Advertisement

ಎಲ್ಲರೂ ಪಿಂಕಿಯ ಹಾಗೆ !

03:45 AM Jun 23, 2017 | |

ಪಿಂಕಿ ಒಂದೇ ಸಮನೆ ಅಳುತ್ತಿದ್ದಾಳೆ.  ಅವಳ ಅಮ್ಮ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾಳೆ. “ಏಕೆ, ಏನಾಯಿತು’ ಎಂದು ವಿಚಾರಿಸಿದರೆ ಪಕ್ಕದ ಮನೆಯ ಗೆಳತಿ ಸಹನಾಳ ಕೆಂಪು ಟೆಡ್ಡಿಬೇರ್‌ ಗೊಂಬೆಯೇ ಬೇಕೆಂದು ಪಿಂಕಿಯ ಹಟ. ಪಿಂಕಿಯ ಸುತ್ತಲೂ ವಿವಿಧ ಆಟದ ಸಾಮಾನುಗಳ ರಾಶಿ ಬಿದ್ದಿದೆ.  ಆದರೆ, ಅವಳಿಗೆ ಗೆಳತಿಯ ಗೊಂಬೆಯೇ ಬೇಕು. 

Advertisement

ಮನೆಗೆ ಬಂದ ನಂತರವೂ ಇದೇ ವಿಷಯ ಮನದಲ್ಲಿ ಕೊರೆಯುತ್ತಿತ್ತು.  ಪಿಂಕಿ 2-3 ವರ್ಷದ ಹುಡುಗಿ. ತನ್ನ ಬಳಿ ಎಷ್ಟೇ ಆಟದ ಸಾಮಾನುಗಳಿದ್ದರೂ ಅವಳಿಗೆ ಸಹನಾಳ ಗೊಂಬೆಯ ಮೇಲೇ ಕಣ್ಣು.  ಅವಳಿಗಷ್ಟೇ ಅಲ್ಲ, ಇತರರ ವಸ್ತುಗಳಿಗಾಗಿ ಹಂಬಲಿಸುವುದು ಮಾನವ ಸಹಜ ಗುಣ.  ಸಣ್ಣ ವಯಸ್ಸಿನಲ್ಲಿ ಪ್ರಾರಂಭವಾಗುವ ಈ ಹಂಬಲಗಳು ಕಡೆಯವರೆಗೂ ಸಾಗುತ್ತಲೇ ಇರುತ್ತದೆ.  ಸಣ್ಣ ಮಕ್ಕಳಿದ್ದಾಗ ಗೊಂಬೆಗಳಾದರೆ ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ ಸಹಪಾಠಿಗಳ ಪೆನ್ಸಿಲ್‌ ಬಾಕ್ಸ್‌, ಸ್ಕೂಲ್‌ ಬ್ಯಾಗ್‌ಗಳ ಮೇಲೆ ಕಣ್ಣು.  ಮನೆಯಲ್ಲಿ ತನಗೂ ಅಂತಹುದೇ ಬೇಕೆಂಬ ಬೇಡಿಕೆ.  ಸ್ವಲ್ಪ ದೊಡ್ಡವರಾದ ನಂತರ ಗೆಳೆಯರು ಧರಿಸುವ ರೀತಿಯ ಉಡುಗೆ-ತೊಡುಗೆಗಳ  ಬಯಕೆ. ಮುಂದೆ ಸ್ಕೂಟಿ ಬೈಕ್‌ಗಳಿಗಾಗಿ ಅಪ್ಲಿಕೇಶನ್‌ಗಳು.  ಗೆಳೆಯರ ಬಳಿಯಿರುವಂತಹ ಲ್ಯಾಪ್‌ಟಾಪ್‌, ಮೊಬೈಲ್‌ಗ‌ಳಿಗಾಗಿ ದುಂಬಾಲು. ತಮ್ಮ ಬಳಿ ಕಪಾಟಿನ ತುಂಬ ಸೀರೆಗಳಿದ್ದರೂ ಆಫೀಸಿನಲ್ಲಿ ಎದುರಿಗೆ ಕುಳಿತುಕೊಳ್ಳುವ ಸಹೋದ್ಯೋಗಿ ಉಡುವ ಸೀರೆಗಳೇ ಚೆಂದ.  ತನಗೂ ಅಂತಹುದೇ ಬೇಕೆಂಬ ಬಯಕೆ.  ಸಹೋದ್ಯೋಗಿಗೆ ಬಡ್ತಿ ಬಂದರೆ ಮನದಲ್ಲಿ ಅಸೂಯೆ ತಾನಾಗೆ ಹುಟ್ಟುತ್ತದೆ. ಅವನಿಗಿಂತ ನಾನೇನು ಕಡಿಮೆ ಅವನಿಗೆ ಸಿಕ್ಕ ಬಡ್ತಿ ನನಗೇಕೆ ಸಿಗಲಿಲ್ಲ ಎಂಬ ಹತಾಶಭಾವ. ಇನ್ನು ಹೆಣ್ಣುಮಕ್ಕಳಿಗಂತೂ ತಾನೇ ಎಲ್ಲರ ನಡುವೆ ಆಕರ್ಷಣೆಯ ಕೇಂದ್ರವಾಗಿರಬೇಕೆಂಬ ಬಯಕೆ. ಮತ್ತೂಬ್ಬರಿಗೆ ಹೊಗಳಿಕೆ ಸಿಕ್ಕ ಕೂಡಲೇ ಅವರ ಮೇಲೆ ಮತ್ಸರ. 

ಇಷ್ಟೇ ಏಕೆ, ಇಷ್ಟಪಟ್ಟು ಮದುವೆಯಾದ ಮಡದಿಯನ್ನು ಕೂಡ ಪಕ್ಕದ ಮನೆಯಾಕೆಗೆ ಹೋಲಿಸಿದರೆ ದೋಷಗಳು ಕಂಡುಬರುತ್ತವೆ.  “ಅವರನ್ನು ನೋಡು, ಯಾವಾಗಲೂ ನಗುನಗುತ್ತ ಇರುತ್ತಾರೆ.  ನೀನೇಕೆ ಹಾಗಿರಬಾರದು’ ಎಂಬ ಮಾತುಗಳು ಕೇಳಿಬರುತ್ತವೆ.  ಅವಳಲ್ಲಿರುವ ಒಳ್ಳೆಯ ಗುಣಗಳು ಗೌಣವಾಗಿ ಪಕ್ಕದ ಮನೆಯವಳ ನಗು ಆಕರ್ಷಕವಾಗಿ ಕಾಣುತ್ತದೆ.  ಆದರೆ ಅವರಿಗೇನು ಗೊತ್ತು ದೂರದ ಬೆಟ್ಟ ನುಣ್ಣಗೆ ಎಂದು.  ಇನ್ನು ಮಹಿಳೆಯರಿಗೂ ಅಷ್ಟೇ, ತನ್ನ ಗಂಡ ವಜ್ರದ ಹಾರ ಮಾಡಿಸಿಕೊಟ್ಟರೂ ಸಹ ಪಕ್ಕದ ಮನೆಯಾತ ಹೆಂಡತಿಗೆಂದು ತಂದ ಒಂದು ಮೊಳ ಮಲ್ಲಿಗೆ ಹೂ ಆಕರ್ಷಕ ವಾಗಿ ಕಾಣುತ್ತದೆ.  ತನ್ನ ಗಂಡ ತನಗಾಗಿ ಹೂ ತರುವುದಿಲ್ಲ ಎಂಬ ದೂರು ಖಾಯಮ್ಮಾಗಿ ಇರುತ್ತದೆ.  
ಈ ಹೋಲಿಕೆಗಳು ಅಕ್ಕಪಕ್ಕದವರು, ಸಹೋದ್ಯೋಗಿಗಳು, ಸಹಪಾಠಿಗಳಿಗೇ ಮೀಸಲಾಗದೆ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರಲ್ಲೂ ಕೂಡ ಹುಟ್ಟಿಕೊಳ್ಳುತ್ತದೆ.  ಅಣ್ಣ/ತಮ್ಮನ ಮಕ್ಕಳು ವಿದೇಶಕ್ಕೆ ಹೋದರೆ ತಮ್ಮ ಮಕ್ಕಳನ್ನೂ ಏನೇ ಕಷ್ಟವಾಗಲಿ ಕಳುಹಿ ಸಬೇಕೆಂಬ ಹಠ.  ಒಬ್ಬರು ಮದುವೆಯನ್ನು ಆಡಂಬರದಿಂದ ಮಾಡಿದರೆಂದರೆ ತಾನೂ ಹಾಗೇ ಮಾಡಬೇಕೆಂಬ ಛಲ.  ಒಡಹುಟ್ಟಿದವರೇ ಆದರೂ ತಮಗಿಂತ ಆರ್ಥಿಕವಾಗಿ ಮೇಲಿದ್ದರೆ ಏನೋ ಅಸೂಯೆ. ಆಸ್ತಿ ಹಂಚಿಕೆಯಲ್ಲಿ ಉತ್ತಮ ವಾದು ದೆಲ್ಲವೂ ತನಗೇ ಬೇಕೆಂಬ ಹಂಬಲ. ತನ್ನ ಬಳಿ ಎಲ್ಲ ಸೌಕರ್ಯ ಗಳಿದ್ದರೂ, ಸಿಗುವುದೆಲ್ಲ ಸಿಗಲಿ ಎಂಬ ಮನೋಭಾವ.  ಎಷ್ಟೋ ಬಾರಿ ಈ ರೀತಿಯ ಕಾಮನೆಗಳು/ ಬೇಡಿಕೆಗಳು ಈಡೇರದಿದ್ದಾಗ ಇತರರ ಮೇಲೆ ಈಷ್ಯೆì ಹುಟ್ಟಿ ಅದು ಎಷ್ಟೋ ಬಾರಿ ದ್ವೇಷಕ್ಕೆ ಪರಿವರ್ತನೆಯಾಗಿರುವ ನಿದರ್ಶನಗಳೂ ಇವೆ.

ನಮ್ಮ ಹಿರಿಯರು ಬಹಳ ಮೇಧಾವಿಗಳು.  ಪುರಾಣ, ಕಥೆಗಳನ್ನು ಆಧಾರ ಮಾಡಿಕೊಂಡು ನಿದರ್ಶನಗಳ ಮೂಲಕ ಮಾನವನ ಈ ಗುಣಕ್ಕೇ ಕಡಿವಾಣ ಹಾಕಲು ಪ್ರಯತ್ನಿಸಿದರು. ಅಹಲೆಗಾಗಿ ಆಸೆಪಟ್ಟ ಇಂದ್ರ ಅನುಭವಿಸಬೇಕಾಗಿ ಬಂದ ಶಾಪ, ಸೀತೆಯನ್ನು ಅಪಹರಿಸಿಕೊಂಡು ಹೋದ ರಾವಣನಿಗೆ ಬಂದ ಗತಿ, ಪಾಂಡವರ ರಾಜ್ಯಕ್ಕೆ ಆಸೆ ಪಟ್ಟ ದುರ್ಯೋಧನ ಸಾವನ್ನಪ್ಪಿದ ರೀತಿ ಇವುಗಳನ್ನು ಉದಾಹರಿಸಿ ಅತಿಯಾದ ಆಸೆ ಪಡುವುದು ತಪ್ಪು ಎಂದು ಮನದಟ್ಟು ಮಾಡಲು ಪ್ರಯತ್ನಿಸಿದರು.  ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದರೆ ಇಂತಹ ಅನೇಕ ನಿದರ್ಶನಗಳು ಕಂಡುಬರುತ್ತವೆ.

ಮಾನವನ ಆಸೆ, ಆಕಾಂಕ್ಷೆಗಳಿಗೆ ಮಿತಿಯೇ ಇಲ್ಲ. ನಮ್ಮ ಅಗತ್ಯ, ಆದಾಯಗಳಿಗೆ ತಕ್ಕಂತೆ ಆಸೆಗಳಿಗೆ ಸೀಮಾರೇಖೆಯನ್ನು ಹಾಕಿಕೊಳ್ಳುವುದು ನಮ್ಮ ಕರ್ತವ್ಯ. “ಹಾಸಿಗೆ ಯಿದ್ದಷ್ಟು ಕಾಲು ಚಾಚು’ ಎಂಬ ಗಾದೆಯ ಮರ್ಮವನ್ನು ಅರಿತು ಅಳವಡಿಸಿಕೊಂಡು ಬಾಳಿದರೆ ಜೀವನ ಸುಖಮಯವಾಗುವುದರಲ್ಲಿ ಸಂಶಯವೇ ಇಲ್ಲ. ಮನೆಯಲ್ಲಿ ಹಿರಿಯರು ಸಂಸಾರದ ಆದಾಯ, ಖರ್ಚುಗಳನ್ನು ಮಕ್ಕಳಿಗೆ ಪರಿಚಯ ಮಾಡಿಸುತ್ತ, ಆಸೆಯನ್ನು ಬಿಟ್ಟು ಅಗತ್ಯಗಳಿಗೆ ಮಾತ್ರ ಆದ್ಯತೆ ಕೊಡುವುದನ್ನು ಕಲಿಸಿದರೆ ಮುಂದೆ ಮಕ್ಕಳ ಬಾಳು ಸಹ ಹಸನಾಗುತ್ತದೆ. ಈ ನಿಟ್ಟಿನ ಪ್ರಯತ್ನ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಾಯಕವಾಗಬಹುದಲ್ಲವೆ?

Advertisement

ಕವಿ ಗೋಪಾಲಕೃಷ್ಣ ಅಡಿಗರ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ಎಂಬ ಕವಿತೆಯ ಸಾಲು ನೆನಪಾಗುತ್ತಿದೆ.

– ಇಂದಿರಾ ವಿವೇಕ್‌

Advertisement

Udayavani is now on Telegram. Click here to join our channel and stay updated with the latest news.

Next