“ನಮ್ಮ ಮೊದಲ ಭೇಟಿಯಾದದ್ದೂ ಇದೇ ಸ್ಥಳ. ಕೊನೆಯ ಭೇಟಿಯೂ ಇಲ್ಲಿಯೇ’ ಅನ್ನುವಷ್ಟರಲ್ಲಿ ಕಣ್ಣೀರು ಧಾರೆಯಾಗಿ ಸುರಿಯಿತು. ಚಿಕ್ಕ ಮಗುವಿನಂತೆ ನೀ ಬಿಕ್ಕುತ್ತಿರುವುದನ್ನು ನೋಡಿ, ನನ್ನ ಕಣ್ಣಲ್ಲೂ ನೀರು. ಇಬ್ಬರೂ ಒಟ್ಟಿಗೇ ಕಳೆದ ಸುಂದರ ಕ್ಷಣಗಳು ಒಮ್ಮೆ ಕಣ್ಣ ಮುಂದೆ ಹಾದು ಹೋದವು.
ಪದವಿ ಜೀವನದ ಕೊನೆಯ ದಿನವದು. “ಮನಸ್ಸಿಗೆ ತುಂಬಾ ಹತ್ತಿರವಾದವಳು, ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಟ್ಟವಳು ಇವತ್ತು ದೂರವಾದರೆ, ಮುಂದೆಂದೂ ನಿಂಗೆ ಸಿಗೋದಿಲ್ಲ’ ಅನ್ನೋ ಹೃದಯದ ಕೂಗು ಕ್ಷಣಕ್ಷಣಕ್ಕೂ ಜೋರಾಗುತ್ತಿತ್ತು. ಕೊನೆಯದಾಗಿ ನಿನ್ನನ್ನೊಮ್ಮೆ ಭೇಟಿಯಾಗಲು ನಿರ್ಧರಿಸಿದೆ.
ಕಾಲೇಜಿನಿಂದ ಬಸ್‌ಸ್ಟಾಂಡ್‌ವರೆಗೆ ಎಂದಿನಂತೆ ಇಬ್ಬರೂ ಒಟ್ಟಿಗೇ ಹೆಜ್ಜೆ ಹಾಕಿದೆವು. ಯಾವತ್ತೂ, ಬಸ್ ಹೊರಡೋವರೆಗೂ ವಟವಟಾಂತ ಮಾತಾಡುತ್ತಿದ್ದ ನಿನ್ನನ್ನು ಅವತ್ತು ಮೌನದ ಭೂತ ಆವರಿಸಿತ್ತು. ದಾರಿಯುದ್ದಕ್ಕೂ ಬರೀ ಮೌನ, ಮೌನ, ಮೌನ. ಹಾದಿಯಲ್ಲಿ ಸಂಚರಿಸುವ ವಾಹನಗಳ ಸದ್ದು, ನಿನ್ನ ಕಾಲ್ಗೆಜ್ಜೆಯ ನಾದದ ಮುಂದೆ ಅವಮಾನಕರವಾಗಿ ಸೋಲುತ್ತಿದ್ದವು. ಹೊರಪ್ರಪಂಚದ ಎಲ್ಲ ಗಜಿಬಿಜಿ ಸದ್ದುಗಳನ್ನು ಮೀರಿ, ನನ್ನ ಕಿವಿಗೆ ಬರೀ ನಿನ್ನ ಕಾಲ್ಗೆಜ್ಜೆಯ ನಾದ ಕೇಳಿಸುತ್ತಿತ್ತು.
ನಿಂಗೆ ನೆನಪಿದ್ಯಾ, ನೀನೊಮ್ಮೆ ನಡೆದರೆ ಸಾಕು, ಇಡೀ ಕ್ಲಾಸು ಸೈಲೆಂಟಾಗಿ ಬಿಡೋದು. ಯಾಕಂದ್ರೆ, ಆ ಗೆಜ್ಜೆ ನಿನ್ನ ಅಸ್ತಿತ್ವಕ್ಕೊಂದು ಹೊಸ ಲಯ, ಮೆರಗು ನೀಡಿತ್ತು. ಆ ಗೆಜ್ಜೆ ನಾದದ ಸದ್ದಿಗಾಗಿ ಇಡೀ ಕ್ಲಾಸು ಕಾಯುತ್ತಿತ್ತು. ಅಂಥದ್ದರಲ್ಲಿ ನಾನೊಬ್ಬ ಯಾವ ಲೆಕ್ಕ ಹೇಳು?
ಅವತ್ತು ದಾರಿಯುದ್ದಕ್ಕೂ ಬಿಟ್ಟೂ ಬಿಡದೇ ಆವರಿಸಿದ್ದ ಮೌನದಲ್ಲಿಯೇ ಬಸ್ ನಿಲ್ದಾಣ ತಲುಪಿದೆವು. ಮೌನ ಮುರಿದ ನೀನು- “ನಮ್ಮ ಮೊದಲ ಭೇಟಿಯಾದದ್ದೂ ಇದೇ ಸ್ಥಳ. ಕೊನೆಯ ಭೇಟಿಯೂ ಇಲ್ಲಿಯೇ’ ಅನ್ನುವಷ್ಟರಲ್ಲಿ ಕಣ್ಣೀರು ಧಾರೆಯಾಗಿ ಸುರಿಯಿತು. ಚಿಕ್ಕ ಮಗುವಿನಂತೆ ನೀ ಬಿಕ್ಕುತ್ತಿರುವುದನ್ನು ನೋಡಿ, ನನ್ನ ಕಣ್ಣಲ್ಲೂ ನೀರು. ಇಬ್ಬರೂ ಒಟ್ಟಿಗೇ ಕಳೆದ ಸುಂದರ ಕ್ಷಣಗಳು ಒಮ್ಮೆ ಕಣ್ಣ ಮುಂದೆ ಹಾದು ಹೋದವು. ಕಣ್ಣೊರೆಸಿಕೊಂಡು, ಕೈ ಕುಲುಕಿ “ಆಲ್ ದಿ ಬೆಸ್ಟ್’ ಅನ್ನುವಷ್ಟರಲ್ಲಿ, ನಿನ್ನೂರಿನ ಬಸ್ಸು ಬಂದಿತ್ತು.
ಬಸ್ಸನ್ನೇರಿ ಕುಳಿತು, ಕಿಟಿಕಿಯಿಂದ ಇಣುಕಿ ನನ್ನತ್ತ ನೋಡಿದೆಯಲ್ಲ; ಬೇಟೆಗಾರ ಬಿಲ್ಲು ಹಿಡಿದು ಗುರಿಯಿಟ್ಟು ಜಿಂಕೆಗೆ ಹೊಡೆದಂತೆ, ನಿನ್ನ ಕಣ್ಣೋಟದಿಂದ ಹೃದಯಕ್ಕಾದ ಗಾಯ ಇಂದಿಗೂ ಮಾಸಿಲ್ಲ. ಆ ನೋವಿಗೆ ಯಾವ ಔಷಧವೂ ಇಲ್ಲ, ನಿನ್ನ ಪ್ರೀತಿಯೊಂದನ್ನು ಬಿಟ್ಟು. ಔಷಧ ನೀಡಿ, ನನ್ನ ಜೀವ ಉಳಿಸುವೆಯಾ ಹುಡುಗಿ?
ಇಂತಿ ನಿನ್ನ ಪೆದ್ದು ಹುಡುಗ
ಪೋತರಾಜು