Advertisement

ಬಾಬರಿ ಮಸೀದಿ ಪ್ರಕರಣ ತೀರ್ಪು; ಒಟ್ಟಾರೆ ಘಟನೆಯ ಪಿನ್‌ ಟು ಪಿನ್‌ ಡಿಟೇಲ್ಸ್‌ ಇಲ್ಲಿದೆ

09:53 AM Sep 30, 2020 | Karthik A |

ಮಣಿಪಾಲ: ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮ ಮಾಡಿ ಸುಮಾರು 28 ವರ್ಷಗಳಾಗಿವೆ. ಇದನ್ನು ಕೆಡವಿದ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ಲಕ್ನೋದಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಪೂರ್ಣಗೊಳಿಸಿದೆ. ಇದೀಗ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಪ್ರಕರಣದ ತೀರ್ಪನ್ನು ಇಂದು ನೀಡಲಿದೆ.

Advertisement

ಈ ಮಸೀದಿಯನ್ನು ಕಡೆವಿದ ಪ್ರಕರಣದಲ್ಲಿ 32 ಆರೋಪಿಗಳಿದ್ದಾರೆ. ಮಾಜಿ ಉಪ ಪ್ರಧಾನಿ ಎಲ್‌.ಕೆ‌ .ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌, ಮುರಳಿ ಮನೋಹರ್‌ ಜೋಶಿ, ಉಮಾ ಭಾರತಿ, ವಿನಯ್‌ ಕಟಿಯಾರ್‌ ಮತ್ತು ಸಾಕ್ಷಿ ಮಹಾರಾಜ್‌ ಮತ್ತು ವಿಶ್ವ ಹಿಂದೂ ಪರಿಷತ್ತಿನ ಹಲವು ನಾಯಕರು ಸೇರಿದ್ದಾರೆ.

ಈ ಪ್ರಕರಣದ ವಿಚಾರಣೆ ಲಕ್ನೋದ ಹಳೆಯ ಹೈಕೋರ್ಟ್‌ ಕಟ್ಟಡದಲ್ಲಿರುವ ಅಯೋಧ್ಯ ಕೇಸ್‌ ಕೋರ್ಟ್‌ ರೂಂ ನಂ. 18ರಲ್ಲಿ ಕಳೆದ 28 ವರ್ಷಗಳಿಂದ ನಡೆಯುತ್ತಿದೆ. ಈ ಪ್ರಕರಣವನ್ನು ದಿನನಿತ್ಯದ ವಿಚಾರಣೆ ನಡೆಸಬೇಕು ಮತ್ತು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ 2017ರ ಎಪ್ರಿಲ್‌ 19ರಂದು ಆದೇಶಿಸಿತ್ತು. ಇದೀಗ ತೀರ್ಪಿನ ಸಮಯ ಬಂದಿದೆ.

ಅಂದು ಏನಾಗಿತ್ತು?
1992ರ ಡಿಸೆಂಬರ್‌ 6ರಂದು ಬಾಬರಿ ಮಸೀದಿಯ ವಿವಾದಿತ ರಚನೆಯನ್ನು ರಾಮ್‌ ಮಂದಿರಕ್ಕಾಗಿ ಭಾರೀ ಸಂಖ್ಯೆಯ ಕರಸೇವಕರ ನೆರವಿನೊಂದಿಗೆ ಕೆಡವಲಾಯಿತು. ವಿವಾದಿತ ಮಸೀದಿಯನ್ನು ಭಗವಾನ್‌ ಶ್ರೀರಾಮನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಕರಸೇವಕರ ವಾದವಾಗಿತ್ತು. ಮಸೀದಿ ಕೆಡವಿದ ಬಳಿಕ ದೇಶಾದ್ಯಂತ ಗಲಭೆಗಳು ಭುಗಿಲೆದ್ದವು. ಸರಕಾರದ ಅಂಕಿ-ಅಂಶಗಳ ಪ್ರಕಾರ ಈ ಗಲಭೆಗಳಲ್ಲಿ ಸುಮಾರು 1,800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ರಾಮ ಮಂದಿರದ ತೀರ್ಪು ಏನು?
ಇತ್ತೀಚೆಯಷ್ಟೇ ರಾಮ ಮಂದಿರದ ತೀರ್ಪು ಬಂದಿರುವುದು ನಮಗೆ ತಿಳಿದೇ ಇದೆ. ಆದರೆ 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದು ಭೂಮಿಯ ಮಾಲೀಕತ್ವದ ಬಗ್ಗೆ. ಅದರಲ್ಲಿ ನ್ಯಾಯಾಲಯವು ರಾಮ ಜನ್ಮಭೂಮಿ ದೇವಸ್ಥಾನದ ಪರವಾಗಿ ತೀರ್ಪು ನೀಡಿತ್ತು. ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಜನ್ಮಭೂಮಿ ದೇವಸ್ಥಾನದ ಭೂಮಿಪೂಜೆ ಮಾಡಿದ್ದಾರೆ. ಹೀಗಾಗಿ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಕೆಡವಿದ ಕ್ರಿಮಿನಲ್‌ ಪ್ರಕರಣ ಸಂಪೂರ್ಣ ಭಿನ್ನ.

Advertisement

2 ಎಫ್ಐಆರ್‌ ದಾಖಲಾಗಿದ್ದವು
1992ರ ಡಿಸೆಂಬರ್‌ 6ರಂದು, ಬಾಬರಿ ಮಸೀದಿಯನ್ನು ಕಡೆವಿದ ಹಿನ್ನೆಲೆಯಲ್ಲಿ ಪೊಲೀಸರು ಎರಡು ಎಫ್ಐಆರ್‌ಗಳನ್ನು ದಾಖಲಿಸಿದ್ದರು. ಮೊದಲ ಎಫ್ಐಆರ್‌-ಸಂಖ್ಯೆ 197/92 ಲಕ್ಷಾಂತರ ಅಪರಿಚಿತ ಕರ ಸೇವಕರ ವಿರುದ್ಧ ದಾಖಲಾಗಿದೆ.
ಎರಡನೇ ಎಫ್ಐಆರ್‌ – ಸಂಖ್ಯೆ 198/92 ಎಂಟು ಜನರ ವಿರುದ್ಧವಾಗಿತ್ತು. ಬಿಜೆಪಿ ನಾಯಕರಾಗಿದ್ದ ಅಡ್ವಾಣಿ, ಜೋಶಿ, ಉಮಾ ಭಾರತಿ ಮತ್ತು ವಿನಯ್‌ ಕಟಿಯಾರ್‌, ಜತೆಗೆ ವಿಎಚ್‌ಪಿಯ ಅಶೋಕ್‌ ಸಿನ್ಹಾಲ್‌ , ಗಿರಿರಾಜ್‌ ಕಿಶೋರ್‌, ವಿಷ್ಣು ಹರಿ ದಾಲ್ಮಿಯಾ ಮತ್ತು ಸಾಧ್ವಿ ರಿತಂಭರ ಅವರ ವಿರುದ್ಧ ದಾಖಲಾಗಿದೆ. ಅವರಲ್ಲಿ ಡಾಲ್ಮಿಯಾ, ಕಿಶೋರ್‌ ಮತ್ತು ಸಿಂಹಳ ನಿಧನ ಹೊಂದಿದ್ದಾರೆ. ಇನ್ನು ಬಾಬರಿ ಮಸೀದಿಯನ್ನು ಉರುಳಿಸಿದ ಬಳಿಕ ಪತ್ರಕರ್ತರ ಮೇಲೆ ನಡೆದ ದಾಳಿಗೆ ಸಂಬಂಧಿಸಿರುವ 47 ಎಫ್ಆರ್‌ಗಳನ್ನು ನೋಂದಾಯಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 32 ಜನರು ಆರೋಪಿಗಳಾಗಿದ್ದಾರೆ.

ಕ್ರಿಮಿನಲ್‌ ಪಿತೂರಿಯ ಆರೋಪ
ಸಿಬಿಐ 1993ರ ಅಕ್ಟೋಬರ್‌ 5 ರಂದು ಮೊದಲ ಚಾರ್ಜ್‌ಶೀಟ್‌ ಸಲ್ಲಿಸಿತು. ಇದರಲ್ಲಿ 40 ಜನರು ಆರೋಪಿಯಾಗಿದ್ದರು. ಇವರಲ್ಲಿ 8 ಮಂದಿ ಬಿಜೆಪಿ-ವಿಚ್‌ಪಿ ನಾಯಕರು ಸೇರಿದ್ದಾರೆ. ಎರಡು ವರ್ಷಗಳ ತನಿಖೆಯ ಅನಂತರ, 1996ರ ಜನವರಿ 10ರಂದು, ಸಿಬಿಐ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿತು. ಬಾಬರಿ ಮಸೀದಿಯನ್ನು ಕೆಡವಲು ಯೋಜಿತ ಪಿತೂರಿ ಕೆಲಸ ಮಾಡಿದೆ ಎಂದು ಆರೋಪಿಸಲಾಗಿತ್ತು. ಸಿಬಿಐ ಇನ್ನೂ 9 ಜನರ ಮೇಲೆ ಎಫ್ಐಆರ್‌ ದಾಖಲಿಸಿದೆ. ಕ್ರಿಮಿನಲ್‌ ಪಿತೂರಿ ಆರೋಪ ಅಂದರೆ ಆತನ ವಿರುದ್ಧ ಐಪಿಸಿಯ ಸೆಕ್ಷನ್‌ 120 (ಬಿ). ಇವರಲ್ಲಿ ಶಿವಸೇನೆ ನಾಯಕರಾದ ಬಾಲ್‌ ಠಾಕ್ರೆ ಮತ್ತು ಮೊರೇಶ್ವರ ಸಾವೆ ಸೇರಿದ್ದಾರೆ. 1997ರಲ್ಲಿ ಲಕ್ನೋ ಮ್ಯಾಜಿಸ್ಟ್ರೇಟ್‌ ಎಲ್ಲ 48 ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಲು ಆದೇಶಿಸಿತ್ತು. ಆದರೆ 34 ಆರೋಪಿಗಳು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಆರೋಪದ ಕುರಿತಂತೆ ತಡೆಯಾಜ್ಞೆಯನ್ನು ತಂದಿತ್ತು.

ವಿಚಾರಣೆ ವಿಳಂಬ ಯಾಕಾಯಿತು?
ಈ ಪ್ರಕರಣದ ಕುರಿತಂತೆ 4 ವರ್ಷಗಳು ಯಾವುದೇ ಬೆಳವಣಿಗೆಗಳು ಆಗಿರಲಿಲ್ಲ. ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಕಾರಣ ಪ್ರಕರಣ ಮುಂದುವರಿಯಲಿಲ್ಲ. 2001ರ ಫೆಬ್ರವರಿ 12ರಂದು, ಅಲಹಾಬಾದ್‌ ಹೈಕೋರ್ಟ್‌ ಅಡ್ವಾಣಿ, ಜೋಶಿ, ಉಮಾ, ಕಲ್ಯಾಣ್‌ ಸಿಂಗ್‌ ಮತ್ತು ಇತರರ ವಿರುದ್ಧದ ದಾಖಲಿಸಲಾಗಿದ್ದ ಕ್ರಿಮಿನಲ್‌ ಪಿತೂರಿಯನ್ನು ತೆಗೆದುಹಾಕುವಂತೆ ಆದೇಶಿಸಿತು. ಇದು ಪ್ರಕರಣವನ್ನು ದುರ್ಬಲಗೊಳಿಸಿತು.
ಆದರೆ ಮುಂದಿನ ಮೂರು ತಿಂಗಳಲ್ಲಿ 2001ರ ಮೇ 4ರಂದು, ಲಕ್ನೋ ವಿಶೇಷ ನ್ಯಾಯಾಲಯವು ಎಫ್ಐಆರ್‌ 197/92 ಮತ್ತು 198/92ಗಳನ್ನು ಪ್ರತ್ಯೇಕ ವಿಚಾರಣೆಗೆ ತೆಗೆದುಕೊಂಡಿತು. 21 ಆರೋಪಿಗಳ ವಿರುದ್ಧ ರಾಯಬರೇಲಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದಿತು.

ಕ್ರಿಮಿನಲ್‌ ಪಿತೂರಿಯ ಆರೋಪಗಳನ್ನು ಕೈಬಿಡುವ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಿಬಿಐ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ. ವಿಚಾರಣೆಯನ್ನು ಪುನರಾರಂಭಿಸಲು ಅಧಿಸೂಚನೆ ನೀಡುವಂತೆ ಜೂನ್‌ 16ರಂದು ಸಿಬಿಐ ಯುಪಿ ಸರಕಾರಕ್ಕೆ ಪತ್ರ ಬರೆದಿತ್ತು.

ಜುಲೈ 2003ರಲ್ಲಿ ಸಿಬಿಐ ಅಡ್ವಾಣಿ ವಿರುದ್ಧದ ಕ್ರಿಮಿನಲ್‌ ಪಿತೂರಿಯ ಆರೋಪವನ್ನು ಹಿಂತೆಗೆದುಕೊಂಡಿತು. ರಾಯಬರೇಲಿ ನ್ಯಾಯಾಲಯದಲ್ಲಿ ಹೊಸ ಚಾರ್ಜ್‌ ಶೀಟ್‌ ಸಲ್ಲಿಸಿತು. ಆದರೆ ಜುಲೈ 2005ರಲ್ಲಿ ಅಡ್ವಾಣಿಯ ವಿರುದ್ಧ “ದ್ವೇಷವನ್ನು ಹರಡುವ’ (spreading hatred) ಆರೋಪವನ್ನು ಹೈಕೋರ್ಟ್‌ ರೂಪಿಸಿತು. 2010ರ ವರೆಗೆ, ಎರಡೂ ಪ್ರಕರಣಗಳು ವಿಭಿನ್ನ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲ್ಪಟ್ಟವು.

2011ರಲ್ಲಿ ಸಿಬಿಐ ಅಂತಿಮವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಬಳಿಕ ರಾಯಬರೇಲಿಯ ವಿಚಾರಣೆಯನ್ನು ಲಖನೌಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಮುಂದಿನ ಏಳು ವರ್ಷಗಳ ವರೆಗೆ ಆರೋಪಗಳ ಕುರಿತು ನ್ಯಾಯಾಲಯಗಳಲ್ಲಿ ಪರಿಶೀಲನಾ ಅರ್ಜಿಗಳ ವಿಚಾರಣೆ ಮುಂದುವರಿಸಲಾಯಿತು. 2017ರ ಎಪ್ರಿಲ್‌19ರಂದು ಅಡ್ವಾಣಿ ಮತ್ತು ಇತರ ಆರೋಪಿಗಳ ಮೇಲೆ ಮತ್ತೆ ಕ್ರಿಮಿನಲ್‌ ಪಿತೂರಿ ಆರೋಪ ಹೊರಿಸಲಾಯಿತು.

ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿ ಏನು?
ಬಾಬ್ರಿ ರಚನೆಯನ್ನು ಕೆಡವಲು ಸಂಬಂಧಿಸಿದ ಪ್ರಕರಣದಲ್ಲಿ 30-40 ಸಾವಿರ ಸಾಕ್ಷಿಗಳಿದ್ದರು. ವಿಚಾರಣೆಯಲ್ಲಿ ಮೌಖೀಕ ಸಾಕ್ಷ್ಯವು ಮುಖ್ಯವಾಗಿತ್ತು. ಮೌಖೀಕ ಸಾಕ್ಷ್ಯಗಳು ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಸಿಬಿಐ 1,026 ಸಾಕ್ಷಿಗಳನ್ನು ತನಿಖೆಯ ಸಮಯದಲ್ಲಿ ಪಟ್ಟಿ ಮಾಡಿದೆ. ಇದು ಹೆಚ್ಚಾಗಿ ಪೊಲೀಸರು ಮತ್ತು ಪತ್ರಕರ್ತರಿಂದ ಸಂಗ್ರಹಿಸಿದ ಮಾತಿಯನ್ನು ಒಳಗೊಂಡಿತ್ತು.
ಕ್ರಿಮಿನಲ್‌ ಪಿತೂರಿಯ ಆರೋಪಗಳನ್ನು ಸಾಬೀತುಪಡಿಸಲು ಎಂಟು ಬಿಜೆಪಿ ಮತ್ತು ವಿಎಚ್‌ಪಿಯ ನಾಯಕರ ವಿರುದ್ಧ ಮೌಖೀಕ ಸಾಕ್ಷ್ಯಗಳಿವೆ. ಈ ಕಾರಣದಿಂದಾಗಿ ಹೆಚ್ಚಿನ ಸಾಕ್ಷಿಗಳನ್ನು ಸಂಗ್ರಹಿಸಲು ಸಿಬಿಐ ಹೆಚ್ಚುವರಿ ಪ್ರಯತ್ನಗಳನ್ನು ಮಾಡಿತ್ತು. 2010ರಿಂದ ಹಲವಾರು ಸಿಬಿಐ ತಂಡಗಳು ದೇಶಾದ್ಯಂತ ಪ್ರವಾಸ ಮಾಡಿ ಜನರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಕರೆಸಿಕೊಂಡಿವೆ. ಕೆಲವರನ್ನು ಇಂಗ್ಲೆಂಡ್‌ ಮತ್ತು ಮ್ಯಾನ್ಮಾರ್‌ನಿಂದ ಕರೆಸಿಕೊಳ್ಳಲಾಗಿತ್ತು. ಸಾವಿರಾರು ಜನರಲ್ಲಿ 351 ಸಾಕ್ಷಿಗಳು ಮಾತ್ರ ಹೇಳಿಕೆ ಬಯಸಿ ನ್ಯಾಯಾಲಯಕ್ಕೆ ನೆರವಾಗಿದ್ದರು.

ಏನೆಲ್ಲಾ ಸಾಕ್ಷ್ಯಗಳಿವೆ ಗೊತ್ತಾ?
ಮೌಖೀಕ ಸಾಕ್ಷ್ಯಗಳ ಸಾಲಿನಲ್ಲಿ ಈ ನಾಯಕರು ಮಾಡಿದ ಭಾಷಣಗಳನ್ನು ಸೇರಿಸಲಾಗಿದೆ. 1990ರಲ್ಲಿ ಎಲ್‌ಕೆ ಅಡ್ವಾಣಿ ರಥಯಾತ್ರೆ ಪ್ರಾರಂಭಿಸಿದಾಗ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದ ಕುರಿತಾಗಿ ಆ ಸಮಯದಲ್ಲಿ ಮಾಡಿದ ಹೇಳಿಕೆಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಯಿತು. ರಚನೆಯನ್ನು ನೆಲಸಮಗೊಳಿಸುವ ಕಲ್ಪನೆಯು 1990ರ ದಶಕದಲ್ಲಿ ರೂಪಿಸಲಾಗಿತ್ತು ಎಂಬುದಕ್ಕೆ ಪ್ರಬಲ ಸಾಕ್ಷಿ ತೊರೆತಿದ್ದ ಕಾರಣ ಇದನ್ನು ಪಿತೂರಿ ಎಂದು ಪರಿಗಣಿಸಲಾಗಿದೆ.

ಇನ್ನು ಈ ಪ್ರಕರಣ ಕುರಿತಂತೆ ಸಾಕ್ಷ್ಯಚಿತ್ರಗಳೂ ಪ್ರಮುಖ ಪಾತ್ರವಹಿಸುತ್ತವೆ. ಇದು ಘಟನೆಯ ಸುದ್ದಿ ವರದಿಗಳನ್ನು ಒಳಗೊಂಡಿದೆ. 1992ರ ಡಿಸೆಂಬರ್‌ 6ರಂದು ತೆಗೆದ ಛಾಯಾಚಿತ್ರಗಳು ಮತ್ತು ವೀಡಿಯೋಗಳು ಇದರಲ್ಲಿ ಸೇರಿವೆ. ವಿವಿಧ ಚಾನೆಲ್‌ಗ‌ಳು 100 ಯು-ಮ್ಯಾಟಿಕ್‌ ವೀಡಿಯೋ ಕ್ಯಾಸೆಟ್‌ಗಳನ್ನು ಹಸ್ತಾಂತರಿಸಿದ್ದವು.

ಪ್ರಕರಣದ ತೀರ್ಪು ಏನಾಗಬಹುದು?
2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ರಾಮ ಮಂದಿರ ಕುರಿತಂತೆ ನೀಡಿದ ತೀರ್ಪಿನ ಸಂದರ್ಭ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಿದ್ದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ಈ ಹೇಳಿಕೆಯು  ಪ್ರಕರಣದಲ್ಲಿ ಏನಾದರೂ ಪರಿಣಾಮ ಬೀರುತ್ತಾ ಎಂಬುದನ್ನು ಕಾದುನೋಡಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next