ್ವಪತ್ರೆ ಅರ್ಪಿಸಿ ಪೂಜಿಸಲಾಯಿತು.
Related Articles
Advertisement
ಮಲ್ಲೇಶ್ವರದ ಕಾಡುಮಲ್ಲೇಶ್ವರ, ಕನ್ನಿಕಾ ಪರಮೇಶ್ವರಿ, ಹನುಮಂತನಗರದ ಶೇಷ ಗಣಪತಿ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ಸೋಮವಾರ ಅದ್ದೂರಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯಗಳಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದಲೇ ಶಿವನಿಗೆ ಹಾಲು, ಮೊಸರು, ಎಳನೀರುಗಳಿಂದ ಅಭಿಷೇಕ ಮಾಡಲಾಯಿತು.
ಶಿವಲಿಂಗ, ಶಿವನ ಮೂರ್ತಿ ಜತೆ ದೇವಸ್ಥಾನವನ್ನು ಸಹ ಹೂವು ಹಣ್ಣು ದಾನ್ಯಗಳಿಂದ ವಿಜೃಂಭಣೆಯಿಂದ ಅಲಂಕಾರಗೊಳಿಸಲಾಗಿತ್ತು. ಹಳೇ ಮದ್ರಾಸ್ ರಸ್ತೆಯಲ್ಲಿರುವ ಶಿವನ ದೇವಾಲಯಕ್ಕೆ ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಸಾವಿರಾರು ಭಕ್ತರು ಆಗಮಿಸಿದ್ದರು.
ಬಸವನಗುಡಿಯಲ್ಲಿರುವ ಕಾಳಹಸ್ತೇಶ್ವರ ದೇವಾಲಯ, ಬೇಡರ ಕಣ್ಣಪ್ಪ ದೇವಾಲಯ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. ಮಾರುಕಟ್ಟೆಯ ಶ್ರೀ ಕೋಟೆ ಶ್ರೀ ಜಲಕಂಠೇಶ್ವರ ದೇವಾಲಯದಲ್ಲಿ ಯಾಮ ಪೂಜೆ, ಕಬ್ಬನ್ ಉದ್ಯಾನದ ಈಶ್ವರ ದೇವಸ್ಥಾನದಲ್ಲಿ ಅಖೀಲ ಭಾರತ ಹಿಂದೂ ಮಹಾಸಭಾ ವತಿಯಿಂದ ಸಂಜೆ 5ಕ್ಕೆ ಸೈನಿಕರ ರಕ್ಷಣೆ ಹಾಗೂ ದೀರ್ಘಾಯಸ್ಸಿಗೆ ಮೃತ್ಯುಂಜಯ ಹೋಮ ನಡೆಯಿತು.
ಜಾಗರಣೆ ಜೋರು: ನಗರದ ಪ್ರಮುಖ ದೇವಾಲಯ, ಸಂಘ ಸಂಸ್ಥೆಗಳಿಂದ ಶಿವರಾತ್ರಿ ಹಿನ್ನೆಲೆ ಜಾಗರಣೆ ನಡೆಯಿತು. ಶಿವನ ಸ್ಮರಣೆಯ ಸಂಗೀತ ಸೇವೆ, ಭಜನೆ, ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು. ಸಿರೂರು ಪಾರ್ಕ್‌ನಲ್ಲಿ ನಗೆಹಬ್ಬ, ಮಾಗಡಿ ರಸ್ತೆ ಮಾಚೋಹಳ್ಳಿಯಲ್ಲಿರುವ ಶ್ರೀ ಜೋಡಿ ವೀರಭದ್ರೇಶ್ವರ ರುದ್ರೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸವಿತಕನ ಹಳ್ಳಿ ಬ್ಯಾಂಡ್ ಸಂಗೀತ ಕಾರ್ಯಕ್ರಮ,
ವಿಶೇಷ ಜಾದೂ ಪ್ರದರ್ಶನ, ಮಲ್ಲಗಂಬ ಪ್ರದರ್ಶನ, ವಿವೇಕ ನಗರದ ವಣ್ಣಾರ್ ಪೇಟ್‌ನ ಕಾಶಿ ವಿಶ್ವನಾಥರ ದೇವಸ್ಥಾನದಲ್ಲಿ ಭಕ್ತಿಸುಧೆ, ಜೆ.ಪಿ.ನಗರ 7ನೇ ಹಂತದ ಆರ್.ಬಿ,ಐ ಬಡಾವಣೆಯ ಸೋಮೇಶ್ವರ ಸಭಾಭವನದಲ್ಲಿ ಸುಕನ್ಯಾ ಕಲ್ಯಾಣ ಯಕ್ಷಗಾನ ಪ್ರಸಂಗ,ಜೆ.ಪಿ.ನಗರ 7ನೇ ಹಂತದ ಆರ್.ಬಿ,ಐ ಬಡಾವಣೆಯಿಂದ ಉದಯ ಕಲಾ ನಿಕೇತನ ವತಿಯಿಂದ ಕೃಷ್ಣಪ್ರಿಯ ಕನಕ ನೃತ್ಯರೂಪಕ ಪ್ರಸ್ತುತಪಡಿಸಲಾಯಿತು.
ರೋಬೋಟ್ ಶಿವಪುರಾಣ: ಮಲ್ಲೇಶ್ವರನಲ್ಲಿರುವ ವಾಸವಿ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಂಘವು ವಿಭಿನ್ನವಾಗಿ ಶಿವ ಆರಾಧನೆಯನ್ನು ಮಾಡಿತು. ದೇಗುಲ ಆಗಮಿಸುವ ಭಕ್ತ ವೃಂದಕ್ಕೆ ಕೆಲವು ಪುರಾಣ ಕಥೆಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ ಗುಹಾಂತರ ನಾಗಲಿಂಗೇಶ್ವರ ಸ್ವಾಮಿ ಹಾಗೂ ಶಿವನ ವೈಭವಯುತ ಆಕರ್ಷಕ ಸೆಟ್ ನಿರ್ಮಾಣ ಮಾಡಲಾಗಿತ್ತು.
ಸಾಮಾನ್ಯವಾಗಿ ಪುರಾಣದ ಪ್ರಕಾರ ಗಣೇಶ ಹಾಗೂ ಸುಬ್ರಮಣ್ಯನಿಗೆ ಒಂದು ಪಂದ್ಯ ಏರ್ಪಡಿಸಿ, ಯಾರು ಮೊದಲು ಪ್ರಪಂಚ ಸುತ್ತಿ ಬರುತ್ತಾರೋ ಅವರಿಗೆ ಫಲ ನೀಡುತ್ತೇವೆಂದು ಹೇಳಿರುತ್ತಾರೆ. ಬುದ್ದಿವಂತ ಗಣೇಶ ತನ್ನ ತಂದೆ ತಾಯಿಯನ್ನು ಸುತ್ತಿ ಪ್ರಪಂಚ ಸುತ್ತಿ ಬಂದಾಯ್ತು ಎಂದು ಹೇಳುತ್ತಾನೆ ಈ ಕತೆಯನ್ನು ರೋಬೋಟಿಕ್ ಮಾದರಿಯಲ್ಲಿ ಮಾಡಲಾಗಿತ್ತು. ಭಕ್ತಾಧಿಗಳು ಈ ಮಾದರಿ ಕಣ್ತುಂಬಿಕೊಂಡು ಸಂತಸಪಟ್ಟರು.