Advertisement

ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ: ಕುಲಕರ್ಣಿ

11:53 AM Jan 18, 2022 | Team Udayavani |

ಜೇವರ್ಗಿ: ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ಸಂವಿಧಾನಾತ್ಮಕ ಹಕ್ಕುಗಳು, ಕರ್ತವ್ಯಗಳು, ವ್ಯಕ್ತಿಯ ದೈನಂದಿನ ಸುಗಮ ಬದುಕಿಗೆ ಬೇಕಾದ ಕನಿಷ್ಠ ಕಾನೂನಿನ ಜ್ಞಾನವನ್ನು ಹೊಂದಿರಬೇಕು. ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗಿ, ಶಾಂತಿಯುತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹಿರಿಯ ನ್ಯಾಯವಾದಿ ಪ್ರಾಣೇಶ ಪಿ.ಕುಲಕರ್ಣಿ ಅಭಿಮತ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಸವೇಶ್ವ‌ರ ವೃತ್ತದ ಸಮೀಪವಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ನೆಸ್ಸೆಸ್‌ ಘಟಕದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ “ಕಾನೂನು ಅರಿವು ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ರಚನೆಯಾಗಿರುವುದು ವ್ಯಕ್ತಿ ಹಾಗೂ ದೇಶದ ರಕ್ಷಣೆಗಾಗಿ. ಇದರ ಉಲ್ಲಂಘನೆ ಸಲ್ಲದು. ಹಕ್ಕುಗಳ ಜೊತೆಗೆ ಕರ್ತವ್ಯಗಳಿವೆ ಎಂಬುದನ್ನು ಮರೆಯಬಾರದು. ಬಾಲ್ಯವಿವಾಹ ಅಪರಾಧವಾಗಿದ್ದು, ಇದರಿಂದ ಮಗು ಶಿಕ್ಷಣ ವಂಚಿತವಾಗಿ ಜೀವನದಲ್ಲಿ ತೊಂದರೆಗೆ ಒಳಗಾಗುತ್ತದೆ ಎಂದರು.

ಹಿರಿಯರು ಮತ್ತು ಮಹಿಳೆಯರ ರಕ್ಷಣೆ ಮಾಡಬೇಕು. ಬಾಲ್ಯ ದೌರ್ಜನ್ಯ ಸಲ್ಲದು. ವರದಕ್ಷಿಣೆ ಪಡೆಯಬಾರದು. ಬಾಲ ಕಾರ್ಮಿಕ ಪದ್ಧತಿ ಆಚರಿಸಕೂಡದು. ಸಂಚಾರಿ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಜನನ ಮತ್ತು ಮರಣದ ನೋಂದಣಿ ಮಾಡಿಸಿ, ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂದು ಅನೇಕ ಕಾಯ್ದೆ-ಕಾನೂನುಗಳನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ನ್ಯಾಯವಾದಿ ಶಿವಾನಂದ ಬಿ.ಕುಂಟೋಜಿಮಠ ಮಾತನಾಡಿ, ಬಸವಾದಿ ಶರಣರ ವಚನಗಳು ಸಂವಿಧಾನ ಮತ್ತು ಕಾನೂನಿಗೆ ಪೂರಕವಾಗಿವೆ. ಕಾನೂನು ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ನಿರ್ಲಕ್ಷ ವಹಿಸಿ ಬೇಜವಬ್ದಾರಿ ತೋರಿಸಬಾರದು. ವಿದ್ಯಾರ್ಥಿ ದೆಸೆಯಿಂದಲೇ ಸಾಮಾನ್ಯ ಕಾನೂನಿನ ತಿಳಿಕೊಳ್ಳುವುದು ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ರಕ್ಷಣೆ ಮಾಡುವ ಮೂಲಕ ಆದರ್ಶ ನಾಗರಿಕರಾಗಬೇಕು ಎಂದು ಹೇಳಿದರು.

Advertisement

ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್‌ ಅಲ್ಲಾ ಉದ್ದೀನ್‌ ಸಾಗರ, ಎನ್ನೆಸ್ಸೆಸ್‌ ಅಧಿ ಕಾರಿ ಎಚ್‌.ಬಿ. ಪಾಟೀಲ, ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್‌, ಶರಣಮ್ಮ ಭಾವಿಕಟ್ಟಿ, ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್‌, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ನೇಸರ ಬೀಳಗಿ, ರಂಜಿತಾ ಠಾಕೂರ್‌, ಲಾಡ್ಲೆಮಶಾಕ್‌, ಕರೀಮ್‌, ಬಸವರಾಜ, ಹುಲೆಪ್ಪ, ಐಶ್ವರ್ಯ, ಪಾರ್ವತಿ, ಶಿವಲೀಲಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next