ಮಡಿಕೇರಿ: ಕುಟ್ಟ ಕೊಡವ ಸಮಾಜದ ವತಿಯಿಂದ 7ನೇ ವರ್ಷದ ಕಕ್ಕಡ ನಮ್ಮೆ ಸಂಭ್ರಮದಿಂದ ಜರಗಿತು. ಕುಟ್ಟ ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಹಾಗೂ ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.
ವಿಶಿಷ್ಟವಾದ ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸರ್ವರೂ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯ ಅಪ್ಪನೆರವಂಡ ಡಾ| ಸೋನಿಯಾ ಮಂದಪ್ಪ ಪಶ್ಚಿಮಘಟ್ಟ ಪ್ರದೇಶದಲ್ಲಿ ಸಿಗುವ ಔಷಧೀಯ ಗುಣದ ಸಸ್ಯರಾಶಿಯಿಂದ ಮಾನವಕುಲ ಮತ್ತು ಪ್ರಾಣಿ ಸಂಕುಲಕ್ಕೆ ಆಗುತ್ತಿರುವ ಆರೋಗ್ಯ ಲಾಭದ ಕುರಿತು ವಿವರಿಸಿದರು.
ಪ್ರತಿಯೊಬ್ಬ ಕೊಡವರು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಕೊಡಗಿನ ನೆಲ, ಜಲ, ಪರಿಸರ ಹಾಗೂ ಕೊಡವ ಆಚಾರ, ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಪ್ರತಿಯೊಬ್ಬರೂ ಹಿರಿಯನ್ನು ಗೌರವಿಸಬೇಕು ಮತ್ತು ಕಿರಿಯರನ್ನು ಪ್ರೀತಿಸಬೇಕೆಂದು ಕಿವಿಮಾತು ಹೇಳಿದರು.
ಕಕ್ಕಡ 18ರ ಸಂದರ್ಭ ಸೇವಿಸುವ ವಿವಿಧ ಖಾದ್ಯಗಳು ದೇಹದ ಮೇಲೆ ಬೀರುವ ಉತ್ತಮ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಸಮಾಜದ ಪ್ರಮುಖರಾದ ತೀತಿರ ರೆಹನ ಕಾರ್ಯಪ್ಪ, ಕಳ್ಳಿಚಂಡ ಕವಿತಾಉತ್ತಪ್ಪ, ಮುಕ್ಕಾಟ್ಟೀರ ಕಾವೇರಿ ಸೋಮಣ್ಣ, ಮಚ್ಚಮಾಡ ಪದ್ಮ ಸೋಮಯ್ಯ, ಪಾಲೆಕಂಡ ಅನಿತಾ ಅಯ್ಯಣ್ಣ, ಮನೋಜ್ ಮಂದಣ್ಣ, ರಾಣಿ ಮೋಹನ್ ಹಾಗೂ ಎಲ್ಲ ಪದಾಧಿಕಾರಿಗಳು, ಕುಟ್ಟ ಕೊಡವ ಸಮಾಜದ ಅಧೀನದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೇಚಮಾಡ ಬೀನಾಉತ್ತಪ್ಪ ಪ್ರಾರ್ಥಿಸಿದರು, ಖಜಾಂಚಿ ಮಚ್ಚಮಾಡ ಸುಬ್ರಮಣಿ ನಿರೂಪಿಸಿ, ವಂದಿಸಿದರು.