Advertisement

ಎಲ್ಲರೂ ರಂಗಭೂಮಿ ಕಲೆ ಉಳಿಸಿ, ಬೆಳೆಸಿ; ರಾಘವೇಂದ್ರ ರಾಜಕುಮಾರ್‌

05:51 PM Nov 04, 2022 | Nagendra Trasi |

ಚಾಮರಾಜನಗರ: ರಂಗಭೂಮಿ ಹಿನ್ನೆಲೆಯಿಂದ ಬಂದ ನಮ್ಮ ಕುಟುಂಬಕ್ಕೆ ನಾಟಕ ಎಂದರೆ ಪಂಚ ಪ್ರಾಣ. ನಮ್ಮ ತಾತ ಹಾಗೂ ಅಪ್ಪಾಜಿಯವರು ನಾಟಕಗಳಲ್ಲಿ ಅಭಿನಯಿಸಿಕೊಂಡು ಬಂದವರು. ರಂಗಭೂಮಿ ಕಲೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಡಾ. ರಾಜಕುಮಾರ್‌ ಕಲಾಮಂದಿರದಲ್ಲಿ ಶ್ರೀ ಸಿದ್ದಮಲ್ಲೇಶ್ವರ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್‌ ರಾಜಕುಮಾರ್‌ ರವರ ಸ್ಮರಣಾರ್ಥ ಗುರುವಾರ ನಡೆದ ದಕ್ಷಯಜ್ಞ ನಾಟಕ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಪ್ಪಾಜಿ ರಂಗಭೂಮಿ ಕಲಾವಿದರು: ನಮ್ಮ ಅಪ್ಪಾಜಿ ಡಾ.ರಾಜಕುಮಾರ್‌ ರಂಗಭೂಮಿ ಕಲಾವಿದರು. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರ ನಟನೆಯನ್ನು ನೋಡಿ ಬೆಳೆದವರು. ಮೈಸೂರು ಮಹಾರಾಜರು ನಾಟಕ ವೀಕ್ಷಣೆ ಮಾಡುತ್ತಿದ್ದಾಗ ಯಮನ ಪಾತ್ರವನ್ನು ಮಾಡಿದ್ದ ನಮ್ಮ ತಾತ ವೇದಿಕೆಗೆ ಬರುತ್ತಿದ್ದಂತೆ ಎಮ್ಮೆ ಅವರ ರೌದ್ರಾವತಾರ ನೋಡಿ ಓಡಿ ಹೋಗಿತ್ತಂತೆ. ಇದನ್ನು ನೋಡಿ ಮಹಾರಾಜರು ಬಹಳ ಸಮಯ ನಕ್ಕರಂತೆ.

ಮಯೂರ ಪಾತ್ರದಲ್ಲಿ ನೀವು ರಾಜರಂತೆ ಕಾಣುತ್ತಿದ್ದೀರಿ ಅಂತ ಹೇಳಿದರೆ, ಅಪ್ಪಾಜಿ ಅದನ್ನು ಒಪ್ಪುತ್ತಿರಲಿಲ್ಲ. ವರದಾಚಾರ್ಯರು ರಾಜನ ಪಾತ್ರ ಮಾಡಿದರೆ, ಸ್ವತಃ ಮಹಾರಾಜರೇ ಬೆರಗಾಗುತ್ತಿದ್ದರಂತೆ. ಅಂಥವರ ಮುಂದೆ ನಾನೇನೂ ಅಲ್ಲ ಅಂತ ಅಪ್ಪಾಜಿ ಹೇಳುತ್ತಿದ್ದರು ಎಂದು ರಾಘವೇಂದ್ರ ಸ್ಮರಿಸಿದರು.

ಕಲಾವಿದರನ್ನು ಪ್ರೋತ್ಸಾಹಿಸಿ: ಅಪ್ಪಾಜಿಯವರು ಹಿರಣ್ಯಕಶಿಪು ಪಾತ್ರದಲ್ಲಿ ಅಷ್ಟು ಚೆನ್ನಾಗಿ ನಟಿಸಿದ್ದರೂ, ಅನೇಕ ಹಿರಿಯ ರಂಗಭೂಮಿ ಕಲಾವಿದರಷ್ಟು ನಟನೆ ನನಗೆ ಬರಲಿಲ್ಲ ಎಂದು ಹೇಳುತ್ತಿದ್ದರು. ಇಂಥ ತಾಕತ್ತು ರಂಗಭೂಮಿ ಕಲೆಗೆ ಇದೆ. ಚಾಮರಾಜನಗರ ಜಿಲ್ಲೆಯ ರಂಗಭೂಮಿ ಕಲಾವಿದರ ಬೀಡು. ಬಹಳಷ್ಟು ಹಿರಿಯ ಕಲಾವಿದರು ಇಲ್ಲಿ ಕುಳಿದ್ದೀರಿ. ನಾಟಕವನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

Advertisement

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ಕಲೆಗಳ ತವರೂರು. ಅದೇ ರೀತಿ ನಾಟಕ ಕಲೆಗೂ ಹೆಚ್ಚು ಪ್ರಸಿದ್ಧಿಯಾಗಿದೆ ಎಂದರು. ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರಾಘವೇಂದ್ರ ರಾಜಕುಮಾರ್‌, ಮಂಗಳಾ ರಾಘವೇಂದ್ರ ರಾಜಕುಮಾರ್‌ ಅವರಿಗೆ ಬಸವೇಶ್ವರ ವಿಗ್ರಹ ನೀಡಿ ಸನ್ಮಾನಿಸಲಾಯಿತು. ಸಿದ್ದಮಲ್ಲೇಶ್ವರ ಕಲಾ ಬಳಗ ಅಧ್ಯಕ್ಷ ಎನ್‌.ಆರ್‌ .ಪುರುಷೋತ್ತಮ್‌, ಕಾರ್ಯದರ್ಶಿ ಬಸವರಾಜು, ಹಿರಿಯ ಕಲಾವಿದೆ ಪಂಕಜಾ ರವಿಶಂಕರ್‌, ಚಾಮುಲ್‌ ಅಧ್ಯಕ್ಷ ನಾಗೇಂದ್ರ, ನಿರ್ದೇಶಕರಾದ ಎಚ್‌.ಎಸ್‌.ಬಸವರಾಜು, ಸದಾಶಿವಮೂರ್ತಿ, ನಗರಸಭಾ ಸದಸ್ಯರಾದ ಮಮತಾ ಬಾಲಸುಬ್ರಹ್ಮಣ್ಯ, ರಾಜಪ್ಪ, ಮುಖಂಡರಾದ ಉಮೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ಗುರುಲಿಂಗಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ಅಸ್ಗರ್‌ ಮುನ್ನ ಡಾ.ಎ.ಆರ್‌.ಬಾಬು, ಪಿ.ಮರಿಸ್ವಾಮಿ, ಎಂ.ರಾಮಚಂದ್ರ, ಪಿ.ರಾಜಣ್ಣ, ಎಪಿಎಂಸಿ ಅಧ್ಯಕ್ಷ ಮನೋಜ್‌ಪಟೇಲ್‌, ಮಾಜಿ ಅಧ್ಯಕ್ಷ ಡಿ. ನಾಗೇಂದ್ರ, ಗುರುಸ್ವಾಮಿ, ಇದ್ದರು.

ನಮ್ಮೂರಲ್ಲಿ ಮಾತಾಡುವುದು ಹೆಚ್ಚು ಖುಷಿ ಕೊಡುತ್ತದೆ
ಚಾಮರಾಜನಗರ ನಮ್ಮ ಹುಟ್ಟೂರು. ಇಲ್ಲಿಗೆ ಬಂದರೆ ನಮಗೆ ಬಹಳ ಸಂತೋಷವಾಗುತ್ತದೆ. ನಾನು ಎಲ್ಲೆಲ್ಲೋ ವೇದಿಕೆಯಲ್ಲಿ ಮಾತನಾಡಬಹುದು. ಆದರೆ, ನಮ್ಮೂರಿನ ವೇದಿಕೆಯಲ್ಲಿ ನಿಂತು ಮಾತನಾಡುತ್ತಿರುವುದು ನನಗೆ ಹೆಚ್ಚು ಖುಷಿ ಕೊಡುತ್ತದೆ. ಅಪ್ಪಾಜಿ ಅವರ ಹೆಸರಿನಲ್ಲಿರುವ ಡಾ. ರಾಜಕುಮಾರ್‌ ರಂಗಮಂದಿರದಲ್ಲಿ ದಕ್ಷ ಯಜ್ಞ ನಾಟಕವನ್ನು ಉದ್ಘಾಟನೆ ಮಾಡಿದ್ದು ನನ್ನ ಪುಣ್ಯ. ಕರುನಾಡಿನ ಕಲಾಪ್ರೇಮಿಗಳು ನಮ್ಮ ಕುಟುಂಬವನ್ನು ಬೆಳೆಸಿದ್ದಾರೆ. ಅವರಿಗೆ ನಮ್ಮ ಜನ್ಮ ಇರುವವರಿಗೆ ಋಣ ತಿಳಿಸಲು ಸಾಧ್ಯವಿಲ್ಲ. ಅಪ್ಪು ಭಾವಚಿತ್ರಕ್ಕೆ ನಾನು ಹೂವು ಹಾಕಲಿಲ್ಲ. ಕಾರಣ ಅವನು ನನ್ನ ತಮ್ಮ. ತಮ್ಮ ನನಗೆ ಹೂವು ಹಾಕಬೇಕಾಗಿತ್ತು ಎಂದು ಭಾವುಕರಾದರು. ತನ್ನ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಅಪ್ಪು ಅನೇಕ ಸಂದೇಶ ಬಿಟ್ಟು ಹೋಗಿದ್ದಾನೆ. ಕಾಡು ಉಳಿಸಿ, ಕಾಡಿನಲ್ಲಿ ಪ್ಲಾಸ್ಟಿಕ್‌ ಬಳಸಬೇಡಿ. ನೀರನ್ನು ವ್ಯರ್ಥ ಮಾಡಬೇಡಿ ಎಂಬ ಸಂದೇಶಗಳನ್ನು ನೀಡಿದ್ದಾನೆ. ಇವುಗಳನ್ನು ಪಾಲಿಸುವುದು ಅವನಿಗೆ ನಾವು ನೀಡುವ ಗೌರವ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next