ಯಾವುದೇ ಕಾರ್ಯವಾಗಲಿ ಅದನ್ನು ಮಾಡಲು ಒಬ್ಬ ಕತೃ ಅಂಥ ಇದ್ದೇ ಇರುತ್ತಾನೆ. ಮಾಡಿರುವ ಎಲ್ಲ ಪಾಪ-ಪುಣ್ಯ ಕಾರ್ಯಗಳಿಗೆ ಆತನೆ ಹೊಣೆಗಾರನಾಗುತ್ತಾನೆ. ಒಳ್ಳೆಯದು ಮಾಡಿದರೆ, ಒಳ್ಳೆಯದಾಗುತ್ತದೆ. ಕೆಟ್ಟದ್ದು ಮಾಡಿದರೆ ಕೆಟ್ಟದಾಗುತ್ತದೆ. ಒಟ್ಟಿನಲ್ಲಿ ಎಲ್ಲವೂ ನಾವು ಏನು ಮಾಡುತ್ತೇವೋ, ಅದರ ಪ್ರತಿಫಲವಾಗಿರುತ್ತದೆ. ಒಳ್ಳೆಯ “ಕೃಥ’ ಇದ್ದಾಗ ಅಲ್ಲೊಂದು ಒಳ್ಳೆಯ “ಕೃತಿ’ ಆಗುತ್ತದೆ. ಈಗ ಯಾಕೆ ಈ “ಕೃಥ’, “ಕೃತಿ’ಯ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಇದೇ ವಿಷಯವನ್ನು ಇಟ್ಟುಕೊಂಡು ಹೊಸಬರ ತಂಡ “ಕೃಥ’ ಎನ್ನುವ ಚಿತ್ರವನ್ನು ತೆರೆಮೇಲೆ ತರಲು ಹೊರಟಿದೆ.
ಸದ್ದಿಲ್ಲದೆ ತನ್ನ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಕೃಥ’ ಚಿತ್ರತಂಡ, ಇತ್ತೀಚೆಗೆ ತನ್ನ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಗೊಳಿಸುವ ಮೂಲಕ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ. ನವ ನಿರ್ದೇಶಕ ಉಪ್ಪರಿ ರಮೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನವ ಪ್ರತಿಭೆ ವಿಜಯೇಂದ್ರ (ಕುಟ್ಟ) “ಕೃಥ’ ಚಿತ್ರದ ಮೂಲಕ ನಾಯಕ ನಟನಾಗಿ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ. ಜೊತೆಗೆ “ವಿ.ಕೆ ಗ್ರೂಫ್Õ’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣದ ಹೊಣೆಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ಮೇಘನಾ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ಮಾಪಕ ವಿಜಯೇಂದ್ರ, “ಪ್ರತಿಯೊಬ್ಬ ವ್ಯಕ್ತಿಯೂ ತಾನು ಮಾಡಿದ ಕರ್ಮಫಲಗಳಿಗೆ ತಾನೇ ಹೊಣೆಗಾರನಾಗಿರುತ್ತಾನೆ. ಇದೇ ಎಳೆಯನ್ನ ಇಟ್ಟುಕೊಂಡು “ಕೃಥ’ ಚಿತ್ರವನ್ನು ಮಾಡಿದ್ದೇವೆ. “ಕೃಥ’ ಅಂದ್ರೆ ಕೃತ್ಯವನ್ನು, ಕಾರ್ಯವನ್ನು ಮಾಡಿದವನು ಅಂಥ ಅರ್ಥ. ನಮ್ಮ ಚಿತ್ರದಲ್ಲಿ ನಾಯಕ, ನಾಯಕಿ ಸೇರಿದಂತೆ ಯಾರ್ಯಾರು ಏನೇನು “ಕೃಥ’ ಮಾಡುತ್ತಾರೆ. ಅದರ ಫಲಗಳೇನು ಅನ್ನೋದೆ ಚಿತ್ರದ ಕಥೆ. ಇದರಲ್ಲಿ ಒಂದೊಳ್ಳೆ ಮನರಂಜನೆ ಇದೆ. ಲವ್, ಸೆಂಟಿಮೆಂಟ್, ಆ್ಯಕ್ಷನ್, ಒಳ್ಳೆಯ ಸಾಂಗ್ಸ್ ಹೀಗೆ.., ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಇದರಲ್ಲಿದೆ. ಜೊತೆಗೊಂದು ಸಂದೇಶ ಕೂಡ ಇದೆ. ಇಡೀ ಕುಟುಂಬ ಕುಳಿತು ಎಂಜಾಯ್ ಮಾಡುವಂಥ ಚಿತ್ರ ಮಾಡಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.
ಚಿತ್ರರಂಗದಲ್ಲಿ ನಿರ್ದೇಶಕನಾಗಬೇಕು ಎಂಬ ಕನಸನ್ನು ಹೊತ್ತು ಗಾಂಧಿನಗರಕ್ಕೆ ಬಂದ ಉಪ್ಪರಿ ರಮೇಶ್ ಅವರ ಕನಸು “ಕೃಥ’ ಚಿತ್ರದ ಮೂಲಕ ನನಸಾಗುತ್ತಿದೆಯಂತೆ. “ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಮಾಡಬೇಕು ಅನ್ನೋದು ನನ್ನ ಅನೇಕ ವರ್ಷಗಳ ಕನಸು. ಆ ಕನಸು ಈ ಚಿತ್ರದಲ್ಲಿ ನನಸಾಗುತ್ತಿದೆ. ಇಂದಿನ ಪ್ರೇಕ್ಷಕರು ಬಯಸುವಂಥ ಎಲ್ಲಾ ಅಂಶಗಳನ್ನೂ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಮೊದಲ ಚಿತ್ರ ಒಂದೊಳ್ಳೆ ಅನುಭವ ನೀಡಿದೆ. ಪ್ರೇಕ್ಷಕರಿಗೂ ಇಷ್ಟವಾಗುವುದೆಂಬ ಭರವಸೆ ಇದೆ’ ಎಂಬ ವಿಶ್ವಾಸ ಮಾತುಗಳನ್ನಾಡುತ್ತಾರೆ.
ಇನ್ನು “ಕೃಥ’ ಚಿತ್ರಕ್ಕೆ ಮಂಜು ಚರಣ್ ಸಾಹಿತ್ಯ ಮತ್ತು ಸಂಗೀತವಿದೆ. ಚಿತ್ರಕ್ಕೆ ಮಹಾದೇವ ಛಾಯಾಗ್ರಹಣ, ಶ್ರೀನಿವಾಸ ಕಲಾಲ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಹಾಡುಗಳು ಮತ್ತು ಟ್ರೇಲರ್ ಮೂಲಕ ಹೊರಬಂದಿರುವ “ಕೃಥ’ ಇದೇ ಡಿಸೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.