Advertisement

ಗಾಸಿಪ್‌ ನಿಂತ ಮೇಲೆ ಎಲ್ಲವೂ ಶಾಂತ

06:02 PM Jun 25, 2019 | mahesh |

ಇಪ್ಪತ್ತೈದು ವರುಷದ ಸೀಮಾಗೆ ರಾತ್ರಿ ನಿದ್ದೆ ಹತ್ತುವುದಿಲ್ಲ. ತಲೆಯ ಹಿಂಭಾಗದಲ್ಲಿ ಮಂಜುಗಟ್ಟಿದ ಅನುಭವ. ಎದೆಯಲ್ಲಿ ಸಣ್ಣದಾಗಿ ಕಂಪನ. ಓಡಾಡಲು ಆಗದಂತೆ ಒಮ್ಮೊಮ್ಮೆ ಕೈ ಕಾಲು ಸೆಟೆದುಕೊಳ್ಳುತ್ತಿತ್ತು. ಹಾಗೆಯೇ ಅವಳಲ್ಲಿ ಅವ್ಯಕ್ತ ಭಯ ಮತ್ತು ಚಡಪಡಿಕೆ ಮನೆಮಾಡಿತ್ತು. ನರರೋಗ ವೈದ್ಯರಲ್ಲಿ ಚಿಕಿತ್ಸೆ ನಡೆದಿತ್ತು. ಆದರೂ ತಲೆನೋವು ತಡೆದುಕೊಳ್ಳಲಾರದೇ ಮತ್ತೆ ಮತ್ತೆ ವೈದ್ಯರಲ್ಲಿ ಸಮಾಲೋಚನೆಗೆ ಹೋದಾಗ, ವೈದ್ಯರು, ಅವಳ ಖಾಸಗಿ ಬದುಕಿನ ಮುಕ್ತ ಸಮಾಲೋಚನೆಗಾಗಿ ನನ್ನ ಬಳಿ ಕಳಿಸಿದ್ದರು.

Advertisement

ಓದು ಮುಗಿದ ಮೇಲೆ ಒಳ್ಳೆಯ ಕೆಲಸ ಸಿಕ್ಕಿ ಸೀಮಾ ಬೇರೆ ಊರಿನಲ್ಲಿ ಒಬ್ಬಳೆ ಇದ್ದಾಳೆ. ತಂದೆ, ತಮ್ಮ ಮತ್ತು ತಂಗಿಯ ಬಗ್ಗೆ ಕಾಳಜಿ. ಮಲತಾಯಿಯ ಬಗ್ಗೆ ಸಿಟ್ಟು. ಮಲತಾಯಿ ಕುಟುಂಬದ ಬಗ್ಗೆ ನಿಗಾ ವಹಿಸುವುದಿಲ್ಲ ಎಂದು ಸೀಮಾಳ ಆರೋಪ. ತಂದೆಯ ಮೇಲೆ ಅನುಕಂಪ. ಮಲತಾಯಿಯ ಹಿಡಿತಕ್ಕೆ ತಂದೆ ಸಿಕ್ಕಿ, “ಅಸಹಾಯತೆಯಲ್ಲಿದ್ದ ಅಮಾಯಕ ಎಂದು ನೋವು. ತನ್ನ ಅನುಪಸ್ಥಿತಿಯಿಂದ ಮನೆ ಹತೋಟಿ ತಪ್ಪಿದೆ’ ಎಂಬ ಚಿಂತೆ. ಊರಿನ ವಿಚಾರವನ್ನು ತಿಳಿದುಕೊಳ್ಳಲು ಆಗಾಗ್ಗೆ ತಂದೆ, ತಮ್ಮ ಮತ್ತು ತಂಗಿಗೆ ಫೋನ್‌ ಹಚ್ಚುತ್ತಾಳೆ.

ಸೀಮಾಳ ತಾಯಿ ಆತ್ಮಹತ್ಯೆ ಮಾಡಿಕೊಂಡಾಗ, ಹನ್ನೆರಡು ವರ್ಷದ ಸೀಮಾ, ಒಂಭತ್ತು ವಯಸ್ಸಿನ ತಮ್ಮನ ಪೋಷಣೆಗೈದಳು. ಅಕ್ಕರೆಯ ಪುಟ್ಟಕ್ಕ ತಮ್ಮನ ಓದಿಗೆ ನೆರವಾಗುವಳು. ಆಟವಾಡಿಸಿಕೊಳ್ಳುವಳು. ಸೀಮಾಗೆ ಹದಿನೈದು ವರ್ಷವಾದಾಗ ತಂದೆ, ಹೆಣ್ಣುಮಗುವಿದ್ದ ವಿಧವೆಯೊಬ್ಬರನ್ನು ಮರುಮದುವೆಯಾದರು. ಮಲತಾಯಿಯ ಜೊತೆಗೆ ಬಂದ ತಂಗಿಯನ್ನು ಸ್ವೀಕರಿಸಿದರೂ, ಸೀಮಾ ಮಲತಾಯಿಗೆ ಹೊಂದಿಕೊಳ್ಳಲೇ ಇಲ್ಲ. ಮನೆಕೆಲಸವನ್ನು ಎಷ್ಟು ಮಾಡಲು ಸಾಧ್ಯವಾಗುತ್ತದೋ ಅಷ್ಟು ಮಾಡಿ ನಂತರ ಕಾಲೇಜಿಗೆ ಹೋಗುತ್ತಿದ್ದಳು. ವಯಸ್ಸಿಗೆ ಮೀರಿದ ಜವಾಬ್ದಾರಿಯನ್ನು ಅಗತ್ಯವಿಲ್ಲದೇ ಹೊತ್ತ ಸೀಮಾ, ಹುತಾತ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾಳೆ. ಇದನ್ನು “ಸಿಂಡ್ರೆಲ್ಲಾ ಸಿಂಡ್ರೋಂ’ ಎಂದು ಗುರುತಿಸಬಹುದು. ಮಲತಾಯಿಯನ್ನು ದೂಷಿಸುವುದು ರೂಢಿಯಾಯಿತು.

ಹನ್ನೆರಡು ವರ್ಷಗಳಿಂದ ಸೀಮಾ ಹೊತ್ತ ಜವಾಬ್ದಾರಿಯ ಅಗತ್ಯತೆಯ ಬಗ್ಗೆ ಚರ್ಚೆ ನಡೆಸಿದೆ. ಆ ಅನುಭವದ ಬಗ್ಗೆ ಹೆಮ್ಮೆಮೂಡಿಸಿ, ಹುತಾತ್ಮ ಭಾವನೆಯನ್ನು ಹೊರತುಪಡಿಸಿದೆ. ಜವಾಬ್ದಾರಿ ಅಧಿಕಾರದ ಸಂಕೇತವಲ್ಲ. ಗತ್ಯಂತರವಿಲ್ಲದೆ ಹಸ್ತಾಂತರಿಸಲೇಬೇಕು ಎಂಬ ಅರಿವು ಮೂಡಿತು. ಮನೆಯಿಂದ ಸೀಮಾ ದೂರವಿದ್ದಳೇ ಹೊರತು ಕುಟುಂಬದವರ ಮನಸ್ಸಿನಲ್ಲಿ ಗೌರವ ಇದ್ದುದ್ದನ್ನು ಮನಗಂಡಳು. ಅವಳ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯನ್ನು ಸದಾ ಹೆದರಿಸುತ್ತಿದ್ದುದರಿಂದ ಅವಳಿಗೆ ತಂದೆಯ ಅಸಹಾಯಕತೆಯ ಮೇಲೆ ಅನುಕಂಪ ಹುಟ್ಟಿತ್ತೇ ಹೊರತು, ಮಲತಾಯಿಯ ಆಗಮನದಿಂದಲ್ಲ. ಮಲತಾಯಿ ಕೆಟ್ಟವಳಲ್ಲ. ಮಲತಾಯಿಗೆ ಹೊಂದಿಕೊಳ್ಳದಿದ್ದರೆ ಬೇಡ, ಮಾನಸಿಕವಾಗಿ ತಂದೆಯ ಮಡದಿಯಾಗಿ ಸ್ವೀಕರಿಸುವುದು ಅಗತ್ಯ. ಗಾಸಿಪ್‌ ಮಾಡುವ ದೂರವಾಣಿ ಕರೆಗಳನ್ನು ನಿಲ್ಲಿಸಿದಳು. ಮನೆಯಲ್ಲಿನ ಸಣ್ಣಪುಟ್ಟ ಜಗಳಗಳಿಗೆ ಸ್ಪಂದಿಸುವುದು ಕಡಿಮೆಯಾಗಿ ನೆಮ್ಮದಿ ಒಲಿಯಿತು. ರೋಗ ಮಾಯವಾಯಿತು. ಜೀವನ ಅರ್ಥ ಮನದಟ್ಟಾದರೆ ಬಾಳು ಹಸನು.

– ಡಾ. ಶುಭಾ ಮಧುಸೂದನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next